ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಚಾರ ಹೆಚ್ಚಳ: ರೈತರ ಆರೋಪ

KannadaprabhaNewsNetwork |  
Published : Apr 05, 2026, 01:45 AM IST
4ಕೆಎಂಎನ್ ಡಿ18 | Kannada Prabha

ಸಾರಾಂಶ

ಶಿಳನೆರೆ ಹೋಬಳಿಯ ಚೌಡಘಟ್ಟ, ಸಿಂಧಘಟ್ಟ ಮತ್ತಿತರ ಕಡೆ ಹೋಬಳಿಯ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಿಗರಾದ ಶಶಿಕುಮಾರ್, ಈರಣ್ಣ ಎನ್ನುವವರು ನಕಲಿ ವಂಶವೃಕ್ಷಗಳನ್ನು ಸೃಷ್ಟಿಸಿ ಪೌತಿದಾರರ ಕುಟುಂಬಕ್ಕೆ ಸೇರಬೇಕಾದ ಆಸ್ತಿಯನ್ನು ಇತರರ ಹೆಸರಿಗೆ ಖಾತೆ ಮಾಡಿ ನೈಜ ವಂಶಸ್ತರು ಕೋರ್ಟು ಕಚೇರಿ ತಿರುಗುವಂತೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಏ.9ರಂದು ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಅನಿರ್ಧಿಷ್ಟಾವಧಿ ಬೃಹತ್ ಹೋರಾಟ ಆರಂಭಿಸುವುದಾಗಿ ಜಿಲ್ಲಾ ರೈತಸಂಘ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಸಭೆ ಬಳಿಕ ರೈತಮುಖಂಡ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನ ಗವೀಮಠ ಮೊರಾರ್ಜಿ ವಸತಿ ಶಾಲೆಯ ಅಕ್ಕಿ ಹಗರಣ, ಶೀಳನೆರೆ ಹೋಬಳಿಯಲ್ಲಿ ಕಂದಾಯ ಇಲಾಖೆ ಆರ್.ಐ ಮತ್ತು ವಿ.ಎ.ಗಳು ಒಗ್ಗೂಡಿ ಅಕ್ರಮ ಪೌತಿ ಖಾತೆ ನೀಡಿ ರೈತರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿದರು.

ಶಿಕ್ಷಣ ಇಲಾಖೆ ಸೂಚನೆ ಮೇರೆಗೆ ಟಿಎಪಿಸಿಎಂಎಸ್ ಗೋಡನ್‌ನಿಂದ ಎತ್ತುವಳಿಯಾಗಿ ಗವೀಮಠದ ವಸತಿ ಶಾಲೆಗೆ ಸೇರಬೇಕಾದ ಅಕ್ಕಿ ವಸತಿ ಶಾಲೆ ಸೇರುವ ಬದಲು ಪಟ್ಟಣದ ಖಾಸಗಿ ರೈಸ್ ಮಿಲ್ ಗೆ ಹೋಗಿದೆ. ರೈತರು ಪತ್ತೆ ಹಚ್ಚಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದರ ಬಗ್ಗೆ ಇದುವರೆಗೂ ಯಾವುದೇ ತನಿಖೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, ಶಿಳನೆರೆ ಹೋಬಳಿಯ ಚೌಡಘಟ್ಟ, ಸಿಂಧಘಟ್ಟ ಮತ್ತಿತರ ಕಡೆ ಹೋಬಳಿಯ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಿಗರಾದ ಶಶಿಕುಮಾರ್, ಈರಣ್ಣ ಎನ್ನುವವರು ನಕಲಿ ವಂಶವೃಕ್ಷಗಳನ್ನು ಸೃಷ್ಟಿಸಿ ಪೌತಿದಾರರ ಕುಟುಂಬಕ್ಕೆ ಸೇರಬೇಕಾದ ಆಸ್ತಿಯನ್ನು ಇತರರ ಹೆಸರಿಗೆ ಖಾತೆ ಮಾಡಿ ನೈಜ ವಂಶಸ್ತರು ಕೋರ್ಟು ಕಚೇರಿ ತಿರುಗುವಂತೆ ಮಾಡಿದ್ದಾರೆ ಎಂದು ದೂರಿದರು.

ಈ ಬಗ್ಗೆ ರೈತಸಂಘ ಕಳೆದ ಒಂದೂವರೆ ತಿಂಗಳ ಹಿಂದೆಯೇ ದಾಖಲೆಗಳ ಸಮೇತ ಮಾಹಿತಿ ನೀಡಿ ಶಿಸ್ತು ಕ್ರಮ ಜರುಗಿಸಿ ರೈತ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರೂ ತಹಸೀಲ್ದಾರ್ ಡಾ.ಅಶೋಕ್ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ತಾಲೂಕಿನಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ದಲ್ಲಾಳಿಗಳನ್ನು ನೇಮಕ ಮಾಡಿಕೊಂಡು ಕಮೀಷನ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಏ.9 ರಂದು ಹೋರಾಟ ಹಮ್ಮಿಗೊಂಡಿದ್ದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭ್ರಷ್ಟರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಿರಂತರವಾಗಿ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಶ್, ಕೃಷ್ಣಾಪುರ ರಾಜಣ್ಣ, ಸಿಂಧುಘಟ್ಟ ಮುದ್ದುಕುಮಾರ್, ಚೌಡೇನಹಳ್ಳಿ ಕರಷ್ಣೇಗೌಡ, ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ಹಿರೀಕಳಲೆ ಬಸವರಾಜು, ಲಕ್ಷ್ಮೀಪುರ ನಾಗರಾಜು, ನಾರಾಯಣಸ್ವಾಮಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿದ ಮತ್ತಿನಲ್ಲಿ ಬೈಕ್‌ ಜಖಂಮಾಡಿದ್ದಕ್ಕೆ ಸ್ನೇಹಿತನ ಕೊಲೆ
ಐಪಿಎಲ್‌ ಪಂದ್ಯದ ವೇಳೆ ಮೊಬೈಲ್‌ಎಗರಿಸಿದ್ದ ಇನ್ನು 9 ಮಂದಿ ಬಂಧನ