ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ನಡೆದ ಬ್ಯಾನರ್‌ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ರೆಡ್ಡಿ ಮನೆಯ ಕಡೆಗೆ ಗುಂಡು ಹಾರಿಸಿದ ಎನ್ನಲಾದ ಖಾಸಗಿ ಗನ್‌ಮ್ಯಾನ್ ಗುರುಚರಣ ಸಿಂಗ್ ಸೇರಿ 26 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ : ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ಗುರುವಾರ ರಾತ್ರಿ ನಡೆದ ಬ್ಯಾನರ್‌ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ರೆಡ್ಡಿ ಮನೆಯ ಕಡೆಗೆ ಗುಂಡು ಹಾರಿಸಿದ ಎನ್ನಲಾದ ಖಾಸಗಿ ಗನ್‌ಮ್ಯಾನ್ ಗುರುಚರಣ ಸಿಂಗ್ ಸೇರಿ 26 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿಯ 13, ಕಾಂಗ್ರೆಸ್‌ನ 10 ಮಂದಿ ಸೆರೆ

ಬಂಧಿತರಲ್ಲಿ ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಜೊತೆಗಿದ್ದ ಗನ್‌ಮ್ಯಾನ್‌ ಗುರುಚರಣ ಸಿಂಗ್‌, ಬಿಜೆಪಿಯ 13, ಕಾಂಗ್ರೆಸ್‌ನ 10 ಮಂದಿ ಸೇರಿದ್ದಾರೆ. ಬಂಧಿತರನ್ನು ಬಳ್ಳಾರಿಯ ವಿಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರುಪಡಿಸಲು ಬೆಂಗಳೂರಿಗೆ ಕರೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಗುರುಚರಣ ಸಿಂಗ್ ಅವರನ್ನು ಬಂಧಿಸಲಾಗಿದೆ

ಜನಾರ್ದನ ರೆಡ್ಡಿ ಮನೆಗೆ ಗುಂಡು ಹಾರಿಸಿದ ವಿಡಿಯೋ, ಫೋಟೋಗಳು, ಮೃತ ಯುವಕನ ಕುಟುಂಬ ಸದಸ್ಯರು ನೀಡಿದ ದೂರಿನನ್ವಯ ಸತೀಶ್‌ ರೆಡ್ಡಿಯ ಗನ್‌ಮ್ಯಾನ್‌ ಗುರುಚರಣ ಸಿಂಗ್ ಅವರನ್ನು ಬಂಧಿಸಲಾಗಿದೆ. ಉಳಿದ ಮೂವರು ಖಾಸಗಿ ಗನ್‌ಮ್ಯಾನ್‌ಗಳನ್ನು ಖಾಸಗಿ ಲಾಡ್ಜ್‌ನಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಪ್ರಮುಖ ಆರೋಪಿ ಎನ್ನಲಾದ ಗುರುಚರಣ ಸಿಂಗ್ ಅವರು ವಾಸವಾಗಿದ್ದ ಎಂಆರ್‌ವಿ ಬಡಾವಣೆಯ ನಿವಾಸದಲ್ಲಿ ಪೊಲೀಸರು ಭಾನುವಾರ ಸಂಜೆ ಮಹಜರು ಮಾಡಿದ್ದಾರೆ. ಇದೇ ವೇಳೆ ಕೆಲವು ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಈ ಮಧ್ಯೆ, ಘಟನೆಯಲ್ಲಿ ಗಾಯಗೊಂಡು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತೀಶ್‌ ರೆಡ್ಡಿ ಅವರನ್ನು ಸಹ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಈ ಮಧ್ಯೆ, ಬ್ಯಾನರ್‌ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಈವರೆಗೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಶಾಸಕ ನಾರಾ ಭರತ್‌ ರೆಡ್ಡಿ ಅವರ ಬೆಂಬಲಿಗರಿಂದ ಮೂರು ಪ್ರಕರಣ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಅವರ ಬೆಂಬಲಿಗರಿಂದ ಎರಡು ಪ್ರಕರಣ ದಾಖಲಾಗಿದೆ. ಮತ್ತೊಂದು ಪೊಲೀಸರಿಂದ ಸ್ವಯಂ ದೂರು ದಾಖಲಿಸಿಕೊಳ್ಳಲಾಗಿದೆ. ದಾಖಲಾದ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಬಳಿಕ ನಗರ ತೊರೆದವರ ಪತ್ತೆಗಾಗಿ ಪೊಲೀಸರು ತಂಡಗಳನ್ನು ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಈ ಮಧ್ಯೆ, ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಇನ್ನೂ ಕಳುಹಿಸಿಕೊಡಲಾಗಿಲ್ಲ ಎಂದು ಗೊತ್ತಾಗಿದೆ. ಘಟನೆ ಬಳಿಕ 15 ದಿನಗಳ ಕಾಲಾವಕಾಶ ಇರುವುದರಿಂದ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಿಐಡಿ ತನಿಖೆ ಬಗ್ಗೆ ಚರ್ಚೆ: ಡಾ। ಪರಂ

ಬೆಂಗಳೂರು: ಬಳ್ಳಾರಿ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಅಗತ್ಯಬಿದ್ದರೆ ಸಿಐಡಿಗೆ ಒಪ್ಪಿಸುತ್ತೇವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡಸುತ್ತೇನೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ತಿಳಿಸಿದ್ದಾರೆ.