ಯುವ ಸಂಸತ್‌ ಸ್ಪರ್ಧೆ ಅರ್ಥಪೂರ್ಣ ಕಾರ್ಯಕ್ರಮ

KannadaprabhaNewsNetwork |  
Published : Oct 29, 2025, 01:15 AM IST
ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲಾ ಮಕ್ಕಳ 2025ನೇ ಸಾಲಿನ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಜಿ.ಪಂ. ಉಪ ಕಾರ್ಯದರ್ಶಿ ಕೆ.ಆರ್. ಸುಜಾತ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂಸತ್ತಿನಲ್ಲಾಗುವ ಚರ್ಚೆ, ವಿಷಯ ಮಂಡನೆ ಹಾಗೂ ಅಲ್ಲಿನ ನೀತಿ ನಿಯಮವನ್ನು ಯುವಕರಿಗೆ ತಿಳಿಸಲು ಯುವ ಸಂಸತ್ ಸ್ಪರ್ಧೆ ಸಹಕಾರಿಯಾಗಿದೆ ಎಂದು ಜಿ.ಪಂ.ಉಪ ಕಾರ್ಯದರ್ಶಿ ಕೆ.ಆರ್.ಸುಜಾತ ತಿಳಿಸಿದರು.

ಶಿವಮೊಗ್ಗ: ಸಂಸತ್ತಿನಲ್ಲಾಗುವ ಚರ್ಚೆ, ವಿಷಯ ಮಂಡನೆ ಹಾಗೂ ಅಲ್ಲಿನ ನೀತಿ ನಿಯಮವನ್ನು ಯುವಕರಿಗೆ ತಿಳಿಸಲು ಯುವ ಸಂಸತ್ ಸ್ಪರ್ಧೆ ಸಹಕಾರಿಯಾಗಿದೆ ಎಂದು ಜಿ.ಪಂ.ಉಪ ಕಾರ್ಯದರ್ಶಿ ಕೆ.ಆರ್.ಸುಜಾತ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸರ್ಕಾರಿ ಪ್ರೌಢಶಾಲಾ ಮಕ್ಕಳ 2025ನೇ ಸಾಲಿನ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಸಂಸತ್ ಅರ್ಥಪೂರ್ಣ ಮತ್ತು ಆಸಕ್ತಿದಾಯಕ ಕಾರ್ಯಕ್ರಮವಾಗಿದ್ದು, ನಮ್ಮ ಜನಪ್ರತಿನಿಧಿಗಳು ಸಂಸತ್‌ನಲ್ಲಿ ಹೇಗೆ ಕಾರ್ಯಕಲಾಪಗಳನ್ನು ಮಾಡುತ್ತಾರೆ. ಅಲ್ಲಿ ಯಾವ ವಿಷಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ಸಂಸತ್ತಿನ ಅಧ್ಯಕ್ಷರಾದ ಸ್ವೀಕರ್‌ನ ಕರ್ತವ್ಯವೇನು ಎಂಬುದು ವಿದ್ಯಾರ್ಥಿಗಳು ಈ ಯುವ ಸಂಸತ್‌ನಲ್ಲಿ ಭಾಗವಹಿಸುವ ಮೂಲಕ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.

ಸಂಸತ್ತನ್ನು ವೀಕ್ಷಣೆ ಮಾಡುವುದಕ್ಕಿಂತ, ಅದರ ರೂಪುರೇಷೆಗಳನ್ನು ಓದುವುದಕ್ಕಿಂತ ಅದನ್ನು ಅನುಭವಿಸಿ ತಿಳಿಯಬೇಕು. ಆಗ ಮಾತ್ರ ಸಂಸತ್ ಅರ್ಥವಾಗುವುದು. ರಾಜ್ಯದಲ್ಲಿನ ಅಭಿವೃದ್ಧಿ, ತೆರಿಗೆ ಪಾವತಿ ಮತ್ತು ಹಂಚಿಕೆ ಕ್ರಮ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅದರ ಅನುಭವ ಯುವ ಸಂಸತ್ ವಿದ್ಯಾರ್ಥಿಗಳಿಗೆ ನೀಡಲಿದ್ದು, ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ಮೂಲಕ ತಮ್ಮ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎಲ್.ಜ್ಯೋತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಸಂಸತ್ ಒಂದು ವಿಶಿಷ್ಟ ಸ್ಪರ್ಧೆ. ಇದು ನಾಲ್ಕು ಹಂತದಲ್ಲಿ ನಡೆಯುತ್ತದೆ. ತಾಲೂಕು ಹಂತದಲ್ಲಿ ಗೆದ್ದ ಐದು ವಿದ್ಯಾರ್ಥಿಗಳನ್ನು ಜಿಲ್ಲಾ ಹಂತಕ್ಕೆ, ಜಿಲ್ಲಾ ಹಂತದಲ್ಲಿ ಮೂರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ ನಿರ್ದೇಶಕರ ಕಚೇರಿಯ ವಿಷಯ ಪರೀವೀಕ್ಷಕರು ಜ್ಯೋತಿಕುಮಾರಿ, ಸಂಪನ್ಮೂಲ ಶಿಕ್ಷಕರುಗಳಾದ ಗಂಗಾ ನಾಯಕ್, ಸುರೇಶ್, ಸತೀಶ್ ಕುಮಾರ್, ಹಸನ್‌ಸಾಬ್ ಇದ್ದರು.

ಸಾಗರ ಸುಭಾಷ್ ನಗರದ ಸರ್ಕಾರಿ ಪ್ರೌಢಶಾಲೆಯ ಭೂದೇವಿ ಪ್ರಥಮ, ಹೊಸನಗರದ ಮಸಗಲ್ಲಿಯ ಸರ್ಕಾರಿ ಪ್ರೌಢಶಾಲೆಯ ಕೆ.ಎನ್.ಸ್ಫೂರ್ತಿ ದ್ವಿತೀಯ ಹಾಗೂ ಕೆ.ಪಿ.ಪೂರ್ಣಿಮ ತೃತೀಯ ಬಹುಮಾನಗಳನ್ನು ಪಡೆದು ಶಿವಮೊಗ್ಗ ಜಿಲ್ಲೆಯಿಂದ ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು