ದುಬೈನ ಕನ್ನಡ ಮಿತ್ರರು ಸಂಘಕ್ಕೆ ಅಂ.ರಾ. ಪುರಸ್ಕಾರ

KannadaprabhaNewsNetwork |  
Published : Oct 29, 2025, 01:15 AM IST
ಕನ್ನಡ ಪಾಠ ಶಾಲೆ ದುಬೈ | Kannada Prabha

ಸಾರಾಂಶ

ಹೊರದೇಶದಲ್ಲಿರುವ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತ್ತಿರುವ, ಕನ್ನಡ ಮಿತ್ರರು ಸಂಘಟನೆಯ ‘ಕನ್ನಡ ಪಾಠ ಶಾಲೆ ದುಬೈ’ ಗೆ ಅಂತಾರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

ದುಬೈ: ಹೋರದೇಶದಲ್ಲಿರುವ ಮಕ್ಕಳಿಗೆ ಉಚಿತವಾಗಿ ಕನ್ನಡ ಕಲಿಸುತ್ತಿರುವ, ಕನ್ನಡ ಮಿತ್ರರು ಸಂಘಟನೆಯ ‘ಕನ್ನಡ ಪಾಠ ಶಾಲೆ ದುಬೈ’ ಗೆ ಅಂತಾರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

ಇತ್ತೀಚೆಗೆ ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಯುಎಇ ಘಟಕ ಮತ್ತು ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ದುಬೈನ ಗ್ಲೆಂಡೆಲ್ ಇಂಟರ್‌ನ್ಯಾಷನಲ್‌ ಸ್ಕೂಲ್‌ ಸಭಾಂಗಣದಲ್ಲಿ ನಡೆದ ದುಬೈ ಗಡಿನಾಡ ಉತ್ಸವ-2025 ಕಾರ್ಯಕ್ರಮದಲ್ಲಿ ‘ಕನ್ನಡ ಪಾಠ ಶಾಲೆ ದುಬೈ’ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಶಿಧರ್ ಅವರು ಅನಿವಾಸಿ ಯುವ ಪೀಳಿಗೆಗಾಗಿ ಕನ್ನಡ ಸಾಕ್ಷರತೆಯನ್ನು ಸಾರುವ ಕನ್ನಡ ಸಾಕ್ಷರತೆಯ ಮಹಾ ಅಭಿಯಾನವನ್ನು ಆರಂಭಿಸಿದ್ದು, ಜಾಗತಿಕ ಕನ್ನಡ ಕಲಿಕಾ ಚಳವಳಿಯ ಹರಿಕಾರ ಎಂದು ಪ್ರಖ್ಯಾತರಾಗಿದ್ದು, ಇವರ ನೇತೃತ್ವದ ಶಾಲೆಯಲ್ಲಿ 1200 ಮಕ್ಕಳು ಉಚಿತ ಕನ್ನಡ ಭಾಷಾ ಶಿಕ್ಷಣ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಶಿಧರ್ ಅವರ ಜತೆಗೆ ‘ಕನ್ನಡ ಪಾಠ ಶಾಲೆ ದುಬೈ’ ಆಡಳಿತ ಮಂಡಳಿ ಉಪಾಧ್ಯಕ್ಷ ಸಿದ್ಧಲಿಂಗೇಶ್ ರೇವಪ್ಪ, ಕಾರ್ಯದರ್ಶಿ ಸುನೀಲ್ ಗವಾಸ್ಕರ್, ಮುಖ್ಯ ಸಂಚಾಲಕಿ ರೂಪಾ ಶಶಿಧರ್ ಮತ್ತು ಖಜಾಂಚಿ ನಾಗರಾಜ್ ರಾವ್ ಅವರಿಗೆ ಕನ್ನಡ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹೆಲ್ತ್ ಕೌನ್ಸಿಲ್‌ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಕೇರಳದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರದ ಶಾಸಕ ಎ.ಕೆ.ಎಂ.ಅಶ್ರಪ್, ಗಣ್ಯರಾದ ಸುಬ್ಬಯ್ಯ ಕಟ್ಟೆ, ಅಮರದೀಪ ಕಲ್ಲೂರಾಯ, ಉದ್ಯಮಿ ರೊನಾಲ್ಡ್ ಮಾರ್ಟಿಸ್ ಉಪಸ್ಥಿತರಿದ್ದರು.

ಅತೀ ದೊಡ್ಡ ಹೊರನಾಡ ಕನ್ನಡ ಶಾಲೆ:

ದುಬೈನಲ್ಲಿರುವ ಕನ್ನಡ ಮಿತ್ರರು ಯುಎಇ ಸಂಘದ ‘ಕನ್ನಡ ಪಾಠ ಶಾಲೆ ದುಬೈ’ ಶಾಲೆಯಲ್ಲಿ 2014 ರಿಂದ ಅನಿವಾಸಿ ಭಾರತೀಯ ಮಕ್ಕಳಿಗೆ ಕನ್ನಡ ಬೋಧನೆಯನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಈ ಶಾಲೆಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನ್ನಣೆ ದೊರತಿದೆ. ಶಶಿಧರ್ ನಾಗರಾಜಪ್ಪ ಅವರ ನೇತೃತ್ವದ ಈ ಶಾಲೆಯಲ್ಲಿ 20 ಶಿಕ್ಷಕಿಯರು ಮತ್ತು 100 ಸ್ವಯಂಸೇವಕರು ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದುಬೈನ ಕನ್ನಡ ಪಾಠ ಶಾಲೆಯಲ್ಲಿ ಪ್ರಸ್ತುತ 1200 ಮಕ್ಕಳು ಉಚಿತ ಕನ್ನಡ ಭಾಷಾ ಶಿಕ್ಷಣ ಪಡೆಯುತ್ತಿದ್ದು, ಇದು ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದ್ದಲದ ನಡುವೆ, ಚರ್ಚೆಯೇ ಇಲ್ಲದೆ ದ್ವೇಷ ಭಾಷಣ ತಡೆ ಮಸೂದೆ ಪಾಸ್‌
ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!