ಕ್ರಿಮಿನಲ್‌ ತನಿಖೆ ಮತ್ತು ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆಗಳಲ್ಲಿ ಸಾಕ್ಷಿಗಳು, ಅವರ ಸಂಬಂಧಿಕರಿಗೆ ರಕ್ಷಣೆ ಮತ್ತು ಭದ್ರತೆ ಒದಗಿಸಲು ರಾಜ್ಯ ಸರ್ಕಾರವು ‘ಕರ್ನಾಟಕ ಸಾಕ್ಷಿ ರಕ್ಷಣಾ ಯೋಜನೆ-2026’ ಜಾರಿಗೊಳಿಸಿದೆ.

ಮೋಹನ ಹಂಡ್ರಂಗಿ

 ಬೆಂಗಳೂರು : ಕ್ರಿಮಿನಲ್‌ ತನಿಖೆ ಮತ್ತು ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆಗಳಲ್ಲಿ ಸಾಕ್ಷಿಗಳು, ಅವರ ಸಂಬಂಧಿಕರಿಗೆ ರಕ್ಷಣೆ ಮತ್ತು ಭದ್ರತೆ ಒದಗಿಸಲು ರಾಜ್ಯ ಸರ್ಕಾರವು ‘ಕರ್ನಾಟಕ ಸಾಕ್ಷಿ ರಕ್ಷಣಾ ಯೋಜನೆ-2026’ ಜಾರಿಗೊಳಿಸಿದೆ.

ಯೋಜನೆಯಡಿ, ಸಾಕ್ಷಿಗಳಿಗೆ ಬೆದರಿಕೆ ಬಂದರೆ ಅವರ ಮನೆಗಳಿಗೆ ಭದ್ರತಾ ಬಾಗಿಲು, ಸಿಸಿಟೀವಿ, ಅಲಾರಾಂ ಸೇರಿ ಭದ್ರತಾ ಸಾಧನಗಳ ಅಳವಡಿಕೆ ಮಾಡಲಾಗುತ್ತದೆ. ಸಾಕ್ಷಿದಾರರ ಮನೆಯ ಸುತ್ತ ನಿಯಮಿತ ಪೊಲೀಸ್‌ ಗಸ್ತು, ಸಂಬಂಧಿಕರ ಮನೆ ಅಥವಾ ಸಮೀಪದ ಪಟ್ಟಣದಲ್ಲಿ ತಾತ್ಕಾಲಿಕ ವಾಸಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಾಕ್ಷಿಗಳನ್ನು ಬೆಂಗಾವಲಿನಲ್ಲಿ ಕರೆತರುವುದು, ಅಗತ್ಯ ಸಂದರ್ಭದಲ್ಲಿ ಜೀವನಾಂಶ ಅಥವಾ ಹೊಸ ವೃತ್ತಿ ಪ್ರಾರಂಭಿಸುವ ಉದ್ದೇಶಕ್ಕೆ ಸಾಕ್ಷಿ ರಕ್ಷಣಾ ನಿಧಿಯಿಂದ ಹಣಕಾಸು ನೆರವು ಅಥವಾ ಅನುದಾನ ನೀಡಲಾಗುತ್ತದೆ. ತನಿಖೆ ಅಥವಾ ವಿಚಾರಣೆ ಸಮಯದಲ್ಲಿ ಸಾಕ್ಷಿ ಮತ್ತು ಆರೋಪಿಗಳ ಮುಖಾಮುಖಿ ತಡೆಯಲಾಗುತ್ತದೆ. ಇ- ಮೇಲ್‌ ಮತ್ತು ದೂರವಾಣಿ ಕರೆಗಳ ಮೇಲ್ವಿಚಾರಣೆ ಮಾಡಲಾಗುತ್ತದೆ.

ಯೋಜನೆ ತಂದ 5ನೇ ರಾಜ್ಯ:

ಮಹೇಂದರ್‌ ಚಾವ್ಲಾ ಮತ್ತು ಯೂನಿಯನ್‌ ಆಫ್‌ ಇಂಡಿಯಾ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ದೇಶದ ಎಲ್ಲಾ ರಾಜ್ಯಗಳಿಗೂ ಸಾಕ್ಷಿ ರಕ್ಷಣಾ ಯೋಜನೆ ಜಾರಿಗೊಳಿಸುವಂತೆ ನಿರ್ದೇಶಿಸಿತ್ತು. ಅದರಂತೆ ರಾಜ್ಯ ಸರ್ಕಾರವು ‘ಕರ್ನಾಟಕ ಸಾಕ್ಷಿ ರಕ್ಷಣಾ ಯೋಜನೆ’ ಜಾರಿಗೊಳಿಸಿದ್ದು, ಅಧಿಕೃತವಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ 2018ರ ಡಿಸೆಂಬರ್‌ನಲ್ಲೇ ಸಾಕ್ಷಿ ರಕ್ಷಣಾ ಯೋಜನೆ ಜಾರಿಗೊಳಿಸುವಂತೆ ನಿರ್ದೇಶಿಸಿತ್ತು. ಅದರಂತೆ ಒಡಿಶಾ, ದೆಹಲಿ, ಅಸ್ಸಾಂ, ಹರಿಯಾಣ ರಾಜ್ಯಗಳು ಈ ಯೋಜನೆ ಜಾರಿಗೆ ತಂದಿದ್ದವು. ಇದೀಗ ಕರ್ನಾಟಕ ಸರ್ಕಾರವು ಈ ಯೋಜನೆ ಅನುಷ್ಠಾನಕ್ಕೆ ತಂದಿದೆ.

ಸಾಕ್ಷಿ ರಕ್ಷಣಾ ಯೋಜನೆಯಡಿ ಗಂಭೀರ ಪ್ರಕರಣಗಳ ತನಿಖೆ, ವಿಚಾರಣೆ ಮತ್ತು ನಂತರದ ಹಂತಗಳಲ್ಲಿ ಸಾಕ್ಷಿಗಳನ್ನು ಗುರುತಿಸಲು ಕಾರಣವಾಗುವ ಹೆಸರು, ವಿಳಾಸ ಮತ್ತು ಇತರೆ ವಿವರಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯಲ್ಲಿ ಪ್ರಕಟಿಸುವುದು ಅಥವಾ ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ. ಸಾಕ್ಷಿಗಳ ಸಂಬಂಧಿಕರು ಅಥವಾ ಕುಟುಂಬದ ಸದಸ್ಯರು ಎಂದರೆ, ಸಾಕ್ಷಿಗಳ ಪೋಷಕರು, ಸಂಗಾತಿ, ಸಹಜೀವನದ ಪಾಲುದಾರ, ಒಡಹುಟ್ಟಿದವರು, ಮಕ್ಕಳು, ಮೊಮ್ಮಕ್ಕಳು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ.

ಪ್ರತಿ ಜಿಲ್ಲೆಯಲ್ಲಿ ಸಕ್ಷಮ ಪ್ರಾಧಿಕಾರ:

ಈ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಕ್ಷಮ ಪ್ರಾಧಿಕಾರ ಇರಲಿದೆ. ಈ ಪ್ರಾಧಿಕಾರಕ್ಕೆ ಜಿಲ್ಲಾ ಪೊಲೀಸ್‌ ಘಟಕದ ಮುಖ್ಯಸ್ಥರು ಅಥವಾ ಪೊಲೀಸ್‌ ಆಯುಕ್ತರು ಸದಸ್ಯರಾಗಿರುತ್ತಾರೆ. ಜಿಲ್ಲೆಯ ಪ್ರಾಸಿಕ್ಯೂಷನ್‌ ಮುಖ್ಯಸ್ಥರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಸಾಕ್ಷಿ ರಕ್ಷಣೆ ಕೋರಿ ವಕೀಲರು ಅಥವಾ ತನಿಖಾಧಿಕಾರಿ ಅಥವಾ ಠಾಣಾಧಿಕಾರಿ ಅಥವಾ ಉಪವಿಭಾಗೀಯ ಪೊಲೀಸ್‌ ಅಧಿಕಾರಿ ಅಥವಾ ಜೈಲು ಅಧೀಕ್ಷಕರು ಈ ಸದಸ್ಯ ಕಾರ್ಯದರ್ಶಿ ಮುಖಾಂತರ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ತಕ್ಷಣವೇ ಬೆದರಿಕೆ ವಿಶ್ಲೇಷಣಾ ವರದಿ ಕೋರಿ ಆದೇಶಿಸಲಿದ್ದಾರೆ.

5 ದಿನಗಳೊಳಗೆ ವಿಶ್ಲೇಷಣಾ ವರದಿ ಸಲ್ಲಿಕೆ:

ಸಾಕ್ಷಿ ಅಥವಾ ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಗ್ರಹಿಕೆಯ ಗಂಭೀರತೆ ಮತ್ತು ವಿಶ್ವಾಸಾರ್ಹತೆ ಸಂಬಂಧ ಪ್ರಕರಣದ ತನಿಖೆ ಮಾಡುವ ಜಿಲ್ಲಾ ಅಥವಾ ಕಮಿಷನರೇಟ್‌ನ ಪೊಲೀಸ್‌ ಘಟಕದ ಮುಖಸ್ಥರು ವಿವರವಾದ ವಿಶ್ಲೇಷಣಾ ವರದಿ ಸಿದ್ಧಪಡಿಸಬೇಕು. ಇದರಲ್ಲಿ ಬೆದರಿಕೆಗಳ ಸ್ವರೂಪದ ಬಗ್ಗೆ ನಿರ್ದಿಷ್ಟ ವಿವರಗಳಿರಬೇಕು. ಐದು ಕೆಲಸದ ದಿನಗಳೊಳಗೆ ಈ ವಿಶ್ಲೇಷಣಾ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ತಲುಪಿಸಬೇಕು. ಅರ್ಜಿ ವಿಚಾರಣೆ ಸಮಯದಲ್ಲಿ ಸಾಕ್ಷಿಗಳ ಅಥವಾ ಅವರ ಕುಟುಂಬದ ಸದಸ್ಯರಿಗೆ ಮಧ್ಯಂತರ ರಕ್ಷಣೆಗಾಗಿ ಸಕ್ಷಮ ಪ್ರಾಧಿಕಾರವು ಆದೇಶ ಹೊರಡಿಸಲು ಅವಕಾಶವಿದೆ.

ಗೌಪ್ಯತೆಯಲ್ಲಿ ಇಡೀ ಪ್ರಕ್ರಿಯೆ:

ಸಾಕ್ಷಿ ರಕ್ಷಣೆ ಕೋರಿ ಸಲ್ಲಿಕೆಯಾಗುವ ಅರ್ಜಿ ವಿಚಾರಣೆ ವೇಳೆ ಸಕ್ಷಮ ಪ್ರಾಧಿಕಾರವು ಸಂಪೂರ್ಣ ಗೌಪ್ಯತೆ ಕಾಪಾಡಿಕೊಳ್ಳಬೇಕು. ಅಗತ್ಯ ಬಿದ್ದರೆ ಎಲೆಕ್ಟ್ರಾನಿಕ್‌ ವಿಧಾನಗಳ ಮೂಲಕ ಸಂವಹನ ನಡೆಸಬೇಕು. ಪೊಲೀಸ್‌ ಅಧಿಕಾರಿಗಳಿಂದ ಬೆದರಿಕೆ ವಿಶ್ಲೇಷಣಾ ವರದಿ ಸ್ವೀಕರಿಸಿದ ಐದು ಕೆಲಸದ ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಬೇಕು. ಸಕ್ಷಮ ಪ್ರಾಧಿಕಾರವು ಹೊರಡಿಸಿದ ಸಾಕ್ಷಿ ರಕ್ಷಣಾ ಆದೇಶವನ್ನು ವಿಚಾರಣಾ ನ್ಯಾಯಾಲಯವು ಜಾರಿಗೊಳಿಸಬೇಕು. ಈ ಸಾಕ್ಷಿ ರಕ್ಷಣಾ ಆದೇಶಗಳ ಅನುಷ್ಠಾನದ ಪೂರ್ಣ ಜವಾಬ್ದಾರಿ ರಾಜ್ಯ ಪೊಲೀಸ್‌ ಮುಖ್ಯಸ್ಥರ ಮೇಲಿರುತ್ತದೆ.

ರಾಜ್ಯ ಸಾಕ್ಷಿ ರಕ್ಷಣಾ ನಿಧಿ:

ಸಕ್ಷಮ ಪ್ರಾಧಿಕಾರವು ಹೊರಡಿಸಿದ ಸಾಕ್ಷಿ ರಕ್ಷಣಾ ಆದೇಶದ ಅನುಷ್ಠಾನದ ಸಮಯದಲ್ಲಿ ಉಂಟಾಗುವ ವೆಚ್ಚಗಳು ಮತ್ತು ಇತರೆ ವೆಚ್ಚಗಳನ್ನು ಈ ರಾಜ್ಯ ಸಾಕ್ಷಿ ರಕ್ಷಣಾ ನಿಧಿಯಿಂದ ಭರಿಸಲಾಗುತ್ತದೆ. ಈ ನಿಧಿಗೆ ರಾಜ್ಯ ಸರ್ಕಾರವು ವಾರ್ಷಿಕ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಲಿದೆ. ನ್ಯಾಯಾಲಯಗಳು ಅಥವಾ ನ್ಯಾಯಮಂಡಳಿಗಳು ವಿಧಿಸಿದ ಅಥವಾ ಠೇವಣಿ ಇರಿಸಲು ಆದೇಶಿಸಿದ ವೆಚ್ಚಗಳನ್ನು ಸ್ವೀಕರಿಸಲು ಅವಕಾಶವಿದೆ. ಅಂತೆಯೇ ರಾಜ್ಯ ಸರ್ಕಾರವು ಅನುಮತಿಸಿದ ದತ್ತಿ ಸಂಸ್ಥೆಗಳು ಅಥವಾ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ದೇಣಿಗೆ ಆಥವಾ ಕೊಡುಗೆ ಸ್ವೀಕರಿಸಬಹುದು. ಸಿಎಆರ್‌ ಅಡಿಯಲ್ಲಿ ಕೊಡುಗೆ ನೀಡಬಹುದು. ಈ ಸಾಕ್ಷಿ ರಕ್ಷಣಾ ನಿಧಿಯನ್ನು ರಾಜ್ಯ ಗೃಹ ಇಲಾಖೆ ನಿರ್ವಹಿಸಲಿದೆ.