ಕಾಫಿನಾಡಲ್ಲಿ ಗಣೇಶನ ಆಗಮನಕ್ಕೆ ಕೌಂಟ್‌ಡೌನ್!

KannadaprabhaNewsNetwork |  
Published : Sep 12, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರುಗೌರಿ-ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶೋತ್ಸವದ ಹವಾ ಜೋರಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ವಿವಿಧ ಭಂಗಿ, ಬಣ್ಣ, ಅಲಂಕಾರಗಳ ಗಣಪತಿ ಮೂರ್ತಿಗಳುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಗೌರಿ-ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶೋತ್ಸವದ ಹವಾ ಜೋರಾಗಿದೆ.

ವಿವಿಧ ಭಂಗಿ, ಬಣ್ಣ, ಅಲಂಕಾರಗಳ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮೂರ್ತಿ ಮಾರಾಟದ ಮಳಿಗೆಗಳು ಜನರನ್ನು ಸೆಳೆಯುತ್ತಿವೆ.ಹನುಮಂತಪ್ಪ ವೃತ್ತ, ಐಜಿ ರಸ್ತೆ, ಎಂಜಿ ರಸ್ತೆ, ಆಜಾದ್ ಪಾರ್ಕ್ ವೃತ್ತ, ತೊಗರಿಹಂಕಲ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಲು ಸಾಲಾಗಿ ಗಣಪತಿ ಮೂರ್ತಿಗಳನ್ನು ಜೋಡಿಸಲಾಗಿದೆ.

ಚಿಕ್ಕ ಗಣಪತಿಯಿಂದ ಬೃಹತ್ ಮೂರ್ತಿವರೆಗೆ ಹಲವು ವಿನ್ಯಾಸಗಳು ಗ್ರಾಹಕರ ಆಯ್ಕೆಗೆ ಸಿದ್ಧವಾಗಿವೆ. ಮಕ್ಕಳು, ಯುವಕರು ಕುಟುಂಬ ಸಮೇತ ಮೂರ್ತಿಗಳನ್ನು ವೀಕ್ಷಿಸಿ ತಮಗಿಷ್ಟವಾದ ಗಣಪತಿಯನ್ನು ಮುಂಗಡ ಹಣ ನೀಡಿ ಕಾಯ್ದಿರಿಸುತ್ತಿದ್ದಾರೆ.ಬೀದಿಗೊಂದು ಪೆಂಡಲ್, ಬಡಾವಣೆಗೊಂದು ಸಿದ್ಧತೆ: ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಗೆ ಬಡಾವಣೆ, ಗ್ರಾಮಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಯುವಕರು ಪೆಂಡಲ್ ನಿರ್ಮಾಣ, ವಿದ್ಯುತ್ ಅಲಂಕಾರ, ಧ್ವನಿವ್ಯವಸ್ಥೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಷೆಯಲ್ಲಿ ತೊಡಗಿದ್ದಾರೆ. ಮನೆಗಳಲ್ಲೂ ಗಣಪತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಯುತ್ತಿದೆ. ನಗರದಿಂದ ಗ್ರಾಮೀಣ ಭಾಗದವರೆಗೆ ಹಬ್ಬದ ವಾತಾವರಣ ಆವರಿಸಿದೆ.ಜಿಲ್ಲೆಯಲ್ಲಿ ಈ ಬಾರಿ 1,964 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ. ಕಳೆದ ವರ್ಷ ಕ್ಕಿಂತ ಈ ಸಂಖ್ಯೆ ಕೊಂಚ ಹೆಚ್ಚಾಗಿದೆ.ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸ್ ಕಣ್ಣು: ಗಣೇಶೋತ್ಸವದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಒತ್ತು ನೀಡಿದೆ. ಜಿಲ್ಲೆ ಯಲ್ಲಿ 160 ಸೂಕ್ಷ್ಮ ಹಾಗೂ 7 ಅತಿಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ. ಅಗತ್ಯವಿರುವ ಕಡೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.ಮನೆ ಬಾಗಿಲಿಗೂ ಗಣಪತಿ: ಮಾರುಕಟ್ಟೆಗೇ ತೆರಳಿ ಮೂರ್ತಿ ಖರೀದಿಸುವ ಪರಿಪಾಠದ ಜತೆಗೆ ಇದೀಗ ಆನ್‌ಲೈನ್‌ನಲ್ಲೂ ಗಣಪತಿ ಲಭ್ಯ. ವಿವಿಧ ಸಂಸ್ಥೆ ಗಳು ಆನ್‌ಲೈನ್ ಮೂಲಕ ಮೂರ್ತಿಗಳ ಮಾರಾಟದ ಜತೆಗೆ ಮನೆ ಬಾಗಿಲಿಗೆ ತಲುಪಿಸುವ ಸೇವೆ ಆರಂಭಿಸಿವೆ. ಮಕ್ಕಳು ಉದ್ಯೋಗ ಅಥವಾ ವಿದ್ಯಾಭ್ಯಾಸಕ್ಕಾಗಿ ದೂರದಲ್ಲಿರುವ ಸಂದರ್ಭದಲ್ಲಿ ವಯೋವೃದ್ಧರು ಮಾರುಕಟ್ಟೆಗೆ ತೆರಳುವ ತೊಂದರೆಯನ್ನೂ ಇದು ತಪ್ಪಿಸಲಿದೆ.

-- ಬಾಕ್ಸ್ಸ್--ಮಹಿಳೆಯರ ಕೈಯಲ್ಲಿ ‘ಸಾವಯವ’ ಗಣಪ: ಈ ಬಾರಿ ಗಣೇಶೋತ್ಸವದ ವಿಶೇಷ ಆಕರ್ಷಣೆ ಪರಿಸರ ಸ್ನೇಹಿ ಗಣಪತಿ. ಪಿಒಪಿ ಮೂರ್ತಿಗಳ ಮಾರಾಟಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಮಣ್ಣಿನ ಹಾಗೂ ಸಾವಯವ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.ಇದರ ನಡುವೆ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಗಣೇಶ ಮೂರ್ತಿ ತಯಾರಿಕೆಗೆ ಕೈಹಾಕಿರುವುದು ವಿಶೇಷ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ಇದುವರೆಗೆ ಉಪ್ಪಿನಕಾಯಿ, ಹಪ್ಪಳ, ಸಿರಿಧಾನ್ಯ ಉತ್ಪನ್ನ, ರೊಟ್ಟಿ, ಬಾಗಿಲು ತೋರಣ ಸೇರಿದಂತೆ 400ಕ್ಕೂ ಹೆಚ್ಚು ಬಗೆಯ ವಸ್ತು ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಇದೀಗ ಗಣಪತಿಯನ್ನೂ ತಾವೇ ರೂಪಿಸಿ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸ ಉದ್ಯಮಕ್ಕೆ ಮುನ್ನುಡಿ ಬರೆದಿದ್ದಾರೆ.ಭಕ್ತಿ, ಸಂಭ್ರಮದ ಜತೆಗೆ ಪರಿಸರ ಕಾಳಜಿ, ಮಹಿಳಾ ಸ್ವಾವಲಂಬನೆಯ ಸಂದೇಶವನ್ನು ಹೊತ್ತು ಈ ಬಾರಿಯ ಗಣೇಶೋತ್ಸವ ಕಾಫಿನಾಡಿನಲ್ಲಿ ಮತ್ತಷ್ಟು ವಿಶೇಷವಾಗುವ ನಿರೀಕ್ಷೆ ಮೂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌: ಜಿಲ್ಲೆಯ 1,05,493 ಮತದಾರರಿಗೆ ನೋಟೀಸ್‌
ಬಸವಯುಗ ಮಾನವರಿಗೆ ಘನತೆ ತಂದುಕೊಟ್ಟ ಯುಗ