ಹರಿಹರ ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ 7ನೇ ವರ್ಷದ ಗಣೇಶೋತ್ಸವ ನಿಮಿತ್ತ ಸೆ.14ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ನಿರ್ಮಿಸಿರುವ ಭವ್ಯ ಸುಂದರ ಅರಮನೆ ಸಮಸ್ತ ಭಕ್ತರನ್ನು ಆಕರ್ಷಿಸುತ್ತಿದೆ.
- ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಸಿದ್ಧವಾಗಿದೆ ಅರಮನೆ ಅಲಂಕಾರ
- - -
- ಹೈದರಾಬಾದ್‌ನಿಂದ ತರಲಾಗಿರುವ ಸುಂದ ಉತ್ಸವ ಮೂರ್ತಿ
- ಅ.4ರಂದು ಗಣೇಶ ಮೂರ್ತಿ ವಿಸರ್ಜನೆ ಶೋಭಾಯಾತ್ರೆ
- ಅಂದಾಜು 40 ರಿಂದ 60 ಸಾವಿರ ಭಕ್ತರಿಗೆ ಅನ್ನ ಪ್ರಸಾದಕ್ಕೆ ವ್ಯವಸ್ಥೆ
- - -
ಕನ್ನಡಪ್ರಭ ವಾರ್ತೆ ಹರಿಹರ
ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ 7ನೇ ವರ್ಷದ ಗಣೇಶೋತ್ಸವ ನಿಮಿತ್ತ ಸೆ.14ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ನಿರ್ಮಿಸಿರುವ ಭವ್ಯ ಸುಂದರ ಅರಮನೆ ಸಮಸ್ತ ಭಕ್ತರನ್ನು ಆಕರ್ಷಿಸುತ್ತಿದೆ.
ಪೂರ್ವಾಭಿಮುಖವಾಗಿ ನಿರ್ಮಾಣಗೊಂಡಿರುವ, ಅರಮನೆಯ ಮಹಾಮಂಟಪದ ಮೇಲೆ ಪಂಚ ಕಳಸಗಳುಳ್ಳ ಗೋಪುರ, ಸುಂದರ ಮೂರ್ತಿಗಳಿಂದ, ಮಯೂರಗಳ ಆಕೃತಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮಂಟಪದ ಎಡ-ಬಲ ದಿಕ್ಕಿನಲ್ಲಿ ಸುಂದರ ಚಿತ್ರಣಗಳು ಬಹು ಆಕರ್ಷಿತವಾಗಿವೆ.
ಅರಮನೆಯ ಒಳಗೆ ಪ್ರವೇಶಿಸಿದರೆ ಮಂಟಪದ ಎಡ-ಬಲ ಬದಿಯಲ್ಲಿ ವಿರಾಜಮಾನರಾಗಿ ಕುಳಿತಿರುವ ಗಣೇಶ ಮೂರ್ತಿಯು ಭಕ್ತರನ್ನು ಮಂತ್ರಮುಗ್ದರನ್ನಾಗಿಸುತ್ತಿವೆ. ಸಮಿತಿಯವರು ಹೈದರಾಬಾದಿನಿಂದ ತರಿಸಿರುವ ಉತ್ಸವ ಮೂರ್ತಿ ಬಹು ಸುಂದರವಾಗಿದೆ. ಮಂಟಪದ ಮೇಲೆ ಅಲ್ಲಲ್ಲಿರುವ ವೃತ್ತಾಕಾರದ ಚಿತ್ರಗಳು ನೋಡುತ್ತ ನಿಂತರೆ ಸಮಯ ಕಳೆದದ್ದು ಗೊತ್ತಾಗದಷ್ಟು ಚಿತ್ತಾಕರ್ಷಕ ಕಲಾಕೃತಿಗಗಳಾಗಿವೆ.
ಅಂದಾಜು ₹30 ಲಕ್ಷ ವೆಚ್ಚ:
ಹರಿಹರ ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದ ದಾನಿಗಳು, ಜಾತ್ಯತೀತವಾಗಿ ಸಮಸ್ತ ಜನತೆ ನೀಡಿರುವ ಸಹಕಾರದಿಂದ ಕಳೆದ ವರ್ಷ ₹21 ಲಕ್ಷಗಳ ವೆಚ್ಚದಲ್ಲಿ ಗಣೇಶೋತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ಈ ವರ್ಷ ಅಂದಾಜು ₹30 ಲಕ್ಷ ವೆಚ್ಚದಲ್ಲಿ ಗಣೇಶೋತ್ಸವ ಆಚರಿಸಲು ನಿರ್ಧರಿಸಿದ್ದೇವೆ. ಅಂದು ಸಹಕರಿಸಿದ ಸರ್ವರಿಗೂ, ಇಂದು ಸಹಕರಿಸುತ್ತಿರುವ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದು ಸಮಿತಿ ಅಧ್ಯಕ್ಷ ಸುರೇಶ್ ಪೈ ಚಂದಾಪೂರ್ ಭಾನುವಾರ ಗಣೇಶೋತ್ಸವ ಅಮರನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸಾದ ಸಮಿತಿ ಅಧ್ಯಕ್ಷ ರಾಜು ರೋಖಡೆ ಮಾತನಾಡಿ, ಸೆ.14ರ ಸೋಮವಾರದಿಂದ ಅಕ್ಟೋಬರ್ 4ರವರೆಗೆ ಒಟ್ಟು 21 ದಿನಗಳ ಕಾಲ ಹರಿಹರ ಹಿಂದೂ ಮಹಾ ಗಣಪತಿ ಉತ್ಸವ ನಡೆಯಲಿದೆ. ಉತ್ಸವದ ನಿಮಿತ್ತ, ಪ್ರತಿನಿತ್ಯ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅ.4ರಂದು ಗಣೇಶ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಯ ದಿನ ಅಂದಾಜು 40 ರಿಂದ 60 ಸಾವಿರ ಭಕ್ತರಿಗೆ ಅನ್ನ ಪ್ರಸಾದ ವಿತರಣೆಗೆ ಸಿದ್ಧತೆ ಮಾಡಲಾಗುವುದು ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಪ್ರಚಾರ ಸಮಿತಿ ಅಧ್ಯಕ್ಷ ಸಂತೋಷ ಗುಡಿಮನಿ, ಗೌರವ ಸಲಹೆಗಾರ ಶೇಖರಗೌಡ ಪಾಟೀಲ್, ಪೂಜಾ ಸಮಿತಿ ಅಧ್ಯಕ್ಷ ನಾಗರಾಜ್ ಭಂಡಾರಿ, ಮಹಿಳಾ ಸಮಿತಿ ಅಧ್ಯಕ್ಷೆ ರಶ್ಮಿ ಮೆಹರ್ವಾಡೆ ಮಾತನಾಡಿ, 21 ದಿನಗಳ ಕಾಲ ನಡೆಯುವ ಹಿಂದೂ ಮಹಾಗಣಪತಿ ಉತ್ಸವ ಸಮಯದಲ್ಲಿ ನಿತ್ಯ ಒಂದೊಂದು ಕಲಾ ತಂಡದವರಿಂದ ಕಲಾ ಪ್ರದರ್ಶನ, ವಿವಿಧ ಸ್ಪರ್ಧೆಗಳನ್ನು, ಹೋಮ, ಹವನಾದಿ ಪೂಜೆಗಳನ್ನು, ಆರೋಗ್ಯ ತಪಾಸಣಾ, ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.