ನ.11ರಂದು ಅರ್ಥಪೂರ್ಣ ಒನಕೆ ಓಬವ್ವ ಜಯಂತಿ ಆಚರಣೆಗೆ

KannadaprabhaNewsNetwork |  
Published : Oct 29, 2025, 01:15 AM IST
ಚಿತ್ರ 2 | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಒನಕೆ ಓಬವ್ವ ಜಯಂತಿ ಆಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೋಟೆನಾಡಿನ ರಕ್ಷಕಿ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ನವೆಂಬರ್ 11ರಂದು ಜಿಲ್ಲಾ ಕೇಂದ್ರದಲ್ಲಿ ಈ ಬಾರಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಒನಕೆ ಓಬವ್ವ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒನಕೆ ಓಬವ್ವ ಜಯಂತಿಯನ್ನು ನ.11 ರಂದು ಬೆಳಗ್ಗೆ 11.30ಕ್ಕೆ ಚಿತ್ರದುರ್ಗ ನಗರದ ವಾಲ್ಮೀಕಿ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜಯಂತಿ ಅಂಗವಾಗಿ ಅಂದು ಬೆಳಗ್ಗೆ 9.30ಕ್ಕೆ ಒನಕೆ ಓಬವ್ವರ ಭಾವಚಿತ್ರದೊಂದಿಗೆ ಅದ್ಧೂರಿ ಮೆರವಣಿಗೆಯನ್ನು ನಗರದ ಕೋಟೆಯ ಮುಂಭಾಗದಿಂದ ಪ್ರಾರಂಬಿಸಲಾಗುವುದು. ಮೆರವಣಿಗೆಯು ಕೋಟೆ ಆವರಣದಿಂದ ಆರಂಭಗೊಂಡು ಗಾಂಧಿವೃತ್ತ, ಪ್ರವಾಸಿ ಮಂದಿರ, ಒನಕೆ ಓಬವ್ವ ಪುತ್ಥಳಿ ಇರುವ ವೃತ್ತ, ಮದಕರಿ ನಾಯಕ ವೃತ್ತದ ಮೂಲಕ ಸಾಗಿ ವಾಲ್ಮೀಕಿ ಭವನದವರೆಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಸಮಾಜದವರ ಆಶಯದಂತೆ ನಟರಾಜ್ ಅವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು. ಅಧಿಕಾರಿಗಳು ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ಜನಪ್ರತಿನಿಧಿಗಳು, ಗಣ್ಯರಿಗೆ ತಲುಪಿಸಿ ಆಹ್ವಾನಿಸಬೇಕು. ಎಲ್ಲ ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯತಿ, ಸ್ಥಳೀಯ ಸಂಸ್ಥೆಗಳಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಆಚರಿಸಬೇಕು. ಎಲ್ಲಾ ಸಂಘ ಸಂಸ್ಥೆಗಳು, ಸಮಾಜದವರು, ನಾಗರಿಕ ಬಂಧುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಸೂಚನೆ ನೀಡಿದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ವೀರವನಿತೆ ಒನಕೆ ಓಬವ್ವನವರ ಧೈರ್ಯ ಸಾಹಸ ಇಡೀ ಜಗತ್ತಿಗೆ ತಿಳಿದಿದೆ. ಒನಕೆ ಓಬವ್ವರನ್ನು ಕೇವಲ ಛಲವಾದಿ ಸಮಾಜಕ್ಕೆ ಮಾತ್ರ ಸೀಮಿತ ಮಾಡುವುದು ಸರಿಯಲ್ಲ. ಕೇವಲ ಒಂದು ಜಾತಿಗೆ ಕಟ್ಟಿಹಾಕುವ ಕೆಲಸ ಆಗಬಾರದು. ಮದಕರಿ ನಾಯಕರ ರಾಜ್ಯಕ್ಕೆ ಜೀವ ಕೊಟ್ಟವರೇ ಒನಕೆ ಓಬವ್ವ. ಹೀಗಾಗಿ ಮದಕರಿ ನಾಯಕ ಜಯಂತಿ ಆಚರಣೆ ಸಂದರ್ಭದಲ್ಲಿ ಒನಕೆ ಓಬವ್ವರನ್ನು ಸ್ಮರಿಸಬೇಕಾದ್ದು ಎಲ್ಲರ ಕರ್ತವ್ಯ. ಎಲ್ಲಾ ಸಮುದಾಯದವರು ಒನಕೆ ಓಬವ್ವ ಜಯಂತಿಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ, ಡಿಡಿಪಿಐ ಮಂಜುನಾಥ್, ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಛಲವಾದಿ ಮಹಾಸಭಾದ ಅಧ್ಯಕ್ಷ ಹೆಚ್. ಶೇಷಣ್ಣ, ಸಮಾಜದ ಮುಖಂಡರುಗಳಾದ ಹೆಚ್.ಸಿ. ನಿರಂಜನಮೂರ್ತಿ, ಎಸ್.ವಿ. ಗುರುಮೂರ್ತಿ, ವೆಂಕಟೇಶ್, ರವಿಕುಮಾರ್ ಪೂಜಾರ್, ದೇವರಾಜ್, ಜಯರಾಂ, ಅಣ್ಣಪ್ಪ, ದಯಾನಂದ್, ಪ್ರಹ್ಲಾದ್, ನವೀನ್, ಧರ್ಮರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು