ಸುಮಾರು 100 ಟ್ರ್ಯಾಕ್ಟರ್‌ಗಳಷ್ಟು ಮೆಕ್ಕೆಜೋಳ ತೆನೆಗಳನ್ನು ಕಟಾವು ಮಾಡಿ ಒಂದೇ ಸ್ಥಳದಲ್ಲಿ ರಾಶಿ ಹಾಕಿದ್ದರು. ಆದರೆ ಶುಕ್ರವಾರ ಬೆಳಗ್ಗೆ 4 ಗಂಟೆ ವೇಳೆಗೆ ಕಿಡಿಗೇಡಿಗಳು ಗೋವಿನಜೋಳದ ರಾಶಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಸಂಪೂರ್ಣ ಫಸಲು ಸುಟ್ಟು ಭಸ್ಮವಾಗಿದೆ. ಘಟನೆಯಿಂದಾಗಿ ಸುಮಾರು ₹20 ಲಕ್ಷದ ಬೆಳೆ ಸಂಪೂರ್ಣ ಸುಟ್ಟ ಕರಕಲಾಗಿದೆ.

ಡಂಬಳ: ಹೋಬಳಿಯ ಕದಾಂಪುರ ಗ್ರಾಮ ಪಂಚಾಯಿತಿಯ ಅತ್ತಿಕಟ್ಟಿ ಗ್ರಾಮದ ರೈತರ ಮೆಕ್ಕೆಜೋಳದ ತೆನೆಯ ರಾಶಿಯು ಶುಕ್ರವಾರ ಬೆಳಗ್ಗೆ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರು. ಮೌಲ್ಯದ ನೂರಾರು ಕ್ವಿಂಟಲ್‌ ಫಸಲು ನಾಶವಾಗಿದೆ. ಯಾರೋ ಕಿಡಿಗೇಡಿಗಳು ಫಸಲಿಗೆ ಬೆಂಕಿ ಹಚ್ಚಿದ್ದಾರೆಂಬ ಆರೋಪ ಕೇಳಿಬಂದಿದೆ.

ರೈತರಾದ ಗೋಪಿ ಧನಸಿಂಗ್ ಚವ್ಹಾಣ ಹಾಗೂ ಗಣೇಶ ಧನಸಿಂಗ್ ಚವ್ಹಾಣ ಎಂಬ ಸಹೋದರರಿಗೆ ಸೇರಿದ ಮೆಕ್ಕೆಜೋಳದ ತೆನೆ ಬೆಂಕಿಗೆ ಆಹುತಿಯಾಗಿದೆ. ರೈತರಾದ ಗೋಪಿ ಮತ್ತು ಗಣೇಶ ಅವರು ಸುಮಾರು 100 ಎಕರೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಅಂದಾಜು ₹20 ಲಕ್ಷ ಸಾಲ ಮಾಡಿ ಮೆಕ್ಕೆಜೋಳ ಬೆಳೆದಿದ್ದರು.

ಸುಮಾರು 100 ಟ್ರ್ಯಾಕ್ಟರ್‌ಗಳಷ್ಟು ಮೆಕ್ಕೆಜೋಳ ತೆನೆಗಳನ್ನು ಕಟಾವು ಮಾಡಿ ಒಂದೇ ಸ್ಥಳದಲ್ಲಿ ರಾಶಿ ಹಾಕಿದ್ದರು. ಆದರೆ ಶುಕ್ರವಾರ ಬೆಳಗ್ಗೆ 4 ಗಂಟೆ ವೇಳೆಗೆ ಕಿಡಿಗೇಡಿಗಳು ಗೋವಿನಜೋಳದ ರಾಶಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಸಂಪೂರ್ಣ ಫಸಲು ಸುಟ್ಟು ಭಸ್ಮವಾಗಿದೆ. ಘಟನೆಯಿಂದಾಗಿ ಸುಮಾರು ₹20 ಲಕ್ಷದ ಬೆಳೆ ಸಂಪೂರ್ಣ ಸುಟ್ಟ ಕರಕಲಾಗಿದೆ.

ಸ್ಥಳಕ್ಕೆ ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್., ಡಿವೈಎಸ್ಪಿ ಪ್ರಭುಗೌಡ ಡಿ.ಕೆ., ಸಿಪಿಐ ವಿಜಯಕುಮಾರ, ಕೃಷಿ ಅಧಿಕಾರಿ ಎಸ್.ಬಿ. ರಾಮೇನಳ್ಳಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ, ಗ್ರಾಮ ಆಡಳಿತಾಧಿಕಾರಿ ಗೀತಾ, ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಕರಗೌಡ ಜಾಯನಗೌಡರ, ಈಶಪ್ಪ ಓಲಿ, ಕಾಶಪ್ಪ ಅಳವಂಡಿ, ಜಿ.ಎಸ್. ಕೊರ್ಲಹಳ್ಳಿ, ಪ್ರಕಾಶ ಸಜ್ಜನ, ಕುಬೇರ ನಾಯಕ್, ಯಲ್ಲಪ್ಪಗೌಡ ಕರಮುಡಿ, ವಿಶ್ವನಾಥ ಪಾಟೀಲ‌ ಇತರರು ಭೇಟಿ ನೀಡಿ ಪರಿಶೀಲಿಸಿದರು. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನೆರವಿಗೆ ಧಾವಿಸಲಿ: ಫಸಲಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮೆಕ್ಕೆಜೋಳ ಬೆಳೆಯಲು ಸುಮಾರು ₹20 ಲಕ್ಷ ಸಾಲ ಮಾಡಲಾಗಿತ್ತು. ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ರೈತ ಗೋಪಿಯವರ ಪತ್ನಿ ಸುನಿತಾ ಚವ್ಹಾಣ ತಿಳಿಸಿದರು.

ಪರಿಶೀಲನೆ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಪಾರ ಪ್ರಮಾಣದಲ್ಲಿ ಫಸಲು ಬೆಂಕಿಗೆ ಆಹುತಿಯಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪಿ.ಎಸ್. ಯರಿಸ್ವಾಮಿ ತಿಳಿಸಿದರು.