ಕನ್ನಡಪ್ರಭ ವಾರ್ತೆ ಮೈಸೂರು
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಂಗಸಂಸ್ಥೆಗಳಾದ ಸಿಎಸ್‌ಐಆರ್, ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ, ಸಿ.ಎಫ್.ಟಿ.ಆರ್.ಐ ಸಂಯುಕ್ತ ಆಶ್ರಯದಲ್ಲಿ ಈ ರೈಸ್ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಸಿ.ಎಫ್.ಟಿ.ಆರ್.ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದಿನ ಆವೃತ್ತಿಗಳು ಜಮ್ಮು, ಹೈದರಾಬಾದ್, ಮುಂಬೈ, ಲಖನೌ ಮತ್ತು ಚೆನ್ನೈಗಳಲ್ಲಿ ಯಶಸ್ವಿಯಾಗಿ ನಡೆದಿವೆ. ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದ್ದು, ಭಾರತವನ್ನು ಜಾಗತಿಕ ನವೋದ್ಯಮ ಶಕ್ತಿಕೇಂದ್ರವನ್ನಾಗಿ ರೂಪಿಸುವ ಪ್ರಯಾಣಕ್ಕೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.ಈ ಸಮ್ಮೇಳನವನ್ನು ಏ.13 ರಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಉದ್ಘಾಟಿಸುವರು. ಸಿಎಸ್ಐಆರ್ ಮಹಾನಿರ್ದೇಶಕಿ, ಡಿಎಸ್ಐಆರ್ ಕಾರ್ಯದರ್ಶಿ ಡಾ.ಎನ್. ಕಲೈಸೆಲ್ವಿ ಅತಿಥಿಯಾಗುವರು. ಜೂ.14 ರಂದು ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ತೇಜಸ್ವಿ ಸೂರ್ಯ ಭಾಗವಹಿಸುವರು ಎಂದರು.
ಸಿಎಸ್ಐಆರ್, ಇಸ್ರೋ, ಡಿಎಸ್ ಟಿ, ಡಿಬಿಟಿ, ಐಸಿಎಆರ್, ಐಸಿಎಂಆರ್ ಸೇರಿದಂತೆ ದೇಶದ 100 ಹೆಚ್ಚು ಸ್ಟಾರ್ಟ್ ಅಪ್ ಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ತಂತ್ರಜ್ಞಾನ ಪ್ರದರ್ಶಕರು ತಮ್ಮ ಅತ್ಯಾಧುನಿಕ ಆವಿಷ್ಕಾರ ಹಾಗೂ ಅನುಷ್ಠಾನಗೊಳ್ಳಬಹುದಾದ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದಾರೆ. ತಂತ್ರಜ್ಞಾನ ವರ್ಗಾವಣೆ, ವಾಣಿಜ್ಯೀಕರಣ, ಕೈಗಾರಿಕಾ ಸಹಭಾಗಿತ್ವ, ಹೂಡಿಕೆ ಜಾಲತಾಣ ನಿರ್ಮಾಣ ಮತ್ತು ಉದ್ಯಮಶೀಲತೆಯ ಅಭಿವೃದ್ಧಿಗೆ ಈ ಸಮ್ಮೇಳನ ಉತ್ತಮ ವೇದಿಕೆಯಾಗಲಿದೆ ಎಂದರು.