ಹಂಪಿ ಸಮೀಪದ ಆನೆಗುಂದಿಯ ನವವೃಂದಾವನ ಗಡ್ಡೆಯನ್ನು ಮುಂದಿನ ದಿನಗಳಲ್ಲಿ ಧರ್ಮಕ್ಷೇತ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥರು ಜಂಟಿಯಾಗಿ ಘೋಷಿಸಿದ್ದಾರೆ
ಬೆಂಗಳೂರು : ಹಂಪಿ ಸಮೀಪದ ಆನೆಗುಂದಿಯ ನವವೃಂದಾವನ ಗಡ್ಡೆಯನ್ನು ಮುಂದಿನ ದಿನಗಳಲ್ಲಿ ಧರ್ಮಕ್ಷೇತ್ರವನ್ನಾಗಿ ಪರಿವರ್ತಿಸುವ ಸಂಕಲ್ಪವನ್ನು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹಾಗೂ ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮ ತೀರ್ಥರು ಜಂಟಿಯಾಗಿ ಘೋಷಿಸಿದ್ದಾರೆ. ಈ ಮೂಲಕ ಕಳೆದ ಐದಾರು ದಶಕಗಳಿಂದ ಮಾಧ್ವ ಬ್ರಾಹ್ಮಣ ಸಮುದಾಯದ ಉಭಯ ಮಠಗಳ ನಡುವೆ ನಡೆಯುತ್ತಿದ್ದ ಕಲಹಕ್ಕೆ ತೆರೆ ಬಿದ್ದಂತಾಗಿದೆ.
ಸೌಹಾರ್ದಯುತವಾಗಿ ಬಗೆಹರಿದ ಈ ವ್ಯಾಜ್ಯವು ಒಂದೇ ಧರ್ಮ, ಒಂದೇ ಸಮುದಾಯಕ್ಕೆ ಸಂಬಂಧಿಸಿದ ರಾಜ್ಯದಲ್ಲಿನ ವಿವಿಧ ಮಠಗಳ ನಡುವಿನ ಕಿತ್ತಾಟವನ್ನು ವಿವಾದ ಬಗೆಹರಿಸಿಕೊಳ್ಳುವಲ್ಲಿ ಮಾದರಿ ಎನಿಸಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೋಟ್ಯಂತರ ರುಪಾಯಿ ಖರ್ಚು ಮಾಡಿಕೊಂಡು ವರ್ಷಾನುಗಟ್ಟಲೆ ಮುಂದುವರೆಯುವ, ಭಕ್ತರ ನಡುವೆ ವೈಷಮ್ಯಕ್ಕೆ ಕಾರಣವಾಗುವಂತಹ ಪ್ರಕರಣಗಳನ್ನು ಪರಿಹರಿಸಿಕೊಳ್ಳಲು ಈ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಾಂಗಿದೆ.
ಬಸವನಗುಡಿಯ ಉತ್ತರಾದಿಮಠಕ್ಕೆ ಸೇರಿದ ದಿಗ್ವಿಜಯ ಲಕ್ಷ್ಮೀನರಸಿಂಹ ಸನ್ನಿಧಿಯಲ್ಲಿ ಉಭಯ ಶ್ರೀಗಳು ತಮ್ಮ ಈ ಸಂಕಲ್ಪ ವ್ಯಕ್ತಪಡಿಸಿದರು. ಉಭಯ ಮಠಗಳ ನಡುವಿನ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಸೌಹಾರ್ದಯುತವಾಗಿ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವ ಒಮ್ಮತದ ಭರವಸೆಯನ್ನು ಉಭಯ ಶ್ರೀಗಳು ನೀಡಿದರು.
ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆ ಕುರಿತ ವಿವಾದ ಬಗೆಹರಿಸುವಲ್ಲಿ ಪರಸ್ಪರ ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡಲು, ಮಾತುಕತೆ ಮೂಲಕ ಗೊಂದಲ ನಿವಾರಿಸಿಕೊಳ್ಳಲು ಒಡಂಬಡಿಕೆಯ ಒಪ್ಪಂದಕ್ಕೆ ಉಭಯ ಶ್ರೀಗಳು ಮತ್ತು ಮಠಗಳ ಪ್ರಮುಖ ಶಿಷ್ಯರು ಸಹಿ ಹಾಕಿದರು.
ಜಾಲತಾಣದಲ್ಲಿ ಅವಹೇಳನ ಬೇಡ:
ರಾಜಿ ಸೂತ್ರ ಮತ್ತು ಸಂಧಾನದ ಈ ವೇಳೆ ಉಭಯ ಮಠದ ಭಕ್ತರು ಮಠ ಮತ್ತು ಪೀಠಾಧಿಪತಿಗಳ ನಿರ್ಧಾರವನ್ನು ಸ್ವಾಗತಿಸಬೇಕು. ಇದರ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾರ ಕುರಿತೂ ಅವಹೇಳನಕಾರಿ ಹೇಳಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಎಂದು ಇಬ್ಬರೂ ಶ್ರೀಗಳು ಮಠದ ಶಿಷ್ಯರು ಹಾಗೂ ಅಭಿಮಾನಿಗಳಲ್ಲಿ ತಾಕೀತು ಮಾಡಿದರು.
ಬಳಿಕ ಮಂತ್ರಾಲಯದ ಸುಬುಧೇಂದ್ರ ತೀರ್ಥರು ಉತ್ತರಾದಿ ಮಠಕ್ಕೆ ಸೇರಿದ ಬಸವನಗುಡಿಯ ದಿಗ್ವಿಜಯ ಲಕ್ಷ್ಮೀನರಸಿಂಹ ಸನ್ನಿಧಿಗೆ ಆಗಮಿಸಿದರು. ನೆರೆದಿದ್ದ ಸಾವಿರಾರು ಭಕ್ತರು ಹರ್ಷೋದ್ಗಾರ ಮಾಡಿ ಮಂತ್ರಾಲಯದ ಶ್ರೀಗಳನ್ನು ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈ ಮಠಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ಮೂಲಕ ರಾಜ್ಯದ ಉಳಿದೆಲ್ಲ ಮಠಗಳಿಗೆ ಮಾದರಿಯಾಗಿವೆ. ಇದು ಇಂಥದ್ದೇ ವಿವಾದಗಳನ್ನು ಮುಂದಿಟ್ಟುಕೊಂಡಿರುವ ಇತರೆ ಮಠಗಳಿಗೆ ಕಣ್ತೆರೆಯುವಂತೆ ಮಾಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಭಯ ಶ್ರೀಗಳು ಕೈಗೊಂಡ ಈ ನಿರ್ಧಾರ ರಾಷ್ಟ್ರ ಹಿಂದೂ ಧರ್ಮದ ಸಂಘಟನೆ, ಸನಾತನ ಧರ್ಮದ ರಕ್ಷಣೆ ನಿಟ್ಟಿನಲ್ಲಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ಭವಿಷ್ಯದಲ್ಲೂ ಯಾವುದೇ ಮಾಧ್ವ ಮಠಗಳು ಅಥವಾ ಇನ್ನಿತರೆ ಧಾರ್ಮಿಕ ಮಠಮಾನ್ಯ, ಸಂಸ್ಥೆಗಳು ವಿವಾದ ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲೇರುವಂತೆ ಆಗಬಾರದು. ಈ ನಿಟ್ಟಿನಲ್ಲಿ ಮಂತ್ರಾಲಯ ಮತ್ತು ಉತ್ತರಾದಿ ಮಠದ ಶ್ರೀಗಳು ನಾಯಕತ್ವ ವಹಿಸಬೇಕು ಎಂದು ಮನವಿ ಮಾಡಿದರು.
ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಮಾತನಾಡಿ, ಉತ್ತರಾದಿ ಮಠದ ಸತ್ಯಪ್ರಮೋದ ತೀರ್ಥರ ಹಾಗೂ ರಾಘವೇಂದ್ರ ಸ್ವಾಮಿ ಮಠದ ಸುಜಯೇಂದ್ರ ತೀರ್ಥರ ಕನಸನ್ನು ಪ್ರಸ್ತುತ ಪೀಠಾಧಿಪತಿಗಳಾದ ಸತ್ಯಾತ್ಮ ತೀರ್ಥ ಹಾಗೂ ಸುಬುಧೇಂದ್ರ ತೀರ್ಥರು ನನಸಾಗಿಸಿದ್ದಾರೆ. ಈ ಮೂಲಕ ಸಮುದಾಯಕ್ಕೆ ಬಹುದೊಡ್ಡ ಉಪಕಾರ ಮಾಡಿದ್ದಾರೆ ಎಂದು ಸ್ಮರಿಸಿದರು.
ಹೈಕೋರ್ಟ್ನಿ ವೃತ್ತ ನ್ಯಾಯಮೂರ್ತಿಗಳಾದ ಶ್ರೀಧರ್ ರಾವ್, ದಿನೇಶ್ ಕುಮಾರ್, ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿದರು.
ಈ ವೇಳೆ ಮಂತ್ರಾಲಯದ ಪಂಡಿತ ರಾಜಗಿರಿಯಾಚಾರ್ಯ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ನಂಜನಗೂಡು ಮೋಹನ್, ಕಿರಣ್ ಕುಮಾರ್, ಬಿಜೆಪಿ ರಾಜ್ಯ ಖಜಾಂಚಿ ಸುಬ್ಬಣ್ಣ, ರಾಜಾಗಿರಿ ಆಚಾರ್ಯರು, ಕೂಸನೂರು ಆಚಾರ್ಯರು, ಗುತ್ತಲ ರಂಗಾಚಾರ್ಯರು, ವ್ಯಾಸನಕೆರೆ ಪ್ರಭಂಜನಾಚಾರ್ಯರು ಸೇರಿ ಇತರರಿದ್ದರು.
ಮಾದರಿ ಕಾರ್ಯ
ಮಠಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವ ಮೂಲಕ ರಾಜ್ಯದ ಉಳಿದೆಲ್ಲ ಮಠಗಳಿಗೆ ಮಾದರಿಯಾಗಿವೆ. ಇದು ಇಂಥದ್ದೇ ವಿವಾದಗಳನ್ನು ಮುಂದಿಟ್ಟುಕೊಂಡಿರುವ ಇತರೆ ಮಠಗಳಿಗೆ ಕಣ್ತೆರೆಯುವಂತೆ ಮಾಡಿದೆ.
- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಏನಿದು ವಿವಾದ?
ಆನೆಗುಂದಿ ನವವೃಂದಾವನ ಗಡ್ಡೆಯಲ್ಲಿ ವೃಂದಾವನ ಕುರಿತ ಪೂಜೆಯ ಹಕ್ಕು ಮತ್ತು ಗಡ್ಡೆ ಪ್ರದೇಶದ ಕುರಿತು ಎರಡು ಮಠಗಳ ನಡುವೆ ಭಿನ್ನಾಭಿಪ್ರಾಯ ಇತ್ತು. ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ವಹಿಸಿ ನಿವೃತ್ತ ನ್ಯಾಯಾಧೀಶರನ್ನು ಸಂಧಾನಕ್ಕೆ ನೇಮಿಸಿತ್ತು. ಆದರೂ ವಿವಾದ ಬಗೆಹರಿಯದೆ ಎರಡೂ ಮಠಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಇದೀಗ ಈ ವಿವಾದ ಸುಖಾಂತ್ಯ ಕಂಡಿದೆ.
