ಕಾರಟಗಿ: ಭತ್ತದ ಕಣಜ ಕಾರಟಗಿ ತಾಲೂಕಿನ ಮರಲಾನಹಳ್ಳಿಯಲ್ಲಿ ಕನ್ನಡಿಗರು ಮತ್ತು ತೆಲಗು ಭಾಷಿಕರು ಕೂಡಿ ಕನ್ನಡ ತೇರು ಎಳೆಯಲು ಸನ್ನದ್ಧವಾಗಿದ್ದಾರೆ, ಈ ಐತಿಹಾಸಿಕ ಘಳಿಗೆ ಕಣ್ಣು ತುಂಬಿಕೊಳ್ಳಲು ಜ್ಞಾನ ದಾಸೋಹಕ್ಕಾಗಿ ಜನರು ಕ್ಷಣಗಣನೆ ಈಗ ಕಾಯುತ್ತಿದ್ದಾರೆ.
ತಾಲೂಕಿನಲ್ಲಿ ಈ ಬಾರಿ ಸಮ್ಮೇಳನ ಕೇವಲ ಒಂದು ದಿನಕ್ಕೆ ಸೀಮಿತ ಮಾಡಿದ್ದು, ಇಡೀ ಸಮ್ಮೇಳನದ ಯಶಸ್ವಿಗೆ ಇಡೀ ಮರಲಾನಹಳ್ಳಿ ಜನರು ಟೊಂಕಕಟ್ಟಿ ನಿಂತಿದ್ದಾರೆ. ತಾಲೂಕು ಕೇಂದ್ರದ ಸಮೀಪದ ಈ ಪುಟ್ಟ ಹಳ್ಳಿ ಹಲವು ವಿಶೇಷಗಳಿಂದ ಕೂಡಿದೆ.
ಇಲ್ಲಿ ಕನ್ನಡಿಗರು ಮತ್ತು ತೆಲುಗು ಭಾಷಿಕರೆ ಪಾರುಪತ್ಯೆ ಹೆಚ್ಚು. ಐತಿಹಾಸಿಕ ಹಿನ್ನೆಲೆಯುಳ್ಳ ಈ ಗ್ರಾಮಕ್ಕೆ ಸುಮಾರು ಮೂರು ಹೆಸರುಗಳಿವೆ. ಮರಲಾನಹಳ್ಳಿ, ಸಾಲುಂಚಿಮರ ಮತ್ತು ಯರಡೋಣ ಕ್ಯಾಂಪ್ ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ಹಿಂದೆ ಯರಡೋಣಾ ಮಂಡಲ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಇದನ್ನು ಯರಡೋಣಾ ಕ್ಯಾಂಪ್ ಎಂದು, ಹಾಗೆಯೇ ಗ್ರಾಮದ ರಸ್ತೆ ಎರಡು ಬದಿಯಲ್ಲಿ ಹುಣಸೆ ಮರಗಳು ಸಾಲು ಸಾಲಾಗಿ ಇದ್ದುದರಿಂದ ಇದನ್ನು ಸಾಲುಂಚಿಮರ ಅಥವಾ ಸಾಲು ಹುಣಸೆ ಮರ ಎಂದು ಕರೆಯುತ್ತಿದ್ದರು. ನಂತರ ಈ ಗ್ರಾಮಕ್ಕೆ ಆಂಧ್ರ ಮೂಲದ ತೆಲುಗು ಭಾಷಿಕರು ವಲಸೆ ಬಂದು ಕೃಷಿಕರಾಗಿ ಬೆಳೆದು ಗ್ರಾಮ ಸಂಪದ್ಭರಿತವಾಗಿ ಮಾಡಿದ್ದರಿಂದ ಈಗ ಕಾಲುವೆ ಪಕ್ಕದ ಸೀಮೆಯನ್ನು ಸಾಲುಂಚಿಮರ ಕ್ಯಾಂಪ್ ಎಂದು ಕರೆಯುತ್ತಾರೆ.ಈಗ ಗ್ರಾಮದಲ್ಲಿ ಗ್ರಾಪಂ ಅಸ್ತಿತ್ವಕ್ಕೆ ಬಂದಿದ್ದು, ಪ್ರಸ್ತುತ ಜಿಪಂ ಕ್ಷೇತ್ರವಾಗಿದೆ. ಇಲ್ಲಿ ಸರ್ಕಾರಿ ಶಾಲೆ ಇದೆ. ಐತಿಹಾಸಿಕವಾಗಿ ಗ್ರಾಮವು ಹೆಸರಾಗಿದೆ. ನಿಜಾಮ ಆಡಳಿತದಲ್ಲಿ ಗ್ರಾಮದ ಯಂಕಪ್ಪ ದೊಡ್ಡಮನಿ ಎನ್ನುವ ಯುವಕ ರಜಾಕರ ಹಾವಳಿಯಿಂದ ಮಹಿಳೆಯರನ್ನು ರಕ್ಷಿಸಲು ಗುಂಡೇಟಿಗೆ ಬಲಿಯಾಗಿದ್ದ ಇತಿಹಾಸವೂ ಇದೆ. ಈಗಿನ ಮರಲಾನಹಳ್ಳಿ ಹಳೇ ಊರಿನ ಹಿಂಭಾಗದಲ್ಲಿ ಆ ಕುರುಹು ಇದೆ.
ಗ್ರಾಮದ ಕೃಷ್ಣಪ್ಪ ಡೊಂಬರ್, ಜೆ.ತಿಪ್ಪಣ್ಣ, ಶ್ರೀಕಾಂತ ಮರಲಾನಹಳ್ಳಿ, ಕೆ.ಶ್ರೀಹರಿ, ಡಾ.ಎಂ.ಜಿ.ಸಂಗನಾಳ ಮಠ, ಸಿ.ಎಚ್. ರವಿನಂದ, ಬಿ.ಸೂರೆಡ್ಡಿ, ರವಿ ಈಡಿಗೇರ್, ವೀರೇಶ ಈಡಿಗೇರ್ ನೇತೃತ್ವದಲ್ಲಿ ನೂರಾರು ಯುವಕರು ಒಟ್ಟಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಭವ್ಯವಾದ ವೇದಿಕೆ ಕಲ್ಪಿಸಿ ಕನ್ನಡ ತಾಯಿಯ ಸೇವೆ ಮಾಡುತ್ತಿದ್ದಾರೆ.