ಸೋಮರಡ್ಡಿ ಅಳವಂಡಿ
ಕೊಪ್ಪಳ: ಹಿರೇಹಳ್ಳ ಜಲಾಶಯ ಯೋಜನಾ ವ್ಯಾಪ್ತಿ ಮತ್ತು ಪುನರ್ ವಸತಿ ಗ್ರಾಮಗಳ ನಿರ್ಮಾಣದಲ್ಲಿ ಕೋಟ್ಯಂತರ ರುಪಾಯಿ ಅಕ್ರಮ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ನಿವೃತ್ತ ಅಧಿಕಾರಿಗಳು ಸೇರಿದಂತೆ 16 ಅಧಿಕಾರಿಗಳ ವಿರುದ್ಧ ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಾಮಗಾರಿ ಮಾಡದೆ ಬಿಲ್ ಎತ್ತುವಳಿ, ವ್ಯಾಪಕ ಭ್ರಷ್ಟಾಚಾರ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕೆಳಹಂತದ ಅಧಿಕಾರಿಗಳಿಂದ ಹಿಡಿದು ಬಿಲ್ ಪಾವತಿಸುವ ಅಕೌಂಟೆಂಟ್ ವರೆಗೂ ಪಾಲುದಾರರು ಇರುವುದು ತನಿಖೆ ವೇಳೆ ಪತ್ತೆಯಾಗಿದೆ.
ಖಾಸಗಿ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಕಂಡುಬಂದ ಅಕ್ರಮಗಳ ಆಧಾರದ ಮೇಲೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಚಂದ್ರಪ್ಪ ಈಟಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಕೊಪ್ಪಳ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಯಾರ್‍ಯಾರ ಮೇಲೆ ದೂರು?
ಹಿರೇಹಳ್ಳ ವ್ಯಾಪ್ತಿಯ ಮುಳುಗಡೆ ಪ್ರದೇಶದಲ್ಲಿ ಪುನರ್ ವಸತಿ ಗ್ರಾಮಗಳ ನಿರ್ಮಾಣದಲ್ಲಿ ಭಾರಿ ಗೋಲ್‌ಮಾಲ್ ಆಗಿದೆ. ಕಾಮಗಾರಿ ಮಾಡದೆ ಬಿಲ್ ಎತ್ತುವಳಿ ಮಾಡಲಾಗಿದೆ.
ಸಿಂಗಟಾಲೂರು ಏತನೀರಾವರಿ ಯೋಜನೆಯ ಮುಂಡರಗಿ ವಿಭಾಗದ ಇಇ ಆಗಿದ್ದ ಓದುಗಂಗಪ್ಪ (ನಿವೃತ್ತಿ), ಈಗ ಬೆಳಗಾವಿ ಕರ್ನಾಟಕ ನೀರಾವರಿ ನಿಗಮದ ಸಿಇ ಆಗಿರುವ ಬಿ.ಆರ್. ರಾಠೋಡ, ಎಸ್.ಬಿ. ಮಲ್ಲಿಗವಾಡ (ಅಧೀಕ್ಷಕ ಅಭಿಯಂತರರು ಮಲಪ್ರಭಾ ಬಲದಂಡೆ ಕಾಲುವೆ), ಬಿ. ಹನುಮಂತಪ್ಪ (ನಿವೃತ್ತಿ), ಸಿಂಗಟಾಲೂರು ಏತನೀರಾವರಿ ಯೋಜನೆಯ ಮುಂಡರಗಿಯ ಇಇ ಐ. ಪ್ರಕಾಶ, ಈ. ಗಂಗಾಧರ (ನಿವೃತ್ತಿ), ಸಿಂಗಟಾಲೂರು ಏತನೀರಾವರಿ ಯೋಜನೆಯ ಎಇಇಗಳಾದ ಶಾಮಣ್ಣ, ರಾಘವೇಂದ್ರಾಚಾರ್ಯ, ಸುನೀಲ್ ಜೆಇ (ಸಣ್ಣ ನೀರಾವರಿ ಇಲಾಖೆ ಚಿಕ್ಕಬಳ್ಳಾಪುರ), ಬಸವರಾಜ ಬಂಡಿವಡ್ಡರ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಪಿಎಂಸಿ ಗದಗ), ನಂದೀಶ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಂಚಾಯತ್ ರಾಜ್ ಎಂಜಿನಿಯರಿಂಗ್ ಬ್ಯಾಡಗಿ), ಸಿಂಗಟಾಲೂರು ಏತನೀರಾವರಿ ಯೋಜನೆಯ ಅಳವಂಡಿ ಉಪವಿಭಾಗದ ಮನೋಹರ ಪಾಟೀಲ್, ಸಿಂಗಟಾಲೂರು ಏತನೀರಾವರಿ ಅಳವಂಡಿ ಉಪವಿಭಾಗದ ಎಇ ಮಹ್ಮದ್ ಹರ್ಷದ್, ಹಿರೇಹಳ್ಳ ಉಪವಿಭಾಗದ ಎಇ ಪಂಪಾಪತಿ ಹಾಗೂ ಸಂಬಂಧಿತ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿರುವ ಎಲ್ಲರೂ ಸಿಂಗಟಾಲೂರು ಏತನೀರಾವರಿ ಹಿರೇಹಳ್ಳ ಜಲಾಶಯ ವ್ಯಾಪ್ತಿಯಲ್ಲಿ ಕೆಲಸ ಮಾಡಿ, ಬೇರೆಡೆಗೆ ವರ್ಗಾವಣೆಯಾದರೆ, ಕೆಲವರು ನಿವೃತ್ತಿ, ಇನ್ನೂ ಹಲವರು ಈಗಲೂ ಸಿಂಗಟಾಲೂರು ಹಾಗೂ ಹಿರೇಹಳ್ಳ ಯೋಜನಾ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.
ದಾಖಲೆ ಪರಿಶೀಲನೆ:
ಹಿರೇಹಳ್ಳ ವ್ಯಾಪ್ತಿಯ ಕಚೇರಿ, ಸಿಂಗಟಾಲೂರು ಏತನೀರಾವರಿ ಯೋಜನಾ ವ್ಯಾಪ್ತಿಯ ಉಪವಿಭಾಗಗಳು ಹಾಗೂ ಧಾರವಾಡದಲ್ಲಿರುವ ಮುಖ್ಯ ಕಚೇರಿಯಲ್ಲಿಯೂ ಸಹ ಸರ್ಚ್ ವಾರೆಂಟ್ ಆಧರಿಸಿ, ದಾಖಲೆ ಪರಿಶೀಲಿಸಲಾಗುತ್ತಿದೆ.
₹ 5 ಕೋಟಿಗೂ ಅಧಿಕ ಅಕ್ರಮ
ಪ್ರಾಥಮಿಕ ತನಿಖೆಯಲ್ಲಿ ಬರೋಬ್ಬರಿ ₹ 5 ಕೋಟಿಗೂ ಅಧಿಕ ಅಕ್ರಮ ನಡೆದಿರುವುದು ತಿಳಿದು ಬಂದಿದೆ. ತನಿಖೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಿದರೆ ಅಕ್ರಮದ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಬಹುತೇಕ ಕಡೆ ಬೋಗಸ್ ಬಿಲ್ ಸೃಷ್ಟಿಸಿ ಬಿಲ್ ಎತ್ತುವಳಿ ಮಾಡಲಾಗಿದೆ. ದಾಖಲೆಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ, ಅಕ್ರಮ ಮಾಡಿರುವುದು ಗೊತ್ತಾಗಿದೆ. ಇದೆಲ್ಲವೂ ಜಂಟಿ ಕಾರ್ಯಾಚರಣೆಯಂತೆ ನಡೆದಿದ್ದು, ಕಾಮಗಾರಿ ಸ್ಥಳದಿಂದ ಹಿಡಿದು, ಬಿಲ್ ಪಾವತಿಸುವ ಅಧಿಕಾರಿ ವರೆಗೂ ಪಾಲುದಾರರು ಇರುವುದು ತಿಳಿದುಬಂದಿದೆ. ಕಳೆದ ಹತ್ತು ವರ್ಷಗಳಿಂದಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿಯೇ ನಿವೃತ್ತಿಯಾದವರ ವಿರುದ್ಧವೂ ತನಿಖೆ ಕೈಗೊಳ್ಳಲಾಗಿದೆ.
ಸ್ಪರ್ಧಿಸಿದ್ದ ಓದುಗಂಗಪ್ಪ ಆರೋಪಿ:
ಸಿಂಗಟಾಲೂರು ಏತನೀರಾವರಿ ಯೋಜನೆ ವ್ಯಾಪ್ತಿಯ ಮುಂಡರಗಿ ಉಪವಿಭಾಗದಲ್ಲಿ ಇಇಯಾಗಿ ಕಾರ್ಯನಿರ್ವಹಿಸಿ, ನಿವೃತ್ತಿಯಾಗಿರುವ ಓದುಗಂಗಪ್ಪ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಓದುಗಂಗಪ್ಪ 2018 ವಿಧಾನಸಭಾ ಚುನಾವಣೆಯಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಪ್ರಯತ್ನಿಸಿದರೂ ಟಿಕೆಟ್ ಸಿಗದೆ ಹಿಂದೆ ಸರಿದಿದ್ದರು.ಮೇಲ್ನೋಟಕ್ಕೆ ತನಿಖೆಯಲ್ಲಿ ಬಂದಿರುವ ಮಾಹಿತಿಯನ್ನಾಧರಿಸಿ 16 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.
ಚಂದ್ರಪ್ಪ ಈಟಿ ಪೊಲೀಸ್ ನಿರೀಕ್ಷಕ, ಲೋಕಾಯುಕ್ತ ಕೊಪ್ಪಳ