ಗೋಕರ್ಣ: ಫೆ. ೧೧ರಿಂದ ಪ್ರಾರಂಭವಾಗಲಿರುವ ಶಿವರಾತ್ರಿ ಜಾತ್ರಾ ಮಹೋತ್ಸವದ ಸಿದ್ಧತಾ ಸಭೆ ಇಲ್ಲಿನ ಗ್ರಾಪಂ ಸಭಾಭವನದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಕುಡಿಯುವ ನೀರನ್ನು ವಿವಿಧ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇಡಲು ಸೂಚಿಸಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ೨೪ ಗಂಟೆ ಕೌಂಟರ್ ತೆರೆದು ಸೇವೆ ನೀಡುವುದು ಹಾಗೂ ಸ್ವಚ್ಛತೆಯ ಬಗ್ಗೆ, ಅನ್ನದಾನ ವ್ಯವಸ್ಥೆಯಲ್ಲಿ ಆಹಾರ ಪರೀಕ್ಷೆ ನಡೆಸಲು ಸೂಚಿಸಲಾಯಿತು. ಯಾತ್ರಿಕರಿಗೆ ಹಠಾತ್ ಅನಾರೋಗ್ಯಕ್ಕೆ ಒಳಗಾದರೆ ಅಂಗಡಿ ಮುಂಗಟ್ಟುಗಳಿರುವ ಮಾರ್ಗದಲ್ಲಿ ಮಿನಿ ಆ್ಯಂಬುಲೆನ್ಸ್ ನಿಯೋಜಿಸುವ ಅಗತ್ಯದ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಪ್ರಸ್ತಾಪಿಸಿದರು.ಪ್ರಮುಖ ರಸ್ತೆಗಳಲ್ಲಿನ ಹೊಂಡ ಮುಚ್ಚಿ ಸರಿಪಡಿಸಿ ಸುಸ್ಥಿತಿಯಲ್ಲಿರುವ ಕುರಿತು ಚರ್ಚೆ ನಡೆಯಿತು. ರಥಬೀದಿಯಲ್ಲಿನ ಡಾಂಬರು ರಸ್ತೆಯ ಹೊಂಡವನ್ನು ಸಿಮೆಂಟ್‌ನಿಂದ ಮುಚ್ಚಿದ್ದು, ಅದು ಕಿತ್ತು ಬೀಳುತ್ತಿದೆ. ಇದರಿಂದ ಮಹಾಬಲೇಶ್ವರ ಮಂದಿರದ ರಥೋತ್ಸವಕ್ಕೂ ತೊಡಕಾಗುತ್ತದೆ ಎಂದು ಸಂತೋಷ ಅಡಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ನೂತನ ರಸ್ತೆ ನಿರ್ಮಾಣದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಮ್ಮಿಂದ ದುರಸ್ತಿ ಕಾರ್ಯ ಅಸಾಧ್ಯ ಎಂದರು. ಸಾರ್ವಜನಿಕರ ಆಗ್ರಹದ ಮೇರೆಗೆ ಸ್ವಂತ ಹಣದಿಂದ ತಾತ್ಕಾಲಿಕ ದುರಸ್ತಿ ಮಾಡಿಸಿದ್ದಾಗಿ ಗ್ರಾಪಂ ಸದಸ್ಯ ಪ್ರಭಾಕರ ಪ್ರಸಾದ ಹೇಳಿದರು.
ಕೋಟಿತೀರ್ಥ, ಕಡಲತೀರದಲ್ಲಿ ಭಕ್ತರ ಸುರಕ್ಷತೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆಯ ಸಿಬ್ಬಂದಿ, ಬೋಟ್, ಜೀವರಕ್ಷಕ ಸಿಬ್ಬಂದಿ ಮತ್ತಿತರ ಪರಿಕರ ಒದಗಿಸಲು ಸೂಚಿಸಲಾಯಿತು.
ಜಾತ್ರಾ ಸಮಯದಲ್ಲಿ ಅಗ್ನಿಶಾಮಕ ವಾಹನ ಇಡುವ ಕುರಿತು ಸಭೆಯಲ್ಲಿ ಚರ್ಚೆ ನಡೆದು, ಅಗ್ನಿಶಾಮಕ ವಾಹನವನ್ನು ಕುಮಟಾ ಘಟಕದಿಂದ ಪಡೆದರೆ ಅದಕ್ಕೆ ನಿಗದಿ ಹಣ ತುಂಬ ಬೇಕಾಗುತ್ತದೆ, ಇದನ್ನು ಅಗತ್ಯ ಸೇವೆ ಎಂದು ಗುರುತಿಸಿ ಶುಲ್ಕರಹಿತ ಮಾಡಬೇಕು, ಅಲ್ಲದೇ ಶಾಶ್ವತ ಅಗ್ನಿಶಾಮಕ ಠಾಣೆ ಇಲ್ಲಿ ಇರಬೇಕು ಎಂಬ ಆಗ್ರಹ ಕೇಳಿಬಂತು.
ಕಂದಾಯ, ಆರೋಗ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಪ್ರವಾಸೋದ್ಯಮ, ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರು, ವ್ಯವಸ್ಥಾಪಕರು ಪಾಲ್ಗೊಂಡಿದ್ದರು.