ವಿಧಾನಸಭೆ : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಕಾರ್ಯಗಳಲ್ಲಿ ಸುಧಾರಣೆಗೆ ಶಿಫಾರಸು ಮಾಡಲು ಸದನ ಸಮಿತಿ ರಚಿಸುವುದು ಹಾಗೂ ಅಗತ್ಯವಿದ್ದರೆ ಕೆಪಿಎಸ್‌ಸಿ ಮೇಲೆ ನಿಗಾವಹಿಸಲು ಸಚಿವ ಸಂಪುಟ ಉಪಸಮಿತಿ ರಚಿಸುವುದಾಗಿ ಸರ್ಕಾರ ತಿಳಿಸಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ತಡೆ ಕುರಿತಂತೆ ಸದನದಲ್ಲಿ ನಡೆಸಲಾಗಿದ್ದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಉತ್ತರ ನೀಡಿದರು. ಕೆಪಿಎಸ್‌ಸಿ ಸಾಂವಿಧಾನಿಕ ಸಂಸ್ಥೆಯಾದ ಕಾರಣ ಸರ್ಕಾರ ನೇರವಾಗಿ ಕೆಪಿಎಸ್‌ಸಿ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷಾ ಕ್ರಮದಲ್ಲಿ ಬದಲಾವಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೆಪಿಎಸ್‌ಸಿ ಸುಧಾರಣೆಗೆ ಹೋಟಾ ಸಮಿತಿ ನೀಡಿರುವ ಶಿಫಾರಸನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಈ ಹಿಂದೆ ನಾನು ಕೃಷಿ ಸಚಿವನಾಗಿದ್ದಾಗ ಕೆಪಿಎಸ್‌ಸಿ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ 630 ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದೆ. ಈಗ ಕಂದಾಯ ಸಚಿವನಾಗಿ ಕೆಇಎ ಮೂಲಕವೇ 1000 ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಿದ್ದೇನೆ. ಕೆಇಎ ನಡೆಸುವ ಯಾವುದೇ ಪರೀಕ್ಷೆಯಲ್ಲೂ ಗೊಂದಲ ಮತ್ತು ಅಕ್ರಮಗಳ ಆರೋಪ ಬಂದಿಲ್ಲ. ಆದರೆ, ಕೆಪಿಎಸ್‌ಸಿ ಮೂಲಕ ನಡೆಸಲಾಗುವ ಪರೀಕ್ಷೆಗಳು ಒಂದಿಲ್ಲೊಂದು ಗೊಂದಲ ಸೃಷ್ಟಿಯಾಗಿ ಅಭ್ಯರ್ಥಿಗಳು ಪರದಾಡುವಂತಾಗುತ್ತದೆ ಎಂದರು.
ಕೆಇಎ ತನ್ನ ಬಳಿ 2 ಸಾವಿರ ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದು, ಅದನ್ನು ಕನ್ನಡಕ್ಕೂ ತರ್ಜುಮೆ ಮಾಡಿ ಇಡಲಾಗಿದೆ. ಪರೀಕ್ಷೆ ನಡೆಸುವ ಆ ಸಂಗ್ರಹದಲ್ಲಿ 20ರಿಂದ 30 ಪ್ರಶ್ನೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಗೊಂದಲವುಂಟಾಗುವುದಿಲ್ಲ. ಇದರ ಜತೆಗೆ ಹಲವು ಉತ್ತಮ ವ್ಯವಸ್ಥೆ ಕೆಇಎನಲ್ಲಿದ್ದು, ಅವುಗಳನ್ನು ಗುರುತಿಸಿ ಕೆಪಿಎಸ್‌ಸಿಗೆ ಅಳವಡಿಸುವಂತೆ ಸೂಚಿಸಲಾಗುವುದು ಎಂದು ಕೃಷ್ಣ ವಿವರಿಸಿದರು.
5 ವರ್ಷಗಳ ಹುದ್ದೆ ಭರ್ತಿಯ ವಿವರ ನೀಡಲು ಕ್ರಮ:
ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳಲ್ಲಿ ಗೊಂದಲ ನಿವಾರಣೆ ಮತ್ತು ಅಕ್ರಮ ತಡೆಗೆ ಸರ್ಕಾರ ಕೆಲವೊಂದು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಅದರಂತೆ ಇನ್ನು ಮುಂದೆ ಪ್ರತಿ ವರ್ಷ ನೇಮಕಾತಿ ನಡೆಸಲು ನಿರ್ಧರಿಸಲಾಗಿದೆ. ಅದಕ್ಕೂ ಮುನ್ನ ಮುಂದಿನ 5 ವರ್ಷಗಳ ಅವಧಿಯಲ್ಲಿ ಎಷ್ಟು ಹುದ್ದೆಗಳಲ್ಲಿ ನಿವೃತ್ತರಾಗುತ್ತಾರೆ, ಎಷ್ಟು ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಎಂಬ ಪಟ್ಟಿಯನ್ನು ಸಿದ್ಧಪಡಿಸಿ, ಯಾವ ವರ್ಷ ಎಷ್ಟು ನೇಮಕಾತಿಗೆ ಪರೀಕ್ಷೆ ನಡೆಸಬೇಕು ಎಂಬುದನ್ನು ಕೆಪಿಎಸ್‌ಸಿಗೆ ಕಳುಹಿಸಿಕೊಡಲಾಗುವುದು. ಯುಪಿಎಸ್‌ಸಿಯಲ್ಲಿರುವಂತೆ ಪರೀಕ್ಷಾ ಕ್ಯಾಲೆಂಡರ್ ಸಿದ್ಧಪಡಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಸಿ ದರ್ಜೆ ಹುದ್ದೆಗಳಿಗೆ ಗಡುವು:
ಉಳಿದೆಲ್ಲ ಹುದ್ದೆಗಳಿಗಿಂತ ಸಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲೂ ಕೆಪಿಎಸ್‌ಸಿ ವಿಳಂಬ ಮಾಡುತ್ತಿದೆ. ಕೇವಲ ಪರೀಕ್ಷೆ ಮತ್ತು ರೋಸ್ಟರ್, ಮೆರಿಟ್ ಅನ್ವಯವಾಗುವ ಸಿ ದರ್ಜೆ ಹುದ್ದೆಗಳ ನೇಮಕ ಪ್ರತಿಕ್ರಿಯೆ ಅಂತಿಮಗೊಳಿಸುವಲ್ಲಿನ ವಿಳಂಬ ಸರಿಯಲ್ಲ. ಹೀಗಾಗಿಯೇ ಸಿ ದರ್ಜೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವ ವೇಳೆಯಲ್ಲೇ ಅಂತಿಮ ಗಡುವು ನಿಗದಿ ಮಾಡಲಾಗುವುದು. ಅದರಿಂದ ನೇಮಕಾತಿಯಲ್ಲಿನ ವಿಳಂಬ ತಪ್ಪಲಿದೆ ಎಂದು ತಿಳಿಸಿದರು.
ಸದನ ಸಮಿತಿ ರಚನೆ, ಸದಸ್ಯರ ಸಂಖ್ಯೆ ಇಳಿಕೆ:
ಕೆಪಿಎಸ್‌ಸಿಯಲ್ಲಿನ ಸುಧಾರಣೆಗೆ ಶಾಸಕರಿಂದ ಅಭಿಪ್ರಾಯ ಪಡೆಯಲು ಸದನ ಸಮಿತಿ ರಚಿಸಲಾಗುವುದು. ಈ ಸಮಿತಿಯು ಅಧ್ಯಯನ ನಡೆಸಿ ಮುಂದಿನ ಅಧಿವೇಶನದಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗುತ್ತದೆ. ಅಗತ್ಯವಿದ್ದರೆ ಕೆಪಿಎಸ್‌ಸಿ ಕಾರ್ಯದ ಮೇಲೆ ನಿಗಾವಹಿಸಲು ಸಚಿವ ಸಂಪುಟ ಉಪಸಮಿತಿಯನ್ನೂ ರಚಿಸಲಾಗುವುದು. ಕೆಪಿಎಸ್‌ಸಿಯಲ್ಲಿ ಸದ್ಯ 18 ಸದಸ್ಯರಿದ್ದು, ಆ ಸಂಖ್ಯೆಯನ್ನು 8ಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಕೆಪಿಎಸ್‌ಸಿ ಸದಸ್ಯರನ್ನು ತೆಗೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಆದರೆ, 2027ರ ಮೇ ವೇಳೆಗೆ 18 ಸದಸ್ಯರ ಪೈಕಿ 10 ಮಂದಿಯ ಅವಧಿ ಮುಕ್ತಾಯವಾಗಿ 8 ಮಂದಿ ಮಾತ್ರ ಉಳಿಯಲಿದ್ದಾರೆ. ಅದಾದ ನಂತರ ಸದಸ್ಯರನ್ನು ನೇಮಿಸಲಾಗುವುದಿಲ್ಲ. ಆ 8 ಮಂದಿಯ ಅವಧಿ ಮುಗಿದ ನಂತರ ಹೊಸ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ತಿದ್ದುಪಡಿ ಕಾಯ್ದೆಯಲ್ಲಿ ಬದಲಾವಣೆ:
ಕೆಪಿಎಸ್‌ಸಿಗೆ ಸುಧಾರಣೆ ಉದ್ದೇಶದಿಂದ ಈ ಹಿಂದೆ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನೈತಿಕ ವಿಧಾನಗಳ ತಡೆ) ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಅದಕ್ಕೆ ಅನುಮೋದನೆ ನೀಡಲು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಕಾಯ್ದೆಯನ್ನು ರಾಷ್ಟ್ರಪತಿ ಅವರ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ. ವಿಧೇಯಕದಲ್ಲಿನ ಬಹುತೇಕ ಎಲ್ಲ ಅಂಶಗಳನ್ನು ಒಪ್ಪಿರುವ ಕೇಂದ್ರ ಸರ್ಕಾರ, ಕೆಪಿಎಸ್‌ಸಿಗೆ ಸಂಬಂಧಿಸಿದ ನಿಯಮ ರಚಿಸುವಾಗ ಆಯೋಗ ಸಂಪರ್ಕಿಸುವ ಅವಶ್ಯಕತೆಯಿಲ್ಲ ಎಂಬ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಆ ಅಂಶವನ್ನು ಕೈಬಿಟ್ಟು ವಿಧೇಯಕಕ್ಕೆ ಅನುಮೋದನೆ ನೀಡಲು ರಾಷ್ಟ್ರಪತಿ ಅವರಿಗೆ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.