ಹತ್ತಿ ಬೆಳೆಗೆ ಮುಟುರು ರೋಗ ಗಿಡಹೇನು ಬಾಧೆ: ರೈತರ ಆತಂಕ

KannadaprabhaNewsNetwork |  
Published : Aug 21, 2026, 01:30 AM IST
ಅಫಜಲಪುರ ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಹತ್ತಿ ಬೆಳೆಗೆ ಮುಟುರು ರೋಗ ಹೇನುಗಳು ಶೀರುಗಳು ಬಾಧಿಸಿದ್ದರಿಂದ ರೈತರು ಆತಂಕದಲ್ಲಿದ್ದಾರೆ  | Kannada Prabha

ಸಾರಾಂಶ

Cotton crop is facing aphid infestation: Farmers worried

-ಸ್ಮಾಲ್‌ ಕಿಕ್ಕರ್‌

ಸಾಮೂಹಿಕ ಜಾಗೃತಿ ಅವಶ್ಯಕತೆ

----

-ದುಬಾರಿ ಬೆಲೆಯ ಕೀಟನಾಶಕ ಸಿಂಪರಣೆಯಿಂದ ಬಸವಳಿದ ರೈತರು । ಬೆಳೆ ಉಳಿಸಿಕೊಳ್ಳಲು ಹರಸಾಹಸ

------

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲಪುರ

ತಾಲೂಕಿನಾದ್ಯಂತ ಬಿತ್ತನೆ ಮಾಡಿದ ಹತ್ತಿಗೆ ಮುಟುರು ರೋಗ, ಹೇನು, ಶೀರು ಬಾಧಿಸುತ್ತಿದ್ದು ನಿಯಂತ್ರಣಕ್ಕೆ ದುಬಾರಿ ಬೆಲೆಯ ಕೀಟನಾಶಕ ಸಿಂಪಡಿಸುವ ಸ್ಥಿತಿ ಬಂದೊದಗಿದೆ. ರೈತರು ಬೆಳೆ ಉಳಿಸಿಕೊಳ್ಳಲು ಅಧಿಕ ಖರ್ಚು ಮಾಡುತ್ತಿದ್ದಾರೆ.

ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಮಳೆ ಕೈಕೊಟ್ಟ ಪರಿಣಾಮ ಹತ್ತಿ ಬೆಳೆ ಅವಧಿ ಪೂರ್ಣಗೊಂಡ ನಂತರ ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ.

ಇನ್ನು ಕೆಲವರು ಬಿತ್ತನೆ ಅವಧಿಯಲ್ಲಿ ಅಲ್ಪಸ್ವಲ್ಪ ಸುರಿದ ಮಳೆಗೆ ಬಿತ್ತನೆ ಮಾಡಿದ್ದರು. ಆದರೆ, ಸಮಯಾನುಸಾರ ಬೆಳೆಗೆ ಅಗತ್ಯ ನೀರು ಒದಗಿಸದ ಕಾರಣ ಹತ್ತಿ ಬೆಳೆ ಬೆಳವಣಿಗೆಯಲ್ಲಿ ಕುಂಠಿತಗೊಂಡಿದೆ. ಕುಗ್ಗಿಹೋದ ಗಿಡಗಳು ಹೂ ಬಿಟ್ಟಿವೆ. ಈ ಮಧ್ಯೆ ಹತ್ತಿ ಬೆಳೆಗೆ ಹೇನುಗಳು ಆವರಿಸಿದ್ದು, ಬೆಳೆ ಆರಂಭದಲ್ಲೇ ದುಬಾರಿ ಖರ್ಚಿಗೆ ದಾರಿ ಮಾಡಿದೆ.

ಹೆಚ್ಚುವರಿ ಖರ್ಚು: ಹತ್ತಿ ಬಿತ್ತನೆ ನಂತರ ಮಳೆ ಅಭಾವದ ಜೊತೆಗೆ ಜನೆವರಿಯಿಂದ ಜುಲೈ ವರೆಗೆ ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ನದಿ ತೀರದ ಗ್ರಾಮಗಳ ಹತ್ತಿ ಬೆಳೆಗಾರರು ತುಂಬಾ ತೊಂದರೆ ಅನುಭವಿಸಿದ್ದರು.

ಹತ್ತಿ ಬೆಳೆಗಾರರಿಗೆ ನಾನಾ ರೀತಿಯ ಸಂಕಷ್ಟಗಳು ಎದುರಾಗಿವೆ. ಹತ್ತಿ ಬೆಳೆಗೆ ರಾಸಾಯನಿಕ ಗೊಬ್ಬರ ನೀಡಲಾಗಿದ್ದು, ಕಳೆ ನಿರ್ವಹಣೆ, ಎತ್ತಿನಕುಂಟೆ ಸೇರಿ ಇನ್ನಿತರ ಖರ್ಚು ಮಾಡಲಾಗಿದೆ. ಇದೀಗ ಬೆಳೆ ಚೇತರಿಸಿಕೊಳ್ಳುವಷ್ಟರಲ್ಲಿ ಗಿಡಗಳಿಗೆ ಮುಟುರು ರೋಗ ಹೇನು, ಶೀರು ಆವರಿಸುತ್ತಿದ್ದು, ಕೀಟನಾಶಕಗಳ ಖರೀದಿಗೆ ಮಾಡುತ್ತಿರುವ ಹೆಚ್ಚುವರಿ ಖರ್ಚಿನಿಂದ ಬಸವಳಿದಿದ್ದಾರೆ.

ಗಿಡಹೇನು ಬಾಧೆ: ಬಿತ್ತನೆ ಅವಧಿ ಮೀರಿ ಹತ್ತಿ ಬಿತ್ತನೆ ಮಾಡಿದರೆ ಗಿಡಹೇನು ಬಾಧಿಸುತ್ತದೆ. ಇದು ಕೋಮಲ ಚಿಗುರೆಲೆ, ಕೊಂಬೆ, ಮೊಗ್ಗುಗಳಿಂದ ಸಾರವನ್ನು ಹೀರುತ್ತದೆ. ಪರೋಕ್ಷವಾಗಿ ಹತ್ತಿಯ ಫೈಬರ್‌ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಆರಂಭದಲ್ಲೇ ಆವರಿಸಿರುವ ಹಿನ್ನೆಲೆ ದುಬಾರಿ ಖರ್ಚಿಗೆ ದಾರಿಯಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಮಳೆ ಅಭಾವ, ನೀರಿನ ಕೊರತೆ, ಕೀಟ, ರೋಗ ಬಾಧೆಯಿಂದ ಹತ್ತಿಬೆಳೆ ಅಸಾಧ್ಯವೆಂಬ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ಗೊಣಗಿದ್ದಾರೆ. ಭೀಮಾ ನದಿ ಪಾತ್ರದ ರೈತರ ಜಮೀನುಗಳಲ್ಲಿರುವ ಹತ್ತಿ ಬೆಳೆ ಜನೆವರಿಯಿಂದ ಜುಲೈ ವರೆಗೆ ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ಹತ್ತಿ ಬೆಳೆ ಕುಂಠಿತಗೊಂಡಿದೆ. ಈಗಾಗಲೇ ಪ್ರತಿ ಎಕರೆ ಹತ್ತಿ ಬೆಳೆಗೆ 8ರಿಂದ 10ಸಾವಿರ ಖರ್ಚು ಮಾಡಲಾಗಿದೆ

ಜೈವಿಕವೇ ಪರ್ಯಾಯ: ಕಡಿಮೆ ಸಮಯದಲ್ಲಿ ಕೀಟಬಾಧೆ ಹತೋಟಿಗೆ ತರುವ ಮತ್ತು ಹೆಚ್ಚು ಪರಿಣಾಮಕಾರಿಯಾದ ಕೀಟನಾಶಕಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಸಹಜವಾಗಿ ರೈತರ ದೃಷ್ಟಿ ಬದಲಾಗಿದೆ. ಜೈವಿಕ ಔಷಧಗಳ ಬಳಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಗಮನಹರಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದ್ದು, ಜೈವಿಕ ಔಷಧಗಳನ್ನು ರಾಸಾಯನಿಕ ಕೀಟನಾಶಕಗಳ ಪರ್ಯಾಯ ಔಷಧಗಳನ್ನಾಗಿ ಮಾರುಕಟ್ಟೆಗೆ ಪರಿಚಯಿಸಬೇಕೆಂಬ ಅಭಿಪ್ರಾಯ ಕೃಷಿ ತಜ್ಞರಿಂದ ವ್ಯಕ್ತವಾಗಿದೆ.

ಬೆಳೆಗೆ ಕೀಟ ಆವರಿಸಿದ ಆರಂಭದಲ್ಲೇ ಜೈವಿಕ ಔಷಧಗಳಾದ ಬೇವಿನ ಎಣ್ಣೆ ಸೇರಿ ಇನ್ನಿತರ ಔಷಧ ಸಿಂಪಡಿಸಿದರೆ, ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ.

ಆದರೆ, ರೈತರು ಆರಂಭದಲ್ಲೇ ರಾಸಾಯನಿಕ ಕೀಟನಾಶಕ ಸಿಂಪರಣೆ ಮಾಡುವುದರಿಂದ ಜೈವಿಕ ಔಷಧ ತೊರೆಯುತ್ತಾರೆ. ಇದೀಗ ಸಾಮೂಹಿಕ ಜಾಗೃತಿಗೊಳ್ಳುವ ಅವಶ್ಯಕತೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಈಚಿನ ವರ್ಷಗಳಲ್ಲಿ ಹತ್ತಿ ಬೆಳೆ ಮೇಲೆ ಅವಲಂಬಿತರಾದ ರೈತರಿಗೆ ಮಳೆ ಕೊರತೆ, ನೀರಿನ ಅಭಾವ ಬರಸಿಡಿಲಂತೆ ಬಡಿದಿವೆ. ಇದೀಗ ಹತ್ತಿಗೆ ಆರಂಭದಲ್ಲೇ ಮುಟುರು ರೋಗ ಗಿಡಹೇನು ಬಾಧೆ ಆವರಿಸಿದ್ದು, ಅದರ ಹತೋಟಿಗಾಗಿ ದುಬಾರಿ ಬೆಲೆಯ ಕೀಟನಾಶಕಗಳ ಮೊರೆ ಹೋಗಬೇಕಿದೆ. ಹಾಕಿದ ಖರ್ಚು ವಾಪಸ್‌ ಬಂದರೆ ಸಾಕೆಂಬಂತಾಗಿದೆ ಎಂದು ತಾಲೂಕಿನ ಮಣ್ಣೂರ ಶೇಷಗಿರಿ ಹೊಸೂರ ರಾಮನಗರ ದಯಾನಂದನಗರ ಗ್ರಾಮಗಳ ರೈತರು ತಮ್ಮ ಅಳಲು ತೋಡಿಕೊಂಡರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡಕೆ ತೋಟದ ಹಳ್ಳಕ್ಕೆ ನುಗ್ಗಿದ ಖಾಸಗಿ ಬಸ್
ರಂಗಮಂದಿರಕ್ಕೆ ಹಾನಿ: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ