ಒನಕೆ ಓಬವ್ವ ಉತ್ಸವಕ್ಕೆ ಕ್ಷಣಗಣನೆ

KannadaprabhaNewsNetwork |  
Published : Jan 31, 2026, 02:30 AM IST
ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಎರಡು ದಿನಗಳು ನಡೆಯುವ ಒನಕೆ ಓಬವ್ವ ಉತ್ಸವದ ವೇದಿಕೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು. | Kannada Prabha

ಸಾರಾಂಶ

ಗುಡೇಕೋಟೆಯಲ್ಲಿ ಈ ಬಾರಿ ಸರ್ಕಾರಿ ಓಬವ್ವ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಗ್ರಾಮದಲ್ಲಿ ಪ್ರೇಕ್ಷಕರನ್ನು ಕೈಬೀಸಿ ಕರೆಯುವಂತೆ ಬೆಳಕಿನ ಅಲಂಕಾರ ಮಾಡಲಾಗಿದೆ.

ಕೂಡ್ಲಿಗಿ: ರಾಜ್ಯದ ವೀರಮಹಿಳೆ ಒನಕೆ ಓಬವ್ವ ತವರೂರಾದ ಗುಡೇಕೋಟೆಯಲ್ಲಿ ಈ ಬಾರಿ ಸರ್ಕಾರಿ ಓಬವ್ವ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಗ್ರಾಮದಲ್ಲಿ ಪ್ರೇಕ್ಷಕರನ್ನು ಕೈಬೀಸಿ ಕರೆಯುವಂತೆ ಬೆಳಕಿನ ಅಲಂಕಾರ ಮಾಡಲಾಗಿದೆ.

ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಗುಡೇಕೋಟೆ ಒನಕೆ ಓಬವ್ವ ಉತ್ಸವದ 3ನೇ ವರ್ಷದ ಆಚರಣೆಯು ಹಂಪಿ ಉತ್ಸವಕ್ಕೆ ಪೈಪೋಟಿ ನೀಡುವ ಹಾಗೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಕಳೆದೆರಡು ವರ್ಷಗಳು ಉತ್ಸವ ನಡೆದ ಗುಡೇಕೋಟೆ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಿಂದ ಈ ಸಲ ವೇದಿಕೆಯ ವಿಶಾಲ ಮೈದಾನಕ್ಕೆ ಸ್ಥಳಾಂತರಗೊಂಡಿದೆ. ಮೊಳಕಾಲ್ಮೂರು ರಸ್ತೆ ಪಕ್ಕದ ವಿಶಾಲವಾದ ಬಯಲಿನಲ್ಲಿ 80 ಅಡಿ ಉದ್ದ, 50 ಅಡಿ ಅಗಲವುಳ್ಳ ಬೃಹತ್ ವೇದಿಕೆ ತಲೆ ಎತ್ತಿದೆ. ಅದರಂತೆ, ಗಣ್ಯರು, ಅತಿಥಿಗಳು ಸೇರಿ ಸಾರ್ವಜನಿಕರಿಗೆ ಪ್ರತ್ಯೇಕವಾಗಿ 10 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಹಾಗೂ ರಾಜ್ಯದ ನಾನಾ ಭಾಗದ ಕಲಾವಿದರಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

ಉತ್ಸವದ ಹಿನ್ನೆಲೆಯಲ್ಲಿ ಗುಡೇಕೋಟೆ ಗ್ರಾಮದಲ್ಲಿ ಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಕಳೆದ ಒಂದು ವಾರದಿಂದ ನಡೆದಿದೆ. ತಾಲೂಕು ಆಡಳಿತ, ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಗ್ರಾಪಂ ಆಡಳಿತ, ತಾಲೂಕಿನ ನಾನಾ ಭಾಗದ ಮುಖಂಡರು, ಸಂಘ- ಸಂಸ್ಥೆಯವರು ಸಹ ಅತ್ಯಂತ ಆಸಕ್ತಿಯಿಂದಲೇ ಒನಕೆ ಓಬವ್ವ ಉತ್ಸವದ ಯಶಸ್ವಿಗಾಗಿ ತಯಾರಿಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.ಗುಡೇಕೋಟೆಯಲ್ಲಿ ಕಲೆ ಅನಾವರಣ

ಜ. 31ರಿಂದ ಎರಡು ದಿನಗಳ ಕಾಲ ನಡೆಯುವ ಒನಕೆ ಓಬವ್ವ ಉತ್ಸವ ಕಲೆ ಅನಾವರಣಕ್ಕೆ ವೇದಿಕೆಯಾಗಲಿದೆ. ಅಳಿವಿನಂಚಿಗೆ ಸರಿದ ಕಹಳೆ, ತಮಟೆ, ಉರುಮೆ, ಒನಕೆ ಓಬವ್ವ, ಪಾಳೇಗಾರರ ಛದ್ಮವೇಷಧಾರಿಗಳ ಮೆರವಣಿಗೆ ನಡೆಯಲಿದೆ. ಉತ್ಸವದಲ್ಲಿ ಸ್ಥಳೀಯ ಪ್ರತಿಭೆಗಳ ಗಾಯನ, ನೃತ್ಯ, ರೂಪಕ, ಭರತನಾಟ್ಯ, ಕಿರುನಾಟಕಗಳ ಜತೆಗೆ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ತಂಡದ ಗಾಯನ ಜ. 31ರಂದು ರಾತ್ರಿ ರಂಜಿಸಿದರೆ ಫೆ. 1ರಂದು ಸಂಗೀತ ಮಾಂತ್ರಿಕ ಗುರುಕಿರಣ್ ತಂಡ ಮೋಡಿ ಮಾಡಲಿದೆ. ಇದಲ್ಲದೆ, ಕಾಮಿಡಿ ಕಿಲಾಡಿ ತಂಡದ ಕಲಾವಿದರ ಹಾಸ್ಯದ ಹೊನಲು ಹರಿಯಲಿದೆ.ಮಾಜಿ ಸಚಿವ, ಶಾಸಕರ ಕಡೆಗಣನೆ ಆರೋಪ

ಕೂಡ್ಲಿಗಿ:

ಒನಕೆ ಓಬವ್ವ ಉತ್ಸವ ಆಹ್ವಾನ ಪತ್ರಿಕೆಯಲ್ಲಿ ಕೂಡ್ಲಿಗಿ ತಾಲೂಕಿನ ಮಾಜಿ ಸಚಿವರು, ಮಾಜಿ ಶಾಸಕರ ಹೆಸರನ್ನು ಹಾಕಿಸದೇ ಹಿರಿಯ ರಾಜಕಾರಿಣಿಗಳನ್ನು ಕಡೆಗಣನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಎನ್.ಎಂ. ನೂರ್ ಅಹಮದ್ ಆರೋಪಿಸಿದರು.

ಒನಕೆ ಓಬವ್ವ ಉತ್ಸವದ ಆಹ್ವಾನ ಪತ್ರಿಕೆಯನ್ನು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೋ, ತಹಸೀಲ್ದಾರ್ ಪ್ರಕಟಿಸಿದ್ದಾರೋ ಅಥವಾ ಶಾಸಕರು ಪ್ರಕಟಿಸಿದ್ದಾರೋ ತಿಳಿಯುತ್ತಿಲ್ಲ. ಕೆಲ ಮಠಾಧೀಶರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸಿದ್ದಾರೆ. ಅದಕ್ಕೆ ನಮ್ಮದೇನೂ ತಕರಾರಿಲ್ಲ. ಅದರಂತೆ ಇತರ ಜಾತಿ, ಧರ್ಮಗಳ ಸ್ವಾಮಿಗಳ ಹೆಸರನ್ನು ಹಾಕಿಸಬೇಕಿತ್ತು. ಕೂಡ್ಲಿಗಿಯ ಮಾಜಿ ಸಚಿವರಾದ ಭಾಗೀರಥಿ ಮರುಳಸಿದ್ದನಗೌಡ, ಎನ್.ಎಂ.ನಬಿ, ಮಾಜಿ ಶಾಸಕರಾದ ಕೆ.ವಿ. ರವೀಂದ್ರನಾಥ ಬಾಬು ಮುಂತಾದವರ ಹೆಸರನ್ನು ಹಾಕುವ ಮೂಲಕ ಸಾಂವಿಧಾನಿಕ ಹುದ್ದೆ ಅಲಂಕರಿಸಿದವರಿಗೆ ಈ ಉತ್ಸವದಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಅವರು ಗೌರವ ನೀಡಬೇಕಿತ್ತು ಎಂದರು.

ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್ ಮಾತನಾಡಿ, ಒನಕೆ ಓಬವ್ವ ಸಂಘದ ಅಧ್ಯಕ್ಷನಿದ್ದು ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿಲ್ಲ. ಒನಕೆ ಓಬವ್ವ ವಂಶಸ್ಥರನ್ನೂ ಕಡೆಗಣಿಸಲಾಗಿದೆ, ಶಾಸಕರು ಮುಂದಿನ ದಿನಗಳಲ್ಲಾದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ಉತ್ಸವಗಳನ್ನು ಮಾಡಲಿ ಎಂದರು.

ವಕೀಲರಾದ ಎಲ್.ಎಸ್. ಬಷೀರ್ ಅಹಮದ್ ಮಾತನಾಡಿ, ಒನಕೆ ಓಬವ್ವ ಉತ್ಸವನ್ನು ಕೋಟಿಗಟ್ಟಲೇ ಹಣ ಖರ್ಚು ಮಾಡಿ ಅದ್ಧೂರಿಯಾಗಿ ಆಚರಣೆ ಮಾಡುತ್ತಿರುವುದು ನಮಗೂ ಸಂತಸ ಇದೆ. ತಮಗೆ ತಿಳಿದಂತೆ ಏಕಪಕ್ಷೀಯವಾಗಿ ನಿರ್ಧಾರ ಕೈಗೂಂಡಿರುವುದು ನಮಗೆ ಅಸಮಧಾನ ತಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ತಳಾಸ ವೆಂಕಟೇಶ್, ಮಾದಿಹಳ್ಳಿ ನಜೀರ್, ಮಂಜುನಾಥ ಮಯೂರ, ಚಿರಿಬಿ ಮಂಜುನಾಥ, ಗೋವಿಂದಗಿರಿ ಚಿತ್ತಪ್ಪ ಸೇರಿದಂತೆ ಮಾಜಿ ಸಚಿವ ಎನ್.ಎಂ.ನಬೀಸಾಬ್ ಬೆಂಬಲಿಗರು ಹಾಜರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ
ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ : ಸಚಿವರ ಸವಾಲ್