
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಲೂಕು ಕಚೇರಿ ಎದುರು ಆಗಮಿಸಿದ ಕಾರ್‍ಯಕರ್ತರು, ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ತಹಸೀಲ್ದಾರ್ ಸಂತೋಷ್ ಅವರಿಗೆ ಮನವಿ ಸಲ್ಲಿಸಿ, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಧಿಕಾರಿಗಳಿಗೆ ಲಂಚಕೊಟ್ಟರೆ ಮಾತ್ರ ಸಾರ್ವಜನಿಕರ ಕೆಲಸ ಆಗುತ್ತವೆ ಎನ್ನುವ ಹಂತಕ್ಕೆ ತಲುಪಿದೆ ಎಂದು ಆಕ್ರೋಶ ಹೊರಹಾಕಿದರು.
ಕೆಆರ್‌ಐಡಿಎಲ್ ನಿಗಮದಲ್ಲಿ ದಲಿತ ಕಾಲೋನಿಗಳಿಗೆ ಬಳಸಬೇಕಾದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತಾಲೂಕಿನ ಮಲ್ಲೇನಹಳ್ಳಿ, ಶಂಕನಹಳ್ಳಿ, ಪಟ್ಟಸೋಮನಹಳ್ಳಿ, ಇಳ್ಳೇನಹಳ್ಳಿ ಗ್ರಾಮದ ದಲಿತ ಕಾಲೋನಿಗೆ ಮಂಜೂರಾಗಿದ್ದ ಅನುದಾನವನ್ನು ಅಧಿಕಾರಿಗಳು ಸವರ್ಣೀಯರ ಬೀದಿಗಳಿಗೆ ಬಳಕೆ ಮಾಡಿ ಅಭಿವೃದ್ಧಿಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಕೆಆರ್‌ಐಡಿಎಲ್‌ಗೆ ಸರ್ಕಾರದಿಂದ ಬರುವ ಅನುದಾನದಲ್ಲಿ ದಲಿತರಿಗೆ ಶೇ.50ರಷ್ಟು ಮೀಸಲಿರಿಬೇಕು. ತಾಲೂಕು ಕಚೇರಿಯಲ್ಲಂತೂ ಭ್ರಷ್ಟಾಚಾರ ಹೆಚ್ಚಾಗಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕಡಿವಾಣ ಹಾಕಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಸರ್ವೇ ನಂ. 42ರಲ್ಲಿ ಸವರ್ಣೀಯರಿಂದ ಒತ್ತುವರಿಯಾಗಿರುವ ದಲಿತರ ಭೂಮಿಯನ್ನು ಹದ್ದುಬಸ್ತು ಮಾಡಿ ತೆರವುಗೊಳಿಸಬೇಕು, ಶ್ಯಾದನಹಳ್ಳಿ ದಲಿತರು ಸರ್ವೇ ನಂ.89ರಲ್ಲಿ ಇರುವ ಗೋಮಾಳದ ಜಮೀನಿನಲ್ಲಿ ಅನುಭವದಲ್ಲಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ದಲಿತರ ಮೇಲೆ ಜಾತಿ ನಿಂದನೆ ಮಾಡಿ, ಭೂಮಿಯಲ್ಲಿ ಬೆಳೆದಿದ್ದ ಫಸಲನ್ನು ನಾಶಪಡಿಸಿದ್ದಾರೆ, ಈ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಮಹದೇಶ್ವರಪುರ ಗ್ರಾಮದಲ್ಲಿ ಇರುವ ಅಂಬೇಡ್ಕರ್ ವಸತಿ ಶಾಲೆಯೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲ ಉಂಟಾಗುತ್ತಿದೆ. ಹಾಗಾಗಿ ಹೊಸಕಟ್ಟಡ ನಿರ್ಮಾಣ ಮಾಡಲು ಸರ್ಕಾರ 22 ಕೋಟಿ ರು. ಅನುದಾನ ನೀಡಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಕ್ರಾಂತಿ ಸೇವಾ ಸಮಿತಿ ಅಧ್ಯಕ್ಷ ಬೊಮ್ಮರಾಜು, ಮುಖಂಡರಾದ ಹೊಸಕೋಟೆ ಜವರಯ್ಯ, ಅಂತನಹಳ್ಳಿ ಶಿವಸ್ವಾಮಿ, ಕೆಂಪರಾಜು, ಜಯರಾಮು, ಸಿದ್ದಲಿಂಗಮೂರ್ತಿ, ಸ್ವಾಮಿ, ವರದರಾಜು, ದೇವರಾಜು ಸೇರಿ ಹಲವರು ಇದ್ದರು.