ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು2023-24 ನೇ ಸಾಲಿನ ಗೆಜೆಟೆಡ್ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡಕ್ಕೆ ಅನುವಾದಿಸುವ ವಿಚಾರದಲ್ಲಿ ಆಗಿರುವ ಅವಾಂತರವನ್ನು ವಿಧಾನಸಭೆಯಲ್ಲಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡರು ಎಳೆಎಳೆಯಾಗಿ ಬಿಡಿಸಿಟ್ಟು ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡಕ್ಕೆ ಇಂತಹ ದುರ್ದೆಸೆ ಬಂದಿರುವುದಕ್ಕೆ ಸರ್ಕಾರವೇ ಹೊಣೆ ಎಂದು ತರಾಟೆಗೆ ತೆಗೆದುಕೊಂಡರು.ಕರ್ನಾಟಕದಲ್ಲಿ ಕನ್ನಡಕ್ಕೆ ಮತ್ತೆ ಮತ್ತೆ ಅವಮಾನ ಆಗುತ್ತಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಮಕ್ಕಳು ಬಡವರು, ಕೂಲಿ ಕಾರ್ಮಿಕರು ಮತ್ತು ರೈತರ ಮಕ್ಕಳು. ಇಂಗ್ಲಿಷ್ ಮಾಧ್ಯಮಕ್ಕೆ ಹೋಗಲು ಆಗದವರ ಮಕ್ಕಳು ಕನ್ನಡ ಮಾಧ್ಯಮಕ್ಕೆ ಹೋಗುತ್ತಾರೆ. ಅಂಥ ಕೂಲಿ ಕಾರ್ಮಿಕರ ಮತ್ತು ಬಡವರ ಮಕ್ಕಳು ಕೆಪಿಎಸ್‌ಸಿ ಪರೀಕ್ಷೆಗಾಗಿ ಚಾತಕ ಪಕ್ಷಿಗಳ ಹಾಗೆ ಕಾಯುತ್ತಾರೆ. ಇಂಥ ಪರೀಕ್ಷೆಗೆ ಒಂದು ಸಾರಿ ಪ್ರಶ್ನೆ ಪತ್ರಿಕೆ ತಯಾರಿಸುವುದು ತಪ್ಪಾಗಬಹುದು. ಎರಡು ಸಾರಿಯೂ ಹೇಗೆ ತಪ್ಪಾಗಲು ಸಾಧ್ಯ ಎಂದರು. ಪುನಃ ಪ್ರಶ್ನೆ ತಯಾರಿಸಿ ಪರೀಕ್ಷೆ ಮಾಡಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಆದೇಶಿಸುತ್ತಾರೆ. ಆದರೂ ಹೊಸ ಪ್ರಶ್ನೆ ಪತ್ರಿಕೆಯಲ್ಲಿಯೂ 79 ತಪ್ಪುಗಳು ಆಗುತ್ತವೆ ಎಂದರೆ ಕೆಪಿಎಸ್‌ಸಿಗೆ ಎಷ್ಟು ಉಡಾಫೆ ಇರಬೇಕು ಅಥವಾ ಅವರಿಗೆ ಅಹಂಕಾರ ಇರಬೇಕು ಎಂದು ಅವರು ಕೇಳಿದರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರೇ ಇದಕ್ಕಿಂತ ಕನ್ನಡದಲ್ಲಿ ಉತ್ತಮವಾಗಿ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಬಹುದಿತ್ತು. ಈ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯುತ್ತಮವಾಗಿ ಕನ್ನಡ ಮತ್ತು ಅದರ ವ್ಯಾಕರಣ ಕುರಿತು ಮಾತನಾಡಿದ್ದನ್ನು ನಾವು ನಮ್ಮ ಮಕ್ಕಳಿಗೆ ಉದಾಹರಿಸುತ್ತೇವೆ. ಇಂಥ ಮುಖ್ಯಮಂತ್ರಿ ಇರುವಾಗ ಕೆಪಿಎಸ್‌ಸಿಯು ಧನಿಷ್ಠರಿಗೆ ಅನುಕೂಲ ಆಗಲಿ ಎಂದು ಏನೋ ಹಗರಣ ಮಾಡಿದಂತೆ ಇದೆ. ಕೆಪಿಎಸ್‌ಸಿಗೆ ಯಾವುದೇ ಸರ್ಕಾರ ಇರಲಿ ತಮ್ಮ ಚೇಲಾಗಳನ್ನು ನೇಮಕ ಮಾಡಿಕೊಂಡು ಬಂದಿರುವುದರಿಂದ ಅಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಪ್ರಾಮಾಣಿಕರನ್ನು ನಿಷ್ಠಾವಂತರನ್ನು ಅಲ್ಲಿ ಸದಸ್ಯರಾಗಿ ನೇಮಕ ಮಾಡಿದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಮುಖ್ಯಮಂತ್ರಿಗಳು ಕೆಪಿಎಸ್‌ಸಿಯನ್ನು ಬಂದ್ ಮಾಡಬೇಕು. ಇಲ್ಲವೇ ಅದನ್ನು ಸ್ವಚ್ಛ ಮಾಡಬೇಕು ಎಂದು ಅವರು ಆಗ್ರಹಿಸಿದರು.
ʻಕೇಂದ್ರ ಸೇವೆಗೆ ನೇಮಕ ಮಾಡುವ ಯುಪಿಎಸ್‌ಸಿಯಲ್ಲಿ ಇಂತಹ ಯಾವ ಅಕ್ರಮವೂ ನಡೆಯುವುದಿಲ್ಲ. ಅಲ್ಲಿ ಸಂದರ್ಶನಕ್ಕೆ ಮಕ್ಕಳು ಹೆಮ್ಮೆಯಿಂದ ಹೋಗುತ್ತಾರೆ. ನಾವೆಲ್ಲ ಶಾಸಕರು ಸೇರಿಕೊಂಡು ಕೆಪಿಎಸ್‌ಸಿಯಲ್ಲಿ ಎಂತಹ ಸದಸ್ಯರನ್ನು ನೇಮಕ ಮಾಡಲು ನಿರ್ಣಯ ಪಾಸು ಮಾಡಬೇಕು ಎಂದರು.ಕೆಪಿಎಸ್‌ಸಿಯನ್ನು ಸ್ವಚ್ಛಗೊಳಿಸಬೇಕು. ತಪ್ಪಿತಸ್ಥರನ್ನು ಜೈಲಿಗೆ ಕಳಿಸಬೇಕು. ಇಲ್ಲವಾದರೆ ನಾವು ಇಲ್ಲಿ ಮಾತನಾಡುತ್ತಲೇ ಇರುತ್ತೇವೆ. ಅಲ್ಲಿ ಯಾವ ಸುಧಾರಣೆಯೂ ಆಗುವುದಿಲ್ಲ. ಈ ವ್ಯವಸ್ಥೆ ಹೀಗೆಯೇ ಮುಂದುವರಿಯುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.