ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಇದೀಗ ರಾಜ್ಯ ಸರ್ಕಾರ ಧಾವಿಸಿದೆ. ಪ್ರತಿ ಕ್ವಿಂಟಲ್‌ಗೆ ಗರಿಷ್ಠ 250 ರು. ಸಹಾಯಧನ ಸೇರಿಸಿ 2,150 ರು. ‘ಮಾರುಕಟ್ಟೆ ಮಧ್ಯಪ್ರವೇಶ ದರ(ಎಂಐಪಿ)ದಂತೆ’ 40 ಲಕ್ಷ ಟನ್‌ ಮೆಕ್ಕೆಜೋಳ ಖರೀದಿಗೆ ಆದೇಶ ಹೊರಡಿಸಿದೆ.

 ಬೆಂಗಳೂರು : ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮೆಕ್ಕೆಜೋಳ ಬೆಳೆಗಾರರ ನೆರವಿಗೆ ಇದೀಗ ರಾಜ್ಯ ಸರ್ಕಾರ ಧಾವಿಸಿದೆ. ಪ್ರತಿ ಕ್ವಿಂಟಲ್‌ಗೆ ಗರಿಷ್ಠ 250 ರು. ಸಹಾಯಧನ ಸೇರಿಸಿ 2,150 ರು. ‘ಮಾರುಕಟ್ಟೆ ಮಧ್ಯಪ್ರವೇಶ ದರ(ಎಂಐಪಿ)ದಂತೆ’ 40 ಲಕ್ಷ ಟನ್‌ ಮೆಕ್ಕೆಜೋಳ ಖರೀದಿಗೆ ಆದೇಶ ಹೊರಡಿಸಿದೆ.

2025-26ನೇ ಸಾಲಿನ ಮುಂಗಾರು ಹಂಗಾಮಿನ ಮೆಕ್ಕೆಜೋಳಕ್ಕೆ ‘ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ’ಯಡಿ ಬೆಲೆ ವ್ಯತ್ಯಾಸದ ಮೊತ್ತ ಪಾವತಿಸಲು ಸರ್ಕಾರ ನಿರ್ಧರಿಸಿದೆ. ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ ಅಥವಾ ಉಪ ಮಾರುಕಟ್ಟೆಗಳ ಮೂಲಕವೇ ಇದನ್ನು ಅನುಷ್ಠಾನಗೊಳಿಸಬೇಕು. ರೈತರ ನೋಂದಣಿ ಕಾರ್ಯವನ್ನು ಬಯೋಮೆಟ್ರಿಕ್‌ ಮೂಲಕ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ಗರಿಷ್ಠ 2,150 ರು. ಮಾರುಕಟ್ಟೆ ಮಧ್ಯಪ್ರವೇಶ ದರ ನಿಗದಿ ಮಾಡಿದೆ. ಅಂದರೆ ಉದಾ: ಪ್ರಸ್ತುತ 1,900 ಮಾರುಕಟ್ಟೆ ಬೆಲೆ ಇದ್ದು, ಇದಕ್ಕೆ 250 ರು. ನಿಗದಿ ಮಾಡಲಾಗುತ್ತದೆ. ಅದೇ ಮಾರುಕಟ್ಟೆ ದರ 2,000 ರುಪಾಯಿ ಇದ್ದರೆ 150 ರು, ಮಾರುಕಟ್ಟೆ ದರ 2,100 ರು. ಇದ್ದರೆ 50 ರು. ಸೇರಿಸಿ ಮೆಕ್ಕೆಜೋಳ ಖರೀದಿಸುವುದಾಗಿ ಸ್ಪಷ್ಟಪಡಿಸಲಾಗಿದೆ.

ಒಬ್ಬ ರೈತರಿಗೆ 50 ಕ್ವಿಂಟಲ್ ಮಿತಿ:

ಪ್ರತಿ ಎಕರೆಗೆ 12 ಕ್ವಿಂಟಲ್‌ನಂತೆ, ಒಬ್ಬ ರೈತರಿಂದ ಗರಿಷ್ಠ 50 ಕ್ವಿಂಟಲ್ ಮೆಕ್ಕೆಜೋಳಕ್ಕೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ವ್ಯತ್ಯಾಸದ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗುವುದು. ಯುಎಮ್‌ಪಿ ತಂತ್ರಾಂಶದಲ್ಲಿ ವಹಿವಾಟು ಆರಂಭವಾದ ದಿನಾಂಕದಿಂದ ಕೇವಲ ಒಂದು ತಿಂಗಳು ಮಾತ್ರ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ನೋಂದಣಿ ಕಡ್ಡಾಯ:

ರೈತರು ತಮ್ಮ ಹೆಸರನ್ನು ಬಯೋಮೆಟ್ರಿಕ್ ಮೂಲಕ ಎನ್‌ಇಎಂಎಲ್‌ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಕೊಪ್ಪಳ 5.01 ಲಕ್ಷ ಟನ್‌, ವಿಜಯಪುರ 2.89, ಹಾಸನ 2.49, ದಾವಣಗೆರೆ 2.38, ಚಿತ್ರದುರ್ಗ 2.17, ಬಾಗಲಕೋಟೆ 1.90, ಬಾಗಲಕೋಟೆ 1.85, ಇತರೆ ಜಿಲ್ಲೆಗಳಲ್ಲಿನ 5.44 ಲಕ್ಷ ಟನ್ ಸೇರಿ 40 ಲಕ್ಷ ಟನ್‌ ಖರೀದಿಗೆ ಅನುಮೋದನೆ ನೀಡಲಾಗಿದೆ.

ಮಾರುಕಟ್ಟೆ ಮಧ್ಯಪ್ರವೇಶ ದರ ನಿಗದಿ ಯಾಕೆ?:

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸಾಗುವಳಿಯು ಶೇ.23.31 ರಷ್ಟು ಹಾಗೂ ಉತ್ಪಾದನೆಯು ಶೇ.24 ರಷ್ಟು ಹೆಚ್ಚಾಗಿದೆ. ಹೀಗಾಗಿ ಈ ವರ್ಷ 53.80 ಲಕ್ಷ ಟನ್‌ ಮೆಕ್ಕೆಜೋಳ ಉತ್ಪಾದನೆ ನಿರೀಕ್ಷಿಸಲಾಗಿದೆ.2400 ರು.ಗಳಂತೆ 10 ಲಕ್ಷ ಟನ್‌ ಮೆಕ್ಕೆಜೋಳವನ್ನು ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ನೇರವಾಗಿ ಖರೀದಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಉಳಿದಂತೆ ಪಶು ಆಹಾರಕ್ಕೆ 34 ಲಕ್ಷ ಟನ್‌ ಅಗತ್ಯವಿದೆ.

ಕೇಂದ್ರ ಸರ್ಕಾರ ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ 2,400 ರು. ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯದಲ್ಲಿ ಪ್ರತಿ ಕ್ವಿಂಟಲ್‌ಗೆ ಸರಾಸರಿ 1,900 ರು.ಗಳಂತೆ ದರ ಚಾಲ್ತಿಯಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬೆಲೆ ವ್ಯತ್ಯಾಸ ಪಾವತಿ ಯೋಜನೆ (ಪಿಡಿಪಿಎಸ್‌) ಮೂಲಕ ನೆರವಾಗುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಕೇಂದ್ರ ಸ್ಪಂದಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ 2,150 ರು. ಪ್ರತಿ ಕ್ವಿಂಟಲ್‌ಗೆ ಮಾರುಕಟ್ಟೆ ಮಧ್ಯಪ್ರವೇಶ ದರ ನಿಗದಿ ಮಾಡಿದೆ.

- ಇತ್ತೀಚೆಗೆ ಬೆಂಬಲ ಬೆಲೆ ಸಿಗದೇ ಪರದಾಡಿದ್ದ ಮೆಕ್ಕೆಜೋಳ ಬೆಳೆದ ರೈತರು

- ಬೆಳೆಗಾರರ ನೆರವಿಗೆ ಬಂದ ಸಿದ್ದು ಸರ್ಕಾರ । ಬೆಳೆಗೆ ಬೆಂಬಲ ಬೆಲೆ ನಿಗದಿ

- ₹1,900 ಮಾರುಕಟ್ಟೆ ಬೆಲೆಗೆ ತನ್ನ ₹250 ಸಹಾಯಧನ ಸೇರಿಸಿ ನೀಡಿಕೆ

- ರಾಜ್ಯಾದ್ಯಂತ ಒಟ್ಟಾರೆ 40 ಲಕ್ಷ ಟನ್‌ ಮೆಕ್ಕೆಜೋಳ ಖರೀದಿಗೆ ತೀರ್ಮಾನ

- ಎಕರೆಗೆ 12 ಕ್ವಿಂಟಲ್‌ನಂತೆ, ಒಬ್ಬ ರೈತರಿಂದ ಗರಿಷ್ಠ 50 ಕ್ವಿಂಟಲ್ ಖರೀದಿ