ಸಾರಾಂಶ
ಮುಖ್ಯ ಪತ್ರಿಕೆ-2ರ ಪರೀಕ್ಷೆ ಆರಂಭಕ್ಕೂ ಮೊದಲೇ ಉತ್ತರ ಪುಸ್ತಿಕೆಗಳ ಸೀಲ್ಡ್ ಬಂಡಲ್ ತೆರೆದ ಸ್ಥಿತಿಯಲ್ಲಿತ್ತು. ಈ ಕುರಿತು ತನಿಖೆಗೆ ನಗರದ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಕೆಪಿಎಸ್ಸಿಗೆ ದೂರು ನೀಡಿದ್ದಾರೆ.
ಬೆಂಗಳೂರು : ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಬುಧವಾರ ನಡೆದ ಮುಖ್ಯ ಪತ್ರಿಕೆ-2ರ ಪರೀಕ್ಷೆ ಆರಂಭಕ್ಕೂ ಮೊದಲೇ ಉತ್ತರ ಪುಸ್ತಿಕೆಗಳ ಸೀಲ್ಡ್ ಬಂಡಲ್ ತೆರೆದ ಸ್ಥಿತಿಯಲ್ಲಿತ್ತು. ಈ ಕುರಿತು ತನಿಖೆಗೆ ನಗರದ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಕೆಪಿಎಸ್ಸಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಕೆಪಿಎಸ್ಸಿ ಕಾರ್ಯದರ್ಶಿ ಅವರಿಗೆ ಪತ್ರದ ಮೂಲಕ ದೂರು ನೀಡಿರುವ ನಗರದ ಮೈಸೂರು ರಸ್ತೆ ಕಸ್ತೂರ ಬಾ ನಗರದ ಬಿಬಿಎಂಪಿ ಪಿಯು ಕಾಂಪೋಸಿಟ್ ಕಾಲೇಜು ಕೇಂದ್ರದ ಅಭ್ಯರ್ಥಿಗಳು, ಬುಧವಾರ ನಡೆದ ಸಾಮಾನ್ಯ ಅಧ್ಯಯನ-1ರ(ಪತ್ರಿಕೆ-2) ಉತ್ತರ ಪತ್ರಿಕೆಯನ್ನು ಬೆಳಗ್ಗೆ 9 ಗಂಟೆ ವೇಳೆಗೆ ನಮ್ಮ ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 3ರಲ್ಲಿ ವಿತರಿಸುವ ಸಮಯದಲ್ಲಿ ಸೀಲ್ ತೆಗೆದಿರುವುದನ್ನು ಕಂಡು ಆಕ್ಷೇಪಿಸಿದೆವು. ಆಗ ಕೆಪಿಎಸ್‌ಸಿ ಸಿಬ್ಬಂದಿ ಅದರ ಕುರಿತು ಮುಚ್ಚಳಿಕೆ ಬರೆದು ಕೊಡುವಂತೆ ಸೂಚಿಸಿದರು. ಅದರಂತೆ ಈ ದೂರನ್ನು ನೀಡಲಾಗುತ್ತಿದೆ. ಪರೀಕ್ಷಾ ಅವಧಿಗೂ ಮೊದಲೇ ಉತ್ತರ ಪುಸ್ತಿಕಗಳ ಸೀಲ್ಡ್ ಬಂಡಲ್ ತೆರೆದದ್ದು ಹೇಗೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಇದೇ ಕೇಂದ್ರದ ಅಭ್ಯರ್ಥಿಗಳು ಸೋಮವಾರ ನಡೆದ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಬಂಡಲ್ ತೆರೆಯಲಾಗಿತ್ತೆಂದು ಆರೋಪಿಸಿ ಕೆಪಿಎಸ್‌ಸಿಗೆ ಪತ್ರ ಬರೆದು ದೂರು ನೀಡಿದ್ದರು.
ಭಾಷಾಂತರದಲ್ಲಿ ಮತ್ತೆ ಲೋಪ:
ಈ ಮಧ್ಯೆ, ಪ್ರಶ್ನೆ ಪತ್ರಿಕೆಯ ಕನ್ನಡ ಭಾಷಾಂತರದಲ್ಲಿ ಮತ್ತೆ ತಪ್ಪುಗಳಾಗಿವೆ ಎಂದು ವಿದ್ಯಾರ್ಥಿಗಳಿಂದ ದೂರುಗಳು ಕೇಳಿಬಂದಿವೆ. ಪ್ರಶ್ನೆಯೊಂದರಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಪ್ರಧಾನಮಂತ್ರಿ ಗ್ರಾಮೀಣ ಕಲ್ಯಾಣ ಯೋಜನೆ ಎಂದು ತಪ್ಪಾಗಿ ಮುದ್ರಿಸಲಾಗಿದೆ. ಅಸಲಿಗೆ ಗರೀಬ್ ಎಂದರೆ ಗ್ರಾಮೀಣ ಅಲ್ಲ, ಬಡವರ ಕಲ್ಯಾಣ ಯೋಜನೆ ಎಂದಾಗಬೇಕಿತ್ತು. ಇದೇ ರೀತಿ ಇನ್ನೂ ಕೆಲ ಪ್ರಶ್ನೆಗಳಲ್ಲಿ ಭಾಷಾಂತರದಲ್ಲಿ ಲೋಪಗಳು ಕಂಡುಬಂದಿವೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.