ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ : ಗಣಪತಿ ಬಪ್ಪಾ ಮೋರಯಾ.. ಉದ್ಘೋಷಕ್ಕೆ ಮಲೆನಾಡು ಸಜ್ಜು

KannadaprabhaNewsNetwork | Updated : Sep 07 2024, 06:07 AM IST

ಸಾರಾಂಶ

ಶಿವಮೊಗ್ಗದ ಗಾಂಧಿಬಜಾರ್‌ನಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಖರೀದಿ ಭರಾಟೆ ಜೋರಾಗಿತ್ತು. ಎಲ್ಲೆಡೆ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು, ಗಜಾನನ ಸ್ವಾಗತಕ್ಕೆ ಮಲೆನಾಡು ಸಿದ್ಧಗೊಂಡಿದೆ.

 ಶಿವಮೊಗ್ಗ :  ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅದಕ್ಕೂ ಮುನ್ನವೇ ಎಲ್ಲೆಡೆ ಸಡಗರ, ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಗಜಾನನ ಸ್ವಾಗತಕ್ಕೆ ಮಲೆನಾಡು ಸಿದ್ಧಗೊಂಡಿದೆ.

ನಗರದಲ್ಲಿ 800ಕ್ಕೂ ಅಧಿಕ ಸಾರ್ವಜನಿಕ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿದ್ದು, ಶುಕ್ರವಾರ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ-ವಹಿವಾಟು ನಡೆದಿದೆ. ಗಣೇಶ ಚತುರ್ಥಿಯನ್ನು ವೈಯಕ್ತಿಕವಾಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವ ವಿಶಿಷ್ಟ ಹಬ್ಬ. ಪ್ರತಿಯೊಬ್ಬರೂ ಅವರ ಮನೆಗಳಲ್ಲಿ ಬೆನಕನ ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ತಮಗಿಷ್ಟ ವಾದ ಮಣ್ಣಿನ ಗಣೇಶನ ಮೂರ್ತಿಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುವ ದೃಶ್ಯ ಗುರುವಾರ ಮಾರುಕಟ್ಟೆಯಲ್ಲಿ ಕಂಡು ಬಂತು. ಇದರೊಂದಿಗೆ ಹೂ, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿಯೂ ಜೋರಾಗಿತ್ತು.

ಇನ್ನು, ಆಯಾ ಗಣೇಶ ಮಂಡಳಿಯವರು ಕಳೆದ ಒಂದು ತಿಂಗಳಿಂದ ತಮ್ಮ ತಮ್ಮ ಬಡಾವಣೆಗಳಲ್ಲಿ ಬೃಹತ್‌ ಪೆಂಡಾಲ್‌ ಗಳನ್ನು ಹಾಕುತ್ತಿದ್ದಾರೆ. ರಸ್ತೆಯುದ್ದಕ್ಕೂ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಿದ್ದಾರೆ. ಈಗಾಗಲೇ ತಮಗಿಷ್ಟವಾದ ಎತ್ತರ ಹಾಗೂ ಆಕಾರದ ಗಣೇಶನ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿ ಸಿದ್ಧಮಾಡಿಟ್ಟುಕೊಂಡಿದ್ದಾರೆ. ಕೆಲವು ಮಂಡಳಿಯವರು ಈಗಾಗಲೇ ಗಣೇಶನ ಮೂರ್ತಿ ತೆಗೆದುಕೊಂಡು ಬಂದಿದ್ದಾರೆ. ಇನ್ನೂ, ಕೆಲವರು ಶನಿವಾರ ಬೆಳಗ್ಗೆ ಮೆರವಣಿಗೆಯಲ್ಲಿ ತರುವವರಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸಡಗರದಿಂದ ಗಣೇಶ ಉತ್ಸವ ಆಚರಿಸಲು ಗಣೇಶ ಮಹಾ ಮಂಡಳಿ ಯವರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೊನೆಯ ಹಂತದ ಕೆಲಸ ನಡೆಯುತ್ತಿದೆ.

ಮಣ್ಣಿನ ಗಣಪಗೆ ಡಿಮ್ಯಾಂಡ್‌:

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ಕೂರಿಸುವುದರಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿಯೇ ಜಿಲ್ಲೆಯ ಜನ ವರ್ಷದಿಂದ ವರ್ಷಕ್ಕೆ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗುತ್ತಿದ್ದಾರೆ.

ನಗರ, ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಗಣೇಶ ಮಂಡಳಿಯವರು, ಸಾರ್ವಜನಿಕ ಪ್ರದೇಶ ಗಳಲ್ಲಿ ಹಾಗೂ ಕೆಲವರು ಮನೆಯಲ್ಲಿಯೇ ಗಣೇಶ ಮೂರ್ತಿಯನ್ನು ಕೂರಿಸುತ್ತಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿ ಗಳನ್ನು ಕಾಯ್ದಿರಿಸುವಲ್ಲಿ ನಿರತರಾಗಿದ್ದಾರೆ.

ಜೇಡಿ ಮಣ್ಣಿನಲ್ಲಿ ಗಣೇಶನನ್ನು ತಯಾರಿಸಿ, ರಾಸಾಯನಿಕ ರಹಿತವಾದ ಬಣ್ಣ ಬಳಿದು ಪರಿಸರ ಕಾಳಜಿಯನ್ನು ಕೆಲವು ಮೂರ್ತಿ ತಯಾರಕರು ಮೆರೆಯುತ್ತಿದ್ದಾರೆ. ಜಿಲ್ಲೆಯಲ್ಲಿ 20 ರಿಂದ 25 ಮೂರ್ತಿಕಾರರು ಜೇಡಿ ಮಣ್ಣಿನಿಂದಲೇ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ.

ಈ ವರ್ಷದ ಗಣೇಶ ಚೌತಿಗಾಗಿಯೇ 1ರಿಂದ 6 ಅಡಿ ವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. 1,000 ದಿಂದ 50,000 ರು.ವರೆಗಿನ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಮೂರ್ತಿಗಳ ಆಕರ್ಷಣೆ:

ನಗರದ ಸೈನ್ಸ್‌ ಮೈದಾನದಲ್ಲಿ ಒಂದು ಅಡಿಯಿಂದ ಹತ್ತೊಂಬತ್ತು ಅಡಿವರೆಗೂ ವೈವಿಧ್ಯಮಯ ಭಂಗಿಯ ಗಣೇಶ ಮೂರ್ತಿ ಗಳು ಮಾರಾಟಕ್ಕಿವೆ. ಮನೆ ಗಣೇಶಗಳಿಗಿಂತ, ಬೀದಿ ಗಣೇಶಗಳೇ ಹೆಚ್ಚು. ಪಿಒಪಿ -ಜೇಡಿಮಣ್ಣು ಮಿಶ್ರಿತ ಗಣಪಗಳೇ ಹೆಚ್ಚು. ಮೂರ್ತಿಗಳ ಎತ್ತರ -ವಿನ್ಯಾಸ ವೈಶಿಷ್ಟ್ಯದ ಆಧಾರದಲ್ಲಿ ಐದು ನೂರರಿಂದ ಇಪ್ಪತ್ತೈದು ಸಾವಿರದವರೆಗೂ ಬೆಲೆ ಇದೆ.

ವಿಭಿನ್ನ ಮೂರ್ತಿಗಳ ಆಗಮನ: ಪಂಚಮುಖಿ ಗಣಪತಿ, ಶಿವ ತಾಂಡವ ಗಣಪತಿ, ಶಿವನ ಪೂಜಿಸುವ ಗಣಪತಿ, ರಾಘವೇಂದ್ರ ಸ್ವಾಮಿ ರೂಪದಲ್ಲಿನ ಗಣೇಶ ಮೂರ್ತಿ, ವಿಷ್ಣು ರೂಪದಲ್ಲಿರುವ ವಿಘ್ನೇಶ್ವರ, ಬುದ್ಧನ ರೂಪದಲ್ಲಿರುವ ಗಣೇಶ ಮೂರ್ತಿ ಹೀಗೆ ವಿಭಿನ್ನ ರೂಪಗಳಲ್ಲಿರುವ ಗಣಪತಿ ಮೂರ್ತಿಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ.

* ಕಳೆಕಟ್ಟಿದ ಗೌರಿ-ಗಣೇಶ ಹಬ್ಬದ ಸಂಭ್ರಮ

ಶಿವಮೊಗ್ಗ: ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದ್ದು, ಮಾರುಕಟ್ಟೆಗಳಲ್ಲಿ ಗಣೇಶಮೂರ್ತಿ, ಹೂವು, ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ.

ನಗರದ ಸೈನ್ಸ್ ಮೈದಾನ, ಶಿವಪ್ಪನಾಯಕ ವೃತ್ತ, ಗಾಂಧಿ ಬಜಾರ್, ಸೀನಪ್ಪಶೆಟ್ಟಿ ವೃತ್ತ (ಗೋಪಿ ವೃತ್ತ), ವಿದ್ಯಾನಗರ, ವಿನೋಬ ನಗರ ಸೇರಿದಂತೆ ನಗರದ ವಿವಿಧೆಡೆ ಗಣೇಶ ಮೂರ್ತಿಗಳ ಮಾರಾಟ ಭರದಿಂದ ನಡೆಯುತ್ತಿದೆ. ಹಬ್ಬದ ಹಿನ್ನೆಲೆ ಗ್ರಾಹಕರು ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಿದರು.ನಗರದೆಲ್ಲೆಡೆ ಹೂವು, ಹಣ್ಣು, ತರಕಾರಿ, ಹೊಸ ಬಟ್ಟೆಗಳ ಖರೀದಿಯೂ ಜೋರಾಗಿತ್ತು. ಇಲ್ಲಿ ‘ಹೂವು, ಹಣ್ಣಿನ ಬೆಲೆ ಗಗನ ಕ್ಕೇರಿದೆ. ಇದರಿಂದಾಗಿ ಹಬ್ಬಗಳು ದುಬಾರಿ ಎನ್ನುವ ಭಾವನೆ ಮೂಡುತ್ತಿದೆ’ ಎನ್ನುತ್ತಾರೆ ಗಾಂಧಿ ಬಜಾರ್‌ನಲ್ಲಿ ಖರೀದಿಯಲ್ಲಿ ತೊಡಗಿದ್ದ ನಗರದ ಸಾವಿತ್ರಮ್ಮ.

ಜಾಗೃತಿ ಅಭಿಯಾನ:ಪಿಒಪಿ ಗಣೇಶ ಮೂರ್ತಿಗಳ ಭರಾಟೆಯಲ್ಲಿ ಮಣ್ಣಿನ ಮೂರ್ತಿಗಳನ್ನು ಕೇಳುವವರಿಲ್ಲ. ನಿಷೇಧ ಇದ್ದರೂ ಪಿಒಪಿ ಮೂರ್ತಿಗಳ ಅಬ್ಬರ ಕಡಿಮೆಯಾಗಿಲ್ಲ ಎಂಬುದು ಹಲವರ ದೂರು. ಈ ನಿಟ್ಟಿನಲ್ಲಿ ಕೆಲ ಸಂಘಟನೆಗಳ ಸದಸ್ಯರು ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಪರಿಸರ ಸ್ನೇಹಿ ಗಣಪನ ಪೂಜಿಸಲು ಸೂಚಿಸಿದೆ.

ಹೂವು, ಹಣ್ಣು ಬೆಲೆ ಗಗನಕ್ಕೆ:ಸಾಮಾನ್ಯವಾಗಿ ಹಬ್ಬ-ಹರಿದಿನಗಳಲ್ಲಿ ಹೂವು, ಹಣ್ಣುಗಳ ಬೆಲೆ ಕೊಂಚ ಹೆಚ್ಚಾಗಿಯೇ ಇರುತ್ತದೆ. ಈ ಬಾರಿ ಗೌರಿ-ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ದುಂಡು ಮಲ್ಲಿಗೆ ಒಂದು ಮೊಳಕ್ಕೆ 150, ಮಾರಿಗೆ 250ರಿಂದ 300 ರು.ವರೆಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು ಸೆವಂತಿಗೆ ಒಂದು ಮಾರಿಗೆ 120 ರು., ಚೆಂಡು ಹೂ 80, ವಿಳ್ಯದೆಲೆ ಕಟ್ಟಿಗೆ 80 ರು., ಸೇಬು ಹಣ್ಣು ಕೆಜಿಗೆ 180 ರು., ಸೀತಾಫಲ ಕೆಜಿಗೆ 100, ದಾಳಿಂಬೆ ಕೆಜಿಗೆ 200ರ ಗಡಿ ದಾಟಿತ್ತು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ:ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಗರದಲ್ಲಿ ಶುಕ್ರವಾರ ಮುಂಜಾನೆಯಿಂದಲೇ ನಡೆಯಿತು. ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್ ಬಸವೇಶ್ವರ ದೇವಸ್ಥಾನ, ವಿನೋಬ ನಗರ ಶಿವಾಲಯ ದೇವಸ್ಥಾನ ಸೇರಿ ವಿವಿಧ ದೇವಾಲಯ ಗಳಲ್ಲಿ ಮುಂಜಾನೆ ಹೆಣ್ಣು ಮಕ್ಕಳು ಗೌರಿ ಪೂಜೆ ನಡೆಸಿ ಗೌರಿಗೆ ಬಾಗಿನ ಅರ್ಪಿಸಿದರು.ಕಣ್ಮನ ಸೆಳೆಯುವ ಬಣ್ಣ ಬಣ್ಣದ ಗಣಪ

ಭದ್ರಾವತಿ: ಶ್ರಾವಣ ಮಾಸದ ಅಚ್ಚುಮೆಚ್ಚಿನ ಗಣಪತಿ ಹಬ್ಬ ಕೋವಿಡ್-೧೯ರ ಬಳಿಕ ವರ್ಷದಿಂದ ವರ್ಷಕ್ಕೆ ಮತ್ತಷ್ಟು ವಿಜೃಂಭಣೆ ಗೊಳ್ಳುತ್ತಿದ್ದು, ಸಾರ್ವಜನಿಕವಾಗಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಗಣಪತಿ ಮೂರ್ತಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ.

ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕಳೆದ ೧ ತಿಂಗಳಿನಿಂದಲೂ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ವಿವಿಧ ಸಂಘಟನೆಗಳ ಹೆಸರಿನಲ್ಲಿ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಕಾರ್ಯ ಕ್ರಮಗಳ ಪಟ್ಟಿ ಸಹ ಸಿದ್ಧಪಡಿಸಿಕೊಳ್ಳಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎರಡು-ಮೂರು ಬಾರಿ ಶಾಂತಿ ಸಭೆಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿದೆ. ಇದಕ್ಕೆ ಪೂರಕವಾಗಿ ಆಯಾ ಕಟ್ಟುನಿಟ್ಟಿನ ಸ್ಥಳಗಳಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇನ್ನು, ಸುಮಾರು ೨೦ ರಿಂದ ೩೦ ಪ್ರಮುಖ ಸಂಘಟನೆಗಳು ನಗರ ವ್ಯಾಪ್ತಿಯಲ್ಲಿದ್ದು, ಮೂರ್ತಿಗಳ ಪ್ರತಿಷ್ಠಾಪನೆ, ಸಂಭ್ರಮಕ್ಕೆ ಸನ್ನದ್ಧವಾಗಿವೆ.ಕಣ್ಮನ ಸೆಳೆಯುವ ಮೂರ್ತಿಗಳು:ಹಳೇನಗರದ ವಿವಿಧೆಡೆ ಮೂರ್ತಿಗಳನ್ನು ತಯಾರಿಸುವ ಕಲಾವಿದರಿಂದ ಈಗಾಗಲೇ ಆಕರ್ಷಕವಾದ ಬಣ್ಣ ಬಣ್ಣದ ಕಣ್ಮನ ಸೆಳೆಯುವ ಗಣಪತಿ ಮೂರ್ತಿಗಳು ಸಿದ್ಧಗೊಂಡಿವೆ. ಈ ಭಾಗದಲ್ಲಿ ಗುರುತಿಸಿಕೊಂಡಿರುವ ಬಸವರಾಜ್ ಕುಟುಂಬ ವರ್ಗದ ವರು ಹಾಗೂ ಸಹೋದರರು ಈ ಬಾರಿ ಹೆಚ್ಚಿನ ಮೂರ್ತಿಗಳನ್ನು ತಯಾರಿಸಿದ್ದು, ಉಳಿದಂತೆ ರಂಗಪ್ಪ ಕುಟುಂಬ ವರ್ಗ ಹಾಗೂ ಕೆ.ಆರ್.ಗುರುಮೂರ್ತಿಯವರು ಸಹ ಈ ಬಾರಿ ಹೆಚ್ಚಿನ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ.

ಇವುಗಳ ನಡುವೆ ಮಾರುಕಟ್ಟೆಗೆ ಬಣ್ಣ ಬಣ್ಣದ ಕಣ್ಮನ ಸೆಳೆಯುವ ಮೂರ್ತಿಗಳು ಕಳೆದ ೩ ದಿನಗಳ ಹಿಂದೆಯೇ ಲಗ್ಗೆ ಇಟ್ಟಿವೆ. ಗೌರಿ-ಗಣೇಶ ಮೂರ್ತಿಗಳನ್ನು ಖರೀದಿಸಲು ಜನರು ಮುಗಿಬಿದ್ದಿರುವುದು ಸಾಮಾನ್ಯವಾಗಿದೆ.

ಆನಂದಪುರ ಸುತ್ತಮುತ್ತ ಗೌರಿ ಹಬ್ಬದ ಸಂಭ್ರಮಆನಂದಪುರ: ಸ್ಥಳೀಯ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಂಗಳ ಗೌರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ಗೌರಿ ಹಬ್ಬವನ್ನು ಹಿಂದಿನಿಂದ ಸಾಂಪ್ರದಾಯದಂತೆ ನಡೆಸಿಕೊಂಡು ಬಂದಂತೆ. ಮನೆಯಲ್ಲಿ ಮಂಟಪ ನಿರ್ಮಾಣ ಮಾಡಿ ವಿವಿಧ ಅಲಂಕಾರದೊಂದಿಗೆ ಕೆಲವರು ಗೌರಿಯ ಮುಖವಾಡವಿಟ್ಟು, ಇನ್ನು ಕೆಲವರು ಕಳಸದಲ್ಲಿ ಗೌರಿಯ ಪ್ರತಿಷ್ಠಾಪನೆ ಮಾಡಿ ವಿವಿಧ ಬಗೆ ಬಗೆಯ ಖಾದ್ಯಗಳನ್ನು ಮಾಡಿ, ಗೌರಿಗೆ ನೈವೇದ್ಯ ಸಲ್ಲಿಸಿ ಮಹಿಳೆಯರು ಮಂಗಳ ಗೌರಿಗೆ ಬಾಗಿನ ಸಮರ್ಪಣೆ ಮಾಡಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಭಕ್ತರು ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡ ಮಂಗಳಗೌರಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

Share this article