- ಜಿಲ್ಲಾಡಳಿತ ಕಚೇರಿಯಲ್ಲಿ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರುವಾಗಿದ್ದು, ಸಂಸ್ಥೆಗಳ ಶಕ್ತಿಯನ್ನು ಕುಗ್ಗಿಸುತ್ತದೆ. ಜನರ ವಿಶ್ವಾಸ ಹಾಳುಮಾಡುವುದಲ್ಲದೇ, ನ್ಯಾಯದ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ. ವೇಲಾ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ ಮತ್ತು ಲೋಕಯುಕ್ತಾ ಘಟಕ ಸಹಯೋಗದಲ್ಲಿ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಕೇವಲ ಭ್ರಷ್ಟಾಚಾರ ವಿರೋಧ ಕ್ರಮಗಳ ವಿಷಯವಲ್ಲ. ಅದು ಪ್ರತಿಯೊಬ್ಬ ಅಧಿಕಾರಿಯ ನೈತಿಕ ಬದ್ಧತೆಯ ವಿಷಯ. ಗ್ರಾಮ ಪಂಚಾಯಿತಿ ಮಟ್ಟದಿಂದ ಆರಂಭವಾದ ಭ್ರಷ್ಟಾಚಾರವೂ ತಹಸೀಲ್ದಾರ್ ಕಚೇರಿ, ಪೊಲೀಸ್ ಇಲಾಖೆ ಹೀಗೆ ವಿವಿಧ ಇಲಾಖೆಗಳ ಕಚೇರಿಗಳಿಂದ ಹಿಡಿದು ಉಪ ಆಯುಕ್ತರ ಕಚೇರಿವರೆಗೂ ತಲುಪಬಹುದು. ಯಾವುದೇ ಅಧಿಕಾರಿ ಒಂದು ಸಣ್ಣ ಪ್ರಮಾಣದ ಕರ್ತವ್ಯ ಸರಿಯಾದ ರೀತಿಯಲ್ಲಿ ಮಾಡದಿದ್ದಲ್ಲಿ, ಅಂತಹ ಕೃತ್ಯವು ಜನರ ಮನಸಲ್ಲಿ ಬಹುದೊಡ್ಡ ಪರಿಣಾಮ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿ ನಾಗರೀಕನಿಗೂ ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ವಿಳಂಬ ಮಾಡದೇ, ಅಕ್ರಮವಾದ ಬೇಡಿಕೆಗಳಿಲ್ಲದೇ ಸೇವೆ ಪಡೆಯುವ ಹಕ್ಕಿದೆ. ಆದ್ದರಿಂದ ಅಧಿಕಾರಿಗಳು ತಮ್ಮ ಹಕ್ಕುಗಳನ್ನು ಮಾರಿಕೊಂಡು ಅವರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ಕೆಲಸಗಳ ಚಾಕಚಕ್ಯತೆಯಿಂದ ಮುಗಿಸಿ:ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಯಾವುದೇ ಇಲಾಖೆ ಅಧಿಕಾರಿಗಳು ಅವತ್ತಿನ ಕೆಲಸ ಅವತ್ತೇ ಮುಗಿಸುವ ಪ್ರಯತ್ನ ಮಾಡಬೇಕು. ಅದಕ್ಕೆ ಸರ್ಕಾರದ ಅಧೀನದಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬರೂ ಕಟಿಬದ್ಧರಾಗಿರಬೇಕು. ಇದರಿಂದ ಕೆಲಸಗಳು ತಂತಾನೆ ಪ್ರಗತಿ ಕಾಣುತ್ತವೆ. ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಹಾರಿಕೆಯ ಉತ್ತರ ನೀಡಿ, ಸರ್ವಾಧಿಕಾರಿಗಂತೆ ವರ್ತಿಸಬಾರದು. ಅವರೊಂದಿಗೆ ಸೌಮ್ಯ, ಸೌಜನ್ಯದಿಂದ ವರ್ತಿಸಬೇಕು. ಜನಪ್ರತಿನಿಧಿಗಳು, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹೀಗೆ ಎಲ್ಲರನ್ನೂ ಒಳಗೊಂಡ ಪ್ರಜಾಪ್ರಭುತ್ವವೇ ಆಡಳಿತ. ಎಲ್ಲರೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದಲ್ಲಿ ಯಾವುದೇ ತಪ್ಪುಗಳು ಆಗುವುದಿಲ್ಲ. ಈ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಸಿಗಲಿದೆ ಎಂದರು.
ಲೋಕಾಯುಕ್ತ ಪೊಲೀಸರು ಅಧೀಕ್ಷಕ ಎಂ.ಎಸ್.ಕೌಲಾಪುರೆ ಪ್ರತಿಜ್ಞಾವಿಧಿ ಬೋಧಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.- - -
-28ಕೆಡಿವಿಜಿ35:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ನ್ಯಾಯಾಧೀಶೆ ಡಿ.ಕೆ.ವೇಲಾ ಉದ್ಘಾಟಿಸಿದರು.