ಹರಿಹರ ಅಭಿವೃದ್ಧಿಗೆ ಶ್ರೀನಿವಾಸ ನಂದಿಗಾವಿ ಶ್ರಮ: ವರುಣ್‌

KannadaprabhaNewsNetwork |  
Published : Oct 29, 2025, 01:15 AM IST
27ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎ.ನಾಗರಾಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹರಿಹರದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ನಂದಿಗಾವಿ ಸಿಎಂ ಸೇರಿದಂತೆ ಸಂಬಂಧಿಸಿದ ಸಚಿವರಿಂದ ಅನುದಾನ ತಂದು ಕೆಲಸ ಮಾಡಿಸುತ್ತಿದ್ದಾರೆ. ಅಲ್ಲಿನ ಬಿಜೆಪಿಯಿಂದ ಬಿ.ಪಿ. ಹರೀಶ 2 ಸಲ ಶಾಸಕರಾಗಿ ಏನು ಕೊಡುಗೆ ನೀಡಿದ್ದಾರೆ? ಕ್ಷೇತ್ರಾಭಿವೃದ್ಧಿ ಬಿಟ್ಟು ಕಾಂಗ್ರೆಸ್‌ ನಾಯಕರ ವಿರುದ್ಧ ಅಪಪ್ರಚಾರ ಮುಂದುವರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಎಚ್ಚರಿಸಿದ್ದಾರೆ.

- ಬಿಜೆಪಿ ಶಾಸಕರಿಗಿಂತ ಪರಾಜಿತ ಅಭ್ಯರ್ಥಿಯಿಂದ ಹೆಚ್ಚಿನ ಅಭಿವೃದ್ಧಿ ಕೆಲಸ

- - -

- ಎರಡು ಸಲ ಶಾಸಕರಾದ ಬಿ.ಪಿ. ಹರೀಶ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ?

- ಭೈರನಪಾದ ಯೋಜನೆ ಭೂಮಿ ಪೂಜೆಯಾದರೂ ಕಾಮಗಾರಿ ಯಾಕೆ ಆರಂಭಿಸಿಲ್ಲ?

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರದಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ನಂದಿಗಾವಿ ಸಿಎಂ ಸೇರಿದಂತೆ ಸಂಬಂಧಿಸಿದ ಸಚಿವರಿಂದ ಅನುದಾನ ತಂದು ಕೆಲಸ ಮಾಡಿಸುತ್ತಿದ್ದಾರೆ. ಅಲ್ಲಿನ ಬಿಜೆಪಿಯಿಂದ ಬಿ.ಪಿ. ಹರೀಶ 2 ಸಲ ಶಾಸಕರಾಗಿ ಏನು ಕೊಡುಗೆ ನೀಡಿದ್ದಾರೆ? ಕ್ಷೇತ್ರಾಭಿವೃದ್ಧಿ ಬಿಟ್ಟು ಕಾಂಗ್ರೆಸ್‌ ನಾಯಕರ ವಿರುದ್ಧ ಅಪಪ್ರಚಾರ ಮುಂದುವರಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಶಾಸಕ ಬಿ.ಪಿ.ಹರೀಶ್‌ ಮಾತು ನಾಲ್ಕು ಜನರಿಗೆ ಆದರ್ಶವಾಗುವಂತೆ ಇರಬೇಕು. ಆದರೆ, ಅವರ ನಾಲಿಗೆಗೂ, ಮಿದುಳಿಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹರಿಹರ ಕ್ಷೇತ್ರ ಬಿಟ್ಟು, ದಾವಣಗೆರೆಯಲ್ಲಿ ಟೀ, ಕಾಫಿ ಬಾರ್‌ಗಳ ಮುಂದೆ ಕಾಲಹರಣ ಮಾಡುವ ಶಾಸಕರಾಗಿದ್ದಾರೆ ಎಂದರು.

ನಾಲ್ಕು ದಶಕಗಳಿಂದ ರಾಜಕಾರಣ ಮಾಡುತ್ತಿದ್ದೀಯಲ್ಲ, ಹರಿಹರ ಕ್ಷೇತ್ರಕ್ಕೆ ನಿನ್ನ ಕೊಡುಗೆ ಏನು? ಹರಿಹರದ ಕಿರ್ಲೋಸ್ಕರ್ ಕಾರ್ಖಾನೆ ಮುಚ್ಚಿತು. ಅದಕ್ಕೆ ಪರ್ಯಾಯವಾಗಿ ಬೇರೆ ಕೈಗಾರಿಕೆ ತರುವ ಕೆಲಸ ಯಾಕೆ ಮಾಡಿಲ್ಲ? ಶಾಸಕರಾಗಿ 30 ತಿಂಗಳು ಕಳೆದಿವೆ. ಸಿಎಂ, ಜಿಲ್ಲಾ ಸಚಿವರು, ಸಂಬಂಧಿಸಿದ ಇಲಾಖೆ ಸಚಿವರಿಗೆ ಎಷ್ಟು ಅರ್ಜಿಗಳನ್ನು ನೀಡಿದ್ದೀರಿ? 2008ರಲ್ಲಿ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ, ಚಿತ್ರನಟಿ ಪೂಜಾ ಗಾಂಧಿಗೆ ಹೆಲಿಕಾಫ್ಟರ್‌ನಲ್ಲಿ ಕರೆಸಿ, ಭೂಮಿಪೂಜೆ ಮಾಡಿಸಿದ್ದ ಭೈರನಪಾದ ಏತ ನೀರಾವರಿ ಯೋಜನೆ ಕಾಮಗಾರಿ ಯಾಕೆ ಮುಂದುವರಿಯಲಿಲ್ಲ ಎಂದು ಪ್ರಶ್ನಿಸಿದರು.

ಮರಿಯಮ್ಮನಹಳ್ಳಿ- ಹೊನ್ನಾಳಿ ಹೆದ್ದಾರಿ ವಿಚಾರದಲ್ಲಿ ಕೇಂದ್ರ ಸಚಿವರೆಲ್ಲರ ಪರಿಚಯವಿದ್ದರೂ ಯಾಕೆ ಅನುದಾನ ತಂದು, ಕೆಲಸ ಮಾಡಿಸಲಿಲ್ಲ? ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಬಂಧಿಸಿದ ಸಚಿವರು, ಅಧಿಕಾರಿಗಳನ್ನು ಮೂರು ಸಲ ಭೇಟಿ ಮಾಡಿ, ಕಾಮಗಾರಿಗೆ ಪ್ರಯತ್ನಿಸುತ್ತಿದ್ದಾರೆ. ಹರಿಹರ ನಗರದ ಎಲ್ಐಸಿ ಕಚೇರಿ ರಸ್ತೆಗೆ ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ ನಂತರವೂ ಮತ್ತೆ ನೀವು ಯಾಕೆ ಗುದ್ದಲಿ ಪೂಜೆ ಮಾಡಿದ್ದೀರಿ? ಕಳೆದೊಂದು ತಿಂಗಳಿನಿಂದ ಕಾಮಗಾರಿ ಯಾಕೆ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ ಮಾತನಾಡಿ, ಹರಿಹರ ಶಾಸಕ ಬಿ.ಪಿ.ಹರೀಶ ತಮ್ಮ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ವಿಚಾರ, ಜನಪರ ಕೆಲಸದ ಬಗ್ಗೆ ಮಾತನಾಡಲಿ. ಇನ್ನು ಮುಂದೆ ಶಾಮನೂರು ಕುಟುಂಬದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ ಪಕ್ಷ ತಕ್ಕ ಪಾಠ ಕಲಿಸುತ್ತದೆ. ಅಭಿವೃದ್ಧಿಯ ವಿಚಾರವನ್ನು ನಿಮ್ಮಿಂದ ಕಾಂಗ್ರೆಸ್ ಪಕ್ಷವಾಗಲೀ, ನಮ್ಮ ನಾಯಕರಾಗಲೀ ಕಲಿಯಬೇಕಾಗಿಲ್ಲ ಎಂದು ಹೇಳಿದರು.

ಯುವ ಕಾಂಗ್ರೆಸ್ ಮುಖಂಡರಾದ ಅಲಿ ರಹಮತ್ ಪೈಲ್ವಾನ್, ಮಹಮ್ಮದ್ ಮುಜಾಹಿದ್ ಪಾಷಾ, ಎಸ್.ಕೆ.ಪ್ರವೀಣ ಯಾದವ್‌, ಎಸ್.ರವಿ ಇತರರು ಇದ್ದರು.

- - -

(ಕೋಟ್‌) ದಾವಣಗೆರೆಯಲ್ಲಿ ಹದಡಿ ರಸ್ತೆ ಬಿಟ್ಟು ಯಾವುದೇ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದರೆ ನನಗೆ ವಾಟ್ಸಪ್ ಅಥವಾ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿ ಆಧರಿಸಿ 24 ಗಂಟೆಯಲ್ಲೇ ಸರಿಪಡಿಸಲಾಗುವುದು. ಹದಡಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಬೇಕಿದೆ. ವಿದ್ಯಾರ್ಥಿ ಭವನ ಬಳಿ ಮಾರುತಿ ಟೆಕ್ಸ್‌ಟೈಲ್ ಎದುರು, ಹರ್ಷ ಬಾರ್ ಬಳಿ ಬಾಪೂಜಿ ಆಸ್ಪತ್ರೆ ಕ್ರಾಸ್ ಬಳಿ ಗುಂಡಿ ಬಿದ್ದಿವೆ. ಹೊಸದಾಗಿ ಕಾಮಗಾರಿ ಕೈಗೊಳ್ಳುವಾಗ ಸರಿಪಡಿಸಲಾಗುವುದು.

- ಎ.ನಾಗರಾಜ, ಜಿಲ್ಲಾ ಕಾರ್ಯದರ್ಶಿ, ಕಾಂಗ್ರೆಸ್.

- - -

-27ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎ.ನಾಗರಾಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು