124ನೇ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಕ್ಷಣಗಣನೆ

KannadaprabhaNewsNetwork | Published : Feb 14, 2025 12:31 AM

ಸಾರಾಂಶ

ಫೆ.14ರಂದು ನಡೆಯುವ ಭಂಡಾರ ಒಡೆಯನ ಭವಿಷ್ಯವಾಣಿ ಆಲಿಸಲು ಕ್ಷಣಗಣನೆ ಆರಂಭವಾಗಿದೆ.

ಚಂದ್ರು ಕೊಂಚಗೇರಿ

ಹೂವಿನಹಡಗಲಿ: ಶತಮಾನಗಳ ಇತಿಹಾಸವಿರುವ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯ ಕೇಂದ್ರಬಿಂದುವಾಗಿರುವ ಕಾರ್ಣಿಕ ಸ್ಥಳ ಡೆಂಕಣ ಮರಡಿ ಪುಣ್ಯಭೂಮಿಯಲ್ಲಿ ಫೆ.14ರಂದು ನಡೆಯುವ ಭಂಡಾರ ಒಡೆಯನ ಭವಿಷ್ಯವಾಣಿ ಆಲಿಸಲು ಕ್ಷಣಗಣನೆ ಆರಂಭವಾಗಿದೆ. ಭಕ್ತರ ಕಾತರ ಹೆಚ್ಚುತ್ತಿದೆ.ತಾಲೂಕಿನ ತುಂಗಭದ್ರ ನದಿ ತೀರದ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ನುಡಿ ಮೇಲೆ ಅಪಾರ ನಂಬಿಕೆ ಹೊಂದಿರುವ ಭಕ್ತರು ರಾಜ್ಯ, ಅಂತರಾಜ್ಯಗಳಿಂದ ಕಾರ್ಣಿಕ ನುಡಿ ಆಲಿಸಲು ಆಗಮಿಸಿ ಸ್ವಾಮಿ ದರ್ಶನ ಪಡೆಯುತ್ತಾರೆ.

ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ ಶಿವ-ಪಾರ್ವತಿಯರು ಮೈಲಾರಲಿಂಗ-ಗಂಗಿ ಮಾಳಮ್ಮ ವೇಷದಲ್ಲಿ ಬಂದು ಮಲ್ಲಾಸುರ, ಮಣಿಕಾಸುರರನ್ನು ಸಂಹರಿಸಿದ ವಿಜಯ ದಿನದ ಸಂಕೇತವಾಗಿ ಭಕ್ತರ ಆಶಯದಂತೆ ಶುಭ ನುಡಿ ದೇವವಾಣಿಯನ್ನು ಕಾರ್ಣಿಕ ನುಡಿ ಎಂದು ಹೇಳಲಾಗುತ್ತಿದೆ.

ಫೆ.14ರಂದು ಸಂಜೆ 5.30ಕ್ಕೆ ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ಉಪವಾಸ ವ್ರತದಲ್ಲಿರುವ ಗೊರವಯ್ಯ, ಸುಮಾರು 20 ಅಡಿ ತುಪ್ಪ ಹಚ್ಚಿದ ಐತಿಹಾಸಿಕ ಬಿಲ್ಲನ್ನು ಏರಿ ಸದ್ದಲೇ..! ಎಂದಾಗ ನೆರೆದಿದ್ದ ಲಕ್ಷಾಂತರ ಭಕ್ತರು, ಪಶು, ಪಕ್ಷಿ ಸೇರಿದಂತೆ ಎಲ್ಲ ಕಡೆಗೂ ನಿಶ್ಯಬ್ದವಾಗುತ್ತದೆ. ಆ ಕ್ಷಣದಲ್ಲೇ ಗೊರವಯ್ಯ ಕಾರ್ಣಿಕ ನುಡಿಯುವುದು ಸಂಪ್ರದಾಯ. ಇದು 124ನೇ ವರ್ಷದ ಕಾರ್ಣಿಕವಾಗಿದೆ.

ಪ್ರಸಕ್ತ ವರ್ಷದ ಮಳೆ, ಬೆಳೆ, ರಾಜಕೀಯದ ಏಳು-ಬೀಳು, ಆರ್ಥಿಕ, ವಾಣಿಜ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳ ದೇಶದ ಭವಿಷ್ಯ ಕಾರ್ಣಿಕ ನುಡಿಯಲ್ಲಿ ಅಡಗಿರುತ್ತದೆ. ಕಳೆದ 2024ರಲ್ಲಿ ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌ ಎಂದು ಗೊರವಯ್ಯ ದೇವವಾಣಿ ಎಂಬ ನಂಬಿಕೆ ಇರುವ ಕಾರ್ಣಿಕ ನುಡಿದ್ದನು. ಪ್ರತಿ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯು ಸತ್ಯಾಂಶವನ್ನು ಸಾರುತ್ತಿರುವ ಹಿನ್ನೆಲೆಯಲ್ಲಿ ಕಾರ್ಣಿಕ ನುಡಿಯನ್ನು ಭಕ್ತರು ಅಪಾರವಾಗಿ ನಂಬಿಕೆ ಹೊಂದಿದ್ದಾರೆ.

ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬಾಬುದಾರರು, ಸೇವೆ ಮಾಡುತ್ತಿರುವ ಹತ್ತಾರು ಕುಟುಂಬಗಳಲ್ಲಿ, ಕಾರ್ಣಿಕ ನುಡಿಯುವ ಮನೆತನವೂ ಒಂದು. ಇಂದಿಗೂ ಈ ಮನೆತನವನ್ನು ಕಾರ್ಣಿಕದ ಎಂದು ಕರೆಯುತ್ತಾರೆ. ಫೆ.15ರಂದು ಸಂಜೆ 4.30ಕ್ಕೆ ದೇವಸ್ಥಾನದ ಆವರಣದಲ್ಲಿ ಕಂಚಿವೀರರು ಆಕರ್ಷಕವಾದ ಮೈಲಾರಲಿಂಗನ ಒಡಪುಗಳನ್ನು ಹೇಳುತ್ತಾ ಪವಾಡಗಳು ನಡೆಯಲಿವೆ. ಜಾತ್ರೆಗೆ ಬಂದ ಲಕ್ಷಾಂತರ ಗೊರವರು ಮೈಲಾರಲಿಂಗ ಸ್ವಾಮಿಯ ಮುಂದೆ ಬಾ‌ರುಕೋಲಿನ ಚಾಟಿಗಳನ್ನು ಹೊಡೆದುಕೊಳ್ಳುವ ದೃಶ್ಯ, ಜತೆಗೆ ಮಹಿಳಾ ಗೊರವರು ಮೈಲಾರಲಿಂಗ ಹಾಗೂ ಗಂಗಿ ಮಾಳಮ್ಮನಿಗೆ ಚಾಮರ ಬೀಸುವ ಮೂಲಕ ಬ೦ದ ಭಕ್ತರಲ್ಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಮಾಡುತ್ತಾರೆ.

ಕಾರ್ಣಿಕ ನುಡಿಯ ಘಟನಾವಳಿಗಳು: ಕಾರ್ಣಿಕೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. 1856ರಲ್ಲಿ ಕೆಂಪುನೋಣಗಳಿಗೆ ಕಷ್ಟ ಪ್ರಾಪ್ತಿಯಾದೀತಲೇ ಪರಾಕ್ ಎಂಬ ಕಾರ್ಣಿಕ ನುಡಿ ಹಿನ್ನೆಲೆಯಲ್ಲಿ ಬ್ರಿಟಿಷರ ವಿರುದ್ಧ ಸಿಪಾಯಿದಂಗೆ ನಡೆಯಿತು. 1984ರಲ್ಲಿ ಇಬ್ಬನಿ ಕರಗಿತಲೇ ಪರಾಕ್ ಕಾರ್ಣಿಕ ನುಡಿದಾಗ, ದೇಶದ ಅಂದಿನ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಮೃತಪಟ್ಟರು. 1991ರಲ್ಲಿ ಮುತ್ತು ಒಡೆದು ಮೂರು ಭಾಗ ಆದಿತಲೇ ಪರಾಕ್ ಎಂಬ ಕಾರ್ಣಿಕ ನುಡಿದಾಗ, ಪ್ರಧಾನಿ ರಾಜೀವಗಾಂಧಿ ಬಾಂಬ್ ಸ್ಫೋಟದಿಂದ ನಿಧನ ಹೊಂದಿದ ನಿದರ್ಶನಗಳಿವೆ ಎನ್ನುತ್ತಾರೆ ದೇವಸ್ಥಾನದ ವಂಶ ಪರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್.

ಇಂತಹ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿಯಲ್ಲಿ ದೇಶದ ಭವಿಷ್ಯವೇ ಅಡಗಿದೆ ಎಂಬ ಸತ್ಯಾಂಶ ಕಂಡು ಬರುತ್ತದೆ. ಈ ಬಾರಿಯ ಕಾರ್ಣಿಕ ನುಡಿಯಲ್ಲಿ ಏನು ಅಡಗಿದೆ ಎಂಬ ಕಾತರದಲ್ಲಿ ಭಕ್ತರಿದ್ದಾರೆ.

ಫೆ.15ರಂದು ಸರಪಳಿ ಪವಾಡ: ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಫೆ.15ರಂದು ಸಂಜೆ 4.30ಕ್ಕೆ ಗೊರವರು ಹಾಗೂ ಕಂಚಿ ವೀರರಿಂದ, ಸರಪಳಿ ಪವಾಡ ಹಾಗೂ ಭಗನಿಗೂಟ ಪವಾಡಗಳು ದೇವಸ್ಥಾನದ ಆವರಣದಲ್ಲಿ ನಡೆಯಲಿವೆ. ಡೆಂಕಣ ಮರಡಿಯಲ್ಲಿ ರಾಕ್ಷಸರನ್ನು ಸಂಹಾರ ಮಾಡಿದ್ದ ಹಿನ್ನೆಲೆಯಲ್ಲಿ ಶುಭ ನುಡಿಯಬೇಕೆಂಬ ಕಾರಣಕ್ಕಾಗಿ ಕಾರ್ಣಿಕ ನುಡಿದ ಮರು ದಿನದಲ್ಲಿ ಹಲವಾರು ಪವಾಡಗಳನ್ನು ನಡೆಸುತ್ತಾ ಬಂದಿರುವುದು ದೇವಸ್ಥಾನದ ಸಂಪ್ರದಾಯವಾಗಿದೆ.

ಈ ಸಂದರ್ಭದಲ್ಲಿ ಗೊರವರು, ಕಂಚಿವೀರರು ಮನೆಯಲ್ಲಿ ಸಾಕಷ್ಟು ಮಡಿವಂತಿಕೆಯಿಂದ ದೇವರಿಗೆ ಹರಕೆ ತೀರಿಸುತ್ತಾರೆ. ವಂಶ ಪಾರಂಪರ್ಯವಾಗಿ ದೇವರ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಸಮ್ಮುಖದಲ್ಲಿ ಕಂಚಿವೀರರ ಆಯುಧಗಳಿಗೆ ಪೂಜೆ ಸಲ್ಲಿಸಿದ ನಂತರ ಪವಾಡಗಳು ನಡೆಯಲಿವೆ.

Share this article