ಹೇಮಗುಡ್ಡದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ದಿನಗಣನೆ

KannadaprabhaNewsNetwork |  
Published : Oct 19, 2026, 02:30 AM IST
ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ದಸರಾ ಉತ್ಸವ 8ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮತ್ತು ಕುಟಂಬದವರು ಹೋಮ ಹವನಕ್ಕೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಹೇಮಗುಡ್ಡದ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡು 8 ದಿನ ಕಳೆದಿದ್ದು, ಅಂಬಾರಿ ಮೆರವಣಿಗೆ ಅ. 20ರಂದು ಅದ್ಧೂರಿಯಾಗಿ ನಡೆಯಲಿದೆ.

ರಾಮಮೂರ್ತಿ ನವಲಿ

ಗಂಗಾವತಿ: ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನೆಯ ಮೇಲೆ ಅಂಬಾರಿ ಜಂಬೂ ಸವಾರಿಯ ಮೆರವಣಿಗೆಗೆ ದಿನಗಣನೆ ಪ್ರಾರಂಭವಾಗಿದ್ದು, ಈ ಹಿನ್ನೆಲೆ ಮೈಸೂರು ಮಾದರಿಯ ದಸರಾ ಉತ್ಸವಕ್ಕೆ ಸಿದ್ಧತೆ ನಡೆದಿದೆ.

ಹೇಮಗುಡ್ಡದ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡು 8 ದಿನ ಕಳೆದಿದ್ದು, ಅಂಬಾರಿ ಮೆರವಣಿಗೆ ಅ. 20ರಂದು ಅದ್ಧೂರಿಯಾಗಿ ನಡೆಯಲಿದೆ. ಹೇಮಗುಡ್ಡದಲ್ಲಿ ಕಳೆದ 42 ವರ್ಷಗಳಿಂದ ಪ್ರಾರಂಭಗೊಂಡ ನವರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುನ್ನಡಿದಿವೆ. ದಿನನಿತ್ಯ ಹೋಮ ಹವನಗಳು ಸೇರಿದಂತೆ ಧಾರ್ಮೀಕ ಕಾರ್ಯಕ್ರಮಗಳು ಪ್ರಾರಂಭಗೊಂಡಿವೆ.ಜಂಬೂ ಸವಾರಿ: ಜಂಬೂ ಸವಾರಿಗೆ ಹಾವೇರಿ ಜಿಲ್ಲೆಯ ಆನೆಯನ್ನು ಕರೆತರಲಾಗುತ್ತಿದ್ದು, ದುರ್ಗಾಪರಮೇಶ್ವರಿ ಮೂರ್ತಿಯನ್ನು ಮಂಟಪದಲ್ಲಿ ಸಿಂಗರಿಸಲಾಗುತ್ತದೆ. ಈಗಾಗಲೇ ರಾಣಿ ಹೆಸರಿನ ಆನೆಯನ್ನು ಹಾವೇರಿ ಜಿಲ್ಲೆಯ ದತ್ತಾತ್ರೇಯ ಅವಧೂತ ಗುರುಪೀಠ ಐರಣಿ ಹೊಳೆಮಠದ ಮಹಾಸಂಸ್ಥಾನದಿಂದ ಕರೆತರಲಾಗುತ್ತಿದ್ದು, ವಿವಿಧ ಜಾತ್ರೆ ಮತ್ತು ಮಹೋತ್ಸವಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದಿರುವ ಆನೆಯನ್ನು ಲಾರಿಯಲ್ಲಿ ಹೇಮಗುಡ್ಡಕ್ಕೆ ತರುವ ವ್ಯವಸ್ಥೆ ನಡೆದಿದೆ.

ಮೆರವಣಿಗೆಯಲ್ಲಿ ಕೋಲಾರ್, ದೊಡ್ಡಬಳ್ಳಾಪುರ, ಗದಗ, ಹಗರಿಬೊಮ್ಮನಹಳ್ಳಿ, ಹೇಮಗುಡ್ಡ, ಸಿದ್ದಾಪುರದಿಂದ ವಿವಿಧ ಕಲಾ ತಂಡಗಳು ಆಗಮಿಸಲಿವೆ. ನಂದಿಕೋಲು, ವೀರಗಾಸೆ ಸೇರಿದಂತೆ ಜನಪದ ಸೊಗಡು ಇರುವ ಕಲಾತಂಡಗಳು ಭಾಗವಹಿಸಲಿವೆ. ಅ. 20ರಂದು ಸಂಜೆ 4ಕ್ಕೆ ದೇಗುಲದಿಂದ ಜಂಬೂಸವಾರಿ ಪ್ರಾರಂಭವಾಗಲಿದ್ದು, ಮಾಜಿ ಸಂಸದ ಎಚ್.ಜಿ. ರಾಮುಲು ಅವರು ಪೂಜೆ ಸಲ್ಲಿಸಲಿದ್ದಾರೆ. ನಾಲ್ಕು ಕಿಮೀ ಅವರಿಗೂ ಮೆರವಣಿಗೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ವ್ಯವಸ್ಥೆ ಕೈಗೊಂಡಿದ್ದಾರೆ.

70 ಜೋಡಿಗಳ ಸಾಮೂಹಿಕ ವಿವಾಹ: ಕಳೆದ 42 ವರ್ಷಗಳಿಂದ ಹೇಮಗುಡ್ಡದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಜಿ ಸಂಸದ ಎಚ್.ಜಿ. ರಾಮುಲು ಕುಟುಂಬ ಏರ್ಪಡಿಸುತ್ತಾ ಬಂದಿದ್ದು, ಈ ಬಾರಿ 70 ಜೋಡಿಗಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ಕ್ಕೆ ಕಾರ್ಯಕ್ರಮ ಜರುಗಲಿದ್ದು, ವಿವಿಧ ಮಠಾಧೀಶರು ಪಾಲ್ಗೊಂಡು ಆಶೀರ್ವದಿಸಲಿದ್ದಾರೆ. ಮೈಸೂರು ಮಾದರಿಯ ಜಂಬೂ ಸವಾರಿ ಮೆರವಣಿಗೆ ಸಕಲ ಸಿದ್ಧತೆ ನಡೆದಿದ್ದು, ದಿನಗಣನೆ ಪ್ರಾರಂಭವಾಗಿದೆ.

ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಮೈಸೂರು ಮಾದರಿಯ ಜಂಬೂ ಸವಾರಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ಕೈಗೊಳ್ಳಲಾಗಿದ್ದು, ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ 70 ಜೋಡಿಗಳ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಹೇಮಗುಡ್ಡ ದಸರಾ ಉತ್ಸವದ ವ್ಯವಸ್ಥಾಪಕರು, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ: ಸಚಿವ ಶಿವರಾಜ ತಂಗಡಗಿ
ಇಂದು ಐತಿಹಾಸಿಕ ಕುಕನೂರು ಮಹಾಮಾಯೆ ದೇವಿ ರಥೋತ್ಸವ