ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಕೊಡವ ಕುಟುಂಬಗಳ ನಡುವೆ ನಡೆಯಲಿರುವ 24ನೇ ಆವೃತ್ತಿಯ ಹಾಕಿ ಪಂದ್ಯಾವಳಿ ‘ಕುಂಡ್ಯೋಳಂಡ ಹಾಕಿ ಕಾರ್ನಿವಲ್-2024’ಕ್ಕೆ ಈ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 30ರಂದು ಉದ್ಘಾಟನೆಗೊಳ್ಳಲಿರುವ ಕೊಡವ ಹಾಕಿ ಉತ್ಸವಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, 30 ದಿನಗಳ ಆಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಪ್ರೇಮಿಗಳು ಕಾತರರಾಗಿದ್ದಾರೆ.ಈ ಬಾರಿ ದಾಖಲೆಯ 360 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದೆ. ಪಂದ್ಯ ವೀಕ್ಷಿಸಲು 30,000 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. 12 ಸ್ಟೆಪ್ ಗ್ಯಾಲರಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಪ್ರತಿದಿನ ಮೂರು ಮೈದಾನದಲ್ಲಿ 6 ಪಂದ್ಯಗಳಂತೆ ಒಂದು ದಿನ 18 ಪಂದ್ಯಗಳು ನಡೆಯಲಿದೆ. 10 ದಿನಗಳ ಬಳಿಕ ಎರಡು ಹಾಗೂ ಫ್ರೀ ಕ್ವಾರ್ಟರ್ ಬಳಿಕ ಒಂದು ಮೈದಾನದಲ್ಲಿ ಪಂದ್ಯ ನಡೆಯಲಿದೆ. ಗ್ಯಾಲರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೊನೆಯ ಹಂತದ ಸಿದ್ಧತಾ ಕೆಲಸ ನಡೆಯುತ್ತಿದೆ. ನೀರು ಹಾಯಿಸಿ ಮೈದಾನವನ್ನು ಸಮಗೊಳಿಸಲಾಗುತ್ತಿದೆ.* ಹಾಕಿ ಜತೆ ಇನ್ನು ಹಲವು ಕಾರ್ಯಕ್ರಮ
ಹಾಕಿ ಉತ್ಸವ ಕೇವಲ ಪಂದ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಲವು ವಿಶೇಷ ಆಕರ್ಷಣೆಗಳು ಕೂಡ ಆಯೋಜಿಸಲಾಗಿದೆ. ಸೈನ್ಯಕ್ಕೆ ಸೇರಲು ಬಯಸುವ ಮಕ್ಕಳಿಗೆ ಸೇನಾಧಿಕಾರಿಗಳಿಂದ ತರಬೇತಿ, ಕೊಡವರ ಸಾಂಪ್ರದಾಯಿಕ ಆಹಾರ ಪದ್ಧತಿ ಸೇರಿದಂತೆ ವಿವಿಧ ಆಹಾರ ಪದ್ಧತಿ ಪರಿಚಯಿಸುವ ಉದ್ದೇಶದಿಂದ ಆಹಾರಮೇಳ, ವಧು-ವರರ ಸಮಾವೇಶ, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ.* ಈ ಬಾರಿ ಹಾಕಿ ಕಾರ್ನಿವಲ್ಇದುವರೆಗೆ ಹಾಕಿ ಹಬ್ಬ ನಡೆಸಿದ ಎಲ್ಲ ಕುಟುಂಬಗಳು ಹಾಕಿ ಉತ್ಸವ ಅಥವಾ ಹಾಕಿ ಫೆಸ್ಟ್ ಎನ್ನುವ ಹೆಸರಿನಲ್ಲಿ ಕ್ರೀಡಾಕೂಟ ನಡೆಸುತ್ತಿದ್ದರು. ಆದರೆ ಈ ಬಾರಿ ಹಾಕಿ ಉತ್ಸವದ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೆಲ್ಲವನ್ನು ಪರಿಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಈ ಬಾರಿ ಹಾಕಿ ಕಾರ್ನಿವಲ್ ಎಂಬ ಹೆಸರಿನಲ್ಲಿ ಹಾಕಿ ಹಬ್ಬ ನಡೆಯಲಿದೆ. ಈ ಹಿಂದಿನ ಎಲ್ಲ ಟೂರ್ನಿಗಿಂತ ವಿಭಿನ್ನವಾಗಿ ವಿಶೇಷತೆಗಳೊಂದಿಗೆ ಸಾಂಪ್ರದಾಯಿಕವಾಗಿ ಹಾಕಿ ನಡೆಸಲು ತೀರ್ಮಾನ ಕೈಗೊಂಡಿದ್ದರಿಂದ ಹಾಕಿ ಕಾರ್ನಿವಲ್ ಎಂಬ ಹೆಸರಿಡಲಾಗಿದೆ.* ಇಂದು ಉದ್ಘಾಟನೆ:
24ನೇ ಹಾಕಿ ಹಬ್ಬ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಮಾರ್ಚ್ 30ರಂದು ಬೆಳಗ್ಗೆ 10.30ಕ್ಕೆ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಶಾಸಕ ಎ.ಎಸ್ ಪೊನ್ನಣ್ಣ ಹಾಕಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ.ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ನಾಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಶಾಸಕ ಮಂತರ್ ಗೌಡ, ಎಂಎಲ್ಸಿ ಮಂಡೆಪಂಡ ಸುಜಾ ಕುಶಾಲಪ್ಪ, ಬರಹಗಾರ್ತಿ ಕಂಬೀರಂಡ ಕಾವೇರಿ ಪೊನ್ನಪ್ಪ, ಒಲಿಂಪಿಯನ್ ಅಂಜಪರವಂಡ ಬಿ. ಸುಬ್ಬಯ್ಯ, ಹಾಕಿ ವಿಶ್ವಕಪ್ ವಿಜೇತ ಪೈಕೆರ ಈ. ಕಾಳಯ್ಯ, ಒಲಿಂಪಿಯನ್ ಬಾಳೆಯಡ ಕೆ. ಸುಬ್ರಮಣಿ, ಇಬ್ಬನಿ ರೆಸಾರ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಶೆರಿ ಸೆಬಾಸ್ಟಿನ್, ಜಿಲ್ಲಾಧಿಕಾರಿ ವೆಂಕಟರಾಜು, ಎಸ್ಪಿ ರಾಮರಾಜನ್, ಮಾಜಿ ಕಾನೂನು ಸಚಿವ ಮೇರಿಯಂಡ ಸಿ. ನಾಣಯ್ಯ, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಮಾಜಿ ಎಂಎಲ್ಸಿಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಮಂಡೆಪಂಡ ಸುನಿಲ್ ಸುಬ್ರಮಣಿ ಪಾಲ್ಗೊಳ್ಳಲಿರುವರು.
ಮೆರವಣಿಗೆ: ಇದಕ್ಕೂ ಮೊದಲು ನಾಪೋಕ್ಲುವಿನ ಶ್ರೀರಾಮ ಮಂದಿರದಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ವರೆಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ಸಾಗಲಿದೆ. ಮೈದಾನದಲ್ಲಿ ಪಥಸಂಚಲನ ಮತ್ತು ಧ್ವಜಾರೋಹಣವಾದ ನಂತರ ಸಾಯ್ ಮಡಿಕೇರಿ ಬಾಲಕಿಯರು ಹಾಗೂ ಕೂರ್ಗ್ 11 ಬಾಲಕಿಯರ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ. ಕೊಡವ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ಹಾಕಿ ಹಬ್ಬ ಉದ್ಘಾಟನೆ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇಂಡಿಯನ್ ನೇವಿ ಹಾಗೂ ಕೂರ್ಗ್ 11 ತಂಡಗಳ ನಡುವಿನ ಉದ್ಘಾಟನಾ ಪಂದ್ಯ ಗಮನ ಸೆಳೆಯಲಿದೆ.----------
ಕುಂಡ್ಯೋಳಂಡ ಹಾಕಿ ಕಾರ್ನಿವಲ್‌ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ದಾಖಲೆಯ 360 ಕುಟುಂಬಗಳು ಪಂದ್ಯಾಟದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ವಧು-ವರರ ಸಮಾವೇಶ, ಫುಡ್ ಫೆಸ್ಟ್ ಸೇರಿದಂತೆ ಹಲವು ಕಾರ್ಯಕ್ರಮಗಳ ಆಯೋಜನೆಗೂ ಸಕಲ ಸಿದ್ಧತೆ ಮಾಡಲಾಗಿದೆ.। ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಅಧ್ಯಕ್ಷ,ಕುಂಡ್ಯೋಳಂಡ ಹಾಕಿ ಉತ್ಸವ.