ಹಾವೇರಿ: ಜಿಲ್ಲೆಯಲ್ಲಿರುವ ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯ ಹಾಗೂ ಹಾವೇರಿ ವಿಶ್ವವಿದ್ಯಾಲಯಕ್ಕೆ ಮುಂಬರುವ 2026 ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ ಈ ಎರಡೂ ವಿಶ್ವ ವಿದ್ಯಾಲಯಗಳು ಅಭಿವೃದ್ಧಿಯಾಗಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಲಾಯಿತು. ಜಿಲ್ಲೆಯ ಹಾವೇರಿ ವಿಶ್ವವಿದ್ಯಾಲಯ ಮತ್ತು ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿ ಹಾಗೂ ಸ್ನಾತ್ತಕೋತ್ತರ ಪದವಿಯ ವಿವಿಧ ಕೋರ್ಸುಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ನೂರಾರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಕಾಯಂಯೇತರ ಸಿಬ್ಬಂದಿಗಳಿದ್ದಾರೆ. ಸಂಬಳ ನೀಡಲಾಗದೇ ಸಿಬ್ಬಂದಿಗಳನ್ನು ಸೇವೆಯಿಂದ ಕೈಬಿಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಅಗತ್ಯ ಅನುದಾನ ಇಲ್ಲದೇ ಇರುವುದರಿಂದಾಗಿ ಅಗತ್ಯ ಕಟ್ಟಡಗಳು, ಉಪಕರಣಗಳು, ಸಿಬ್ಬಂದಿ ಕೊರತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ವಿಶ್ವವಿದ್ಯಾಲಯಗಳು ಅಭಿವೃದ್ಧಿ ಹೊಂದಲು ಸಮಸ್ಯೆಯಾಗುತ್ತಿದೆ. ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೂ ಸಹ ತೊಂದರೆಯಾಗುತ್ತಿದೆ. ಆದ್ದರಿಂದ ಹಾವೇರಿ ವಿಶ್ವವಿದ್ಯಾಲಯ ಹಾಗೂ ಜಾನಪದ ವಿಶ್ವವಿದ್ಯಾಲಯಗಳಿಗೆ ಮುಂಬರುವ 2026 ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ ಈ ಎರಡೂ ವಿಶ್ವವಿದ್ಯಾಲಯಗಳು ಅಭಿವೃದ್ಧಿಯಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಮುಖಂಡರಾದ ಬಸವರಾಜ ಪೂಜಾರ, ಪರಿಮಳ ಜೈನ, ಸತೀಶ್ ಎಂ.ಬಿ., ಲಕ್ಷ್ಮಿಪ್ರಭ ಎಸ್. ಹುಲ್ಲೂರು, ಮಜೀದ್ ಎಸ್.ಎಚ್., ಮಂಜುನಾಥ ಸಣ್ಣಿಂಗಣ್ಣನವರ, ಖಲಂದರ ಅಲ್ಲಿಗೌಡ್ರ ಸೇರಿದಂತೆ ಇತರರು ಇದ್ದರು.