ಶಿವಮೊಗ್ಗ: ಸಾಗರ ತಾಲೂಕು ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಗುರುವಾರ ಎಸ್ಪಿ ಬಿ.ನಿಖಿಲ್‌ ಅವರಿಗೆ ಮನವಿ ಸಲ್ಲಿಸಲಾಯಿತು. ತುಮರಿಯಲ್ಲಿ ಸರ್ಕಾರದ ಅನುದಾನದಿಂದ ನಿರ್ಮಿಸಿ ಉದ್ಘಾಟನೆಗೆ ಸಿದ್ಧಗೊಂಡಿದ್ದ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಮೇಲೆ ಕಿಡಿಗೇಡಿಗಳು ಬೀಗ ಬಾಗಿಲು ಒಡೆದು ಕುರ್ಚಿಗಳನ್ನು ಮುರಿದು ಹಾಕಿದ್ದಾರೆ. ಒಳಗಿನ ಪೋಲ್ಸ್ ಗಳಿಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಕೂಡಲೇ ಈ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಎಚ್.ಎಂ. ಸಂಗಯ್ಯ, ನಂಜುಂಡಪ್ಪ, ಶಂಕ್ರಾನಾಯ್ಕ್, ಶಿವಣ್ಣ, ಎಚ್. ರಾಮು. ಆದಿಶೇಷ, ಚಂದ್ರಪ್ಪ, ಕೋಡ್ಲು ಶ್ರೀಧರ್, ಆಲೀಂ ಖಾನ್, ಹಾಲಗದ್ದೆ ಉಮೇಶ್, ಪ್ರಲ್ಹಾದ ಇತರರು ಇದ್ದರು.