ವರ್ತಕರು ಬಯಸಿದರೆ ಹಾವೇರಿ ಹತ್ತಿ ಟ್ರೇಡಿಂಗ್ ಸ್ಥಳಾಂತರ-ಸಚಿವ ಪಾಟೀಲ

KannadaprabhaNewsNetwork |  
Published : Jan 29, 2025, 01:30 AM IST
28ಎಚ್‌ವಿಆರ್5, 5ಎ | Kannada Prabha

ಸಾರಾಂಶ

ವರ್ತಕರು ಬಯಸಿದರೆ ಹತ್ತಿ ಟ್ರೇಡಿಂಗ್ ಚಟುವಟಿಕೆಗಳನ್ನು ಹಾನಗಲ್ಲ ರಸ್ತೆಯ ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಹಾವೇರಿ: ವರ್ತಕರು ಬಯಸಿದರೆ ಹತ್ತಿ ಟ್ರೇಡಿಂಗ್ ಚಟುವಟಿಕೆಗಳನ್ನು ಹಾನಗಲ್ಲ ರಸ್ತೆಯ ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.ನಗರದ ಗುತ್ತಲ ರಸ್ತೆ ಮತ್ತು ಹಾನಗಲ್ಲ ರಸ್ತೆಗಳಲ್ಲಿರುವ ಎರಡೂ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ವರ್ತಕರ ಅಹವಾಲುಗಳನ್ನು ಆಲಿಸಿದರು.ಸಕ್ರಿಯವಾಗಿ ಇರುವ ಟ್ರೇಡರ್ಸ್ಗೆ ಮೊದಲ ಆದ್ಯತೆ. ಲೈಸೆನ್ಸ್ ಪಡೆದಿದ್ದರೂ ಟ್ರೇಡ್ ಚಟುವಟಿಕೆ ಮಾಡದ ವರ್ತಕರನ್ನು ಪರಿಗಣಿಸುವುದು ಕಷ್ಟ ಎಂದ ಸಚಿವರು, ಹತ್ತಿ ಟ್ರೇಡಿಂಗ್ ಸ್ಥಳಾಂತರದ ಬಗ್ಗೆ ಕಾರ್ಯಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಮಾರುಕಟ್ಟೆಯಲ್ಲಿ ರಸ್ತೆ ಹಾಳಾಗಿದೆ, ಚರಂಡಿ ವ್ಯವಸ್ಥೆ ಇಲ್ಲ, ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸಿಕೊಡಬೇಕು ಎಂದು ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಪುಂಡಲೀಕ ಶಿರೂರು ಸಚಿವರಿಗೆ ಮನವಿ ಮಾಡಿದರು.ಹತ್ತಿ ಮಾರುಕಟ್ಟೆಯಲ್ಲಿ ವಾಣಿಜ್ಯ ಚಟುವಟಿಕೆ ಕುಸಿದಿದೆ. ಈ ಮೊದಲು ಇದ್ದ ಪ್ರಮಾಣದಲ್ಲಿ ಟ್ರೇಡಿಂಗ್ ಆಗುತ್ತಿಲ್ಲ. ಮಾರುಕಟ್ಟೆ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಟ್ರೇಡರ್ಸ್ ಮನವಿ ಮಾಡಿದರು.ಗುತ್ತಲ ಎಪಿಎಂಸಿ ಬಗ್ಗೆ ಮಾಹಿತಿ ನೀಡಿದ ಕಾರ್ಯದರ್ಶಿ ಜಿ.ಕೆ. ಕಬ್ಬೇರಹಳ್ಳಿ ಅವರು, ಒಟ್ಟು 96 ಪ್ಲಾಟ್ ಗಳಿದ್ದು, ಅವುಗಳನ್ನು 84 ಪ್ಲಾಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ಹತ್ತು ಪ್ಲಾಟ್‌ಗಳಲ್ಲಿ ಅಂಗಡಿ ಮತ್ತು ಗೋದಾಮು ನಿರ್ಮಿಸಲಾಗಿದೆ. ಎರಡು ಖಾಲಿ ಇವೆ ಎಂದು ಹೇಳಿದರು.ಆಡಳಿತಾಧಿಕಾರಿ ಶೈಲಜಾ ಅವರು ಬಹುತೇಕ ರೈತರು ನೇರವಾಗಿ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಗೆ ತರುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದರು.ಗುತ್ತಲ ರಸ್ತೆಯ ಹತ್ತಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಹಾನಗಲ್ಲ ರಸ್ತೆಯ ಎಪಿಎಂಸಿಗೆ ಸ್ಥಳಾಂತರ ಮಾಡಿ, ಗುತ್ತಲ ರಸ್ತೆ ಮಾರುಕಟ್ಟೆ ಪ್ರದೇಶವನ್ನು ಕೈಗಾರಿಕೆಗಳಿಗೆ ಹಂಚಿಕೆ ಮಾಡಬಹುದು ಎಂದು ಕೆಲವರು ಸಲಹೆ ನೀಡಿದರು.ಹಾನಗಲ್ಲ ಮಾರುಕಟ್ಟೆಯಲ್ಲಿರುವ ಆಹಾರ ಧಾನ್ಯ ದಾಸ್ತಾನು ಮಾಡಲು ನಿರ್ಮಿಸಿರುವ ಸೈಲೋ (ಗೋದಾಮು) ಬಳಕೆಯಾಗುತ್ತಿಲ್ಲ ಎಂದು ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಹೇಳಿದರು. ಮಾರುಕಟ್ಟೆ ಅಭಿವೃದ್ಧಿ ದೃಷ್ಟಿಯಿಂದ ಏನೇನು ಮಾಡಬಹುದು ಎಂಬ ಬಗ್ಗೆ ಯೋಜನೆ ರೂಪಿಸಿ ಎಂದು ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.ಈ ವೇಳೆ ಉಪಸಭಾಪತಿ ರುದ್ರಪ್ಪ ಲಮಾಣಿ, ವರ್ತಕರ ಸಂಘದ ಅಧ್ಯಕ್ಷರಾದ ಪುಂಡಲೀಕ ಶಿರೂರು, ರಾಜಶೇಖರ್, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಕೃಷಿ ಮಾರುಕಟ್ಟೆ ಇಲಾಖೆ ಅಪರ ನಿರ್ದೇಶಕ ನಜೀಬುಲ್ಲಾಖಾನ್, ಕೆ.ಎಂ. ನಾಗೇಶ್, ಅಧೀಕ್ಷಕ ಅಭಿಯಂತರ ರಘುನಂದನ್, ವಿಭಾಗೀಯ ಅಧಿಕಾರಿ ಕೆ. ಕೋರಿಗೌಡ, ಆಡಳಿತಾಧಿಕಾರಿ ಶೈಲಜಾ, ಎಪಿಎಂಸಿ ಕಾರ್ಯದರ್ಶಿ ಜಿ.ಕೆ. ಕಬ್ಬೇರಹಳ್ಳಿ ಇದ್ದರು.ಗುತ್ತಲ ರಸ್ತೆಯಲ್ಲಿರುವ ಎಪಿಎಂಸಿಯಲ್ಲಿ ಹತ್ತಿ ಟ್ರೇಡಿಂಗ್ ಚಟುವಟಿಕೆ ಕಡಿಮೆಯಾಗಿದೆ. ಮೊದಲಿನಂತೆ ಟ್ರೇಡಿಂಗ್ ಚಟುವಟಿಕೆಯನ್ನು ಹೆಚ್ಚಿಸಲು ಅಧಿಕಾರಿಗಳು ಮತ್ತು ವರ್ತಕರೊಂದಿಗೆ ಚರ್ಚೆ ಮಾಡಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ