ಪ್ರಸಕ್ತ ವರ್ಷ ತಾಲೂಕಿನ ರೈತರು ಬರಗಾಲದ ಮಧ್ಯೆ ಮುಂಗಾರು ಹಂಗಾಮಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಈ ಬೆಳೆಯನ್ನು ಸದ್ಯ ಕಟಾವು ಮಾಡಿ ಮಾರಾಟ ಮಾಡಬೇಕೆಂದರೆ ಮಾರುಕಟ್ಟೆಯಲ್ಲಿ ದಿಢೀರನೇ ಬಿ.ಟಿ. ಹತ್ತಿ ಬೆಲೆ ಕುಸಿದಿದೆ.
ಬರಗಾಲದ ಮಧ್ಯೆ ಅಳಿದು-ಉಳಿದ ಅಲ್ಪಸ್ವಲ್ಪ ಬೆಳೆಗೂ ಬೆಲೆ ಇಲ್ಲ । ರೈತರು ಕಂಗಾಲು
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದ
ಪ್ರಸಕ್ತ ವರ್ಷ ತಾಲೂಕಿನ ರೈತರು ಬರಗಾಲದ ಮಧ್ಯೆ ಮುಂಗಾರು ಹಂಗಾಮಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಈ ಬೆಳೆಯನ್ನು ಸದ್ಯ ಕಟಾವು ಮಾಡಿ ಮಾರಾಟ ಮಾಡಬೇಕೆಂದರೆ ಮಾರುಕಟ್ಟೆಯಲ್ಲಿ ದಿಢೀರನೇ ಬಿ.ಟಿ. ಹತ್ತಿ ಬೆಲೆ ಕುಸಿದಿದೆ.
ಜಿಲ್ಲೆಯಲ್ಲಿ ನರಗುಂದ ತಾಲೂಕಿನ ಕಪ್ಪು ಮಣ್ಣಿನ ಜಮೀನಿನಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಬಿ.ಟಿ. ಹತ್ತಿ ಬಿತ್ತನೆ ಮಾಡಿ ಪ್ರತಿ ವರ್ಷ ಉತ್ತಮ ಬೆಳೆ ಬೆಳೆಯುತ್ತಾರೆ. ಇದು ಕಳೆದ ನಾಲ್ಕು ದಶಕಗಳಿಂದ ಈ ಪ್ರದೇಶದಲ್ಲಿ ನಡೆದುಕೊಂಡು ಬಂದಿದೆ. ಅದರಂತೆ ಈ ವರ್ಷವೂ ಕೂಡ ರೈತರು ಹತ್ತಿ ಬಿತ್ತನೆ ಮಾಡಿದ್ದರು, ಸಕಾಲಕ್ಕೆ ಮಳೆಯಾಗದೆ ಅಲ್ಪಸ್ವಲ್ಪ ಬೆಳೆ ಬಂದಿದೆ. ಈ ಬೆಳೆಗೆ ಸದ್ಯ ಮಾರುಕಟ್ಟಿಯಲ್ಲಿ ಬೆಲೆ ಇಲ್ಲದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
1 ಎಕರೆಗೆ ₹30 ಸಾವಿರ ಖರ್ಚು:
ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಹತ್ತಿ ಬೆಳೆಯಲು ಪ್ರತಿ 1ಎಕರೆಗೆ ಬೀಜ, ಗೋಬ್ಬರ, ಔಷದ, ಸೇರಿ ₹ 20ರಿಂದ 30ಸಾವಿರವನ್ನು ಖರ್ಚು ಮಾಡಿದ್ದಾರೆ. ಆದರೆ ಸದ್ಯ ರೈತ ಮಾಡಿದ ಖರ್ಚು ಸಹ ಬರದ ಸ್ಥಿತಿಯಿದೆ.
ಇಳುವರಿಗೆ ಬರದ ಛಾಯೆ:
ಪ್ರತಿ ವರ್ಷ ಈ ತಾಲೂಕಿನಲ್ಲಿ ಬಿ.ಟಿ. ಹತ್ತಿ ಬಿತ್ತನೆ ಮಾಡಿ ಪ್ರತಿ 1 ಎಕರೆಗೆ 10ರಿಂದ 15ಕ್ವಿಂಟಲ್ ಹತ್ತಿ ಬೆಳೆಯುತ್ತಿದ್ದರು. ಆದರೆ ಈ ವರ್ಷ ಬರದ ಛಾಯೆಯಿಂದ ಹತ್ತಿ ಬೆಳೆ ತೇವಾಂಶ ಕೊರತೆಯಿಂದ 1 ಎಕರೆಗೆ 1ರಿಂದ 2 ಕ್ವಿಂಟಲ್ ಸಹ ಇಳುವರಿ ಬಂದಿಲ್ಲ. ಈ ಅಲ್ಪಸ್ವಲ್ಪ ಬಂದ ಬೆಳೆಗೆ ಸದ್ಯ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಇಲ್ಲವಾಗಿದೆ.
ರೈತರು ಹತ್ತಿ ಕಟಾವು ಮಾಡುವ ಮೊದಲು ಮಾರುಕಟ್ಟೆಯಲ್ಲಿ ಪ್ರತಿ 1 ಕ್ವಿಂಟಲ್‌ಗೆ ₹10000ದಿಂದ ₹10500 ವರೆಗೆ ಬೆಲೆ ಇತ್ತು. ಆದರೆ ರೈತರು ಹತ್ತಿ ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಲು ಪ್ರಾರಂಭವಾದಾಗ ಪ್ರತಿ 1 ಕ್ವಿಂಟಲ್‌ಗೆ ₹8000-8500 ಬೆಲೆ ಕುಸಿದಿದೆ. ಒಂದು ಕಡೆ ಇಳುವರಿ ಬರದ ಪೆಟ್ಟು ಮತ್ತೊಂದು ಕಡೆ ಅಲ್ಪಸ್ವಲ್ಪ ಬೆಳೆದ ಹತ್ತಿಗೆ ಮಾರುಕಟ್ಟೆಯಲ್ಲಿಯೂ ಬೆಲೆ ಇಲ್ಲವಾಗಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳದಂತಾಗಿದೆ.
ಪ್ರಸಕ್ತ ವರ್ಷ ತಾಲೂಕಿನಲ್ಲಿ ರೈತರು 5665 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಮಾರುಕಟ್ಟೆಗೆ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 4231 ಕ್ವಿಂಟಲ್ ಹತ್ತಿ ಅವಕವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಹೇಳಿದ್ದಾರೆ.ರಾಜ್ಯದ ಎಪಿಎಂಸಿ ಎಲ್ಲ ಮಾರುಕಟ್ಟೆಯಲ್ಲಿ ರೈತರು ಬೆಳೆ ಕಟಾವು ಮಾಡಿ ಮಾರಾಟ ಮಾಡಲು ತಂದಾಗ ದಿಢೀರನೇ ಬೆಲೆ ಕುಸಿತ ಮಾಡಿ ವ್ಯಾಪಾರಸ್ಥರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಆರೋಪಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.