ಕುಮಟಾ: ತಲೆತಲಾಂತರಗಳಿಂದ ಗೋವಿನ ಮಹತ್ವವನ್ನು ಆಚಾರ-ವಿಚಾರದಲ್ಲಿ, ಸಂಸ್ಕೃತಿ-ಸಂಸ್ಕಾರದಲ್ಲಿ ಬಿತ್ತರಿಸುತ್ತಾ ವೇದ ಮತ್ತು ಧರ್ಮವನ್ನು ಉಳಿಸಿಕೊಂಡು ಬಂದವರು ನಮ್ಮ ವೈದಿಕರು ಎಂದು ಅಮೃತಧಾರಾ ಗೋಬ್ಯಾಂಕಿನ ಅಧ್ಯಕ್ಷ ಮುರಲೀಧರ ಪ್ರಭು ಹೇಳಿದರು.
ವೈದಿಕರ ಸಮಾವೇಶದಲ್ಲಿ ಹಿರಿಯ ವೇದಜ್ಞ ಸುಬ್ರಹ್ಮಣ್ಯ ಶರ್ಮಾ ಚಿತ್ರಿಗೇಮಠ ಹಾಗೂ ಇತರ ವೈದಿಕರನ್ನು ಗೌರವಿಸಲಾಯಿತು. ಬಳಿಕ ವೇ. ಪರಮೇಶ್ವರ ಮಾರ್ಕಾಂಡೆ ಗೋಕರ್ಣ ಮಾತನಾಡಿ, ಮನುಷ್ಯರ ದಿನಚರಿ ಗೋವಿಲ್ಲದೇ ನಡೆಯದು. ಅಗ್ನಿ ಉಪಾಸನೆಗೂ ಗವ್ಯೋತ್ಪನ್ನ ಅಗತ್ಯ. ಪಂಚಗವ್ಯವು ಶರೀರ ಶುದ್ಧಿಯಷ್ಟೇ ಅಲ್ಲ, ಆತ್ಮಶುದ್ಧಿಗೂ ಸಹಾಯಕ. ಪ್ರತಿ ಮನೆಗಳಲ್ಲಿ ಗೋ ಸಾಕುವುದು ಕಷ್ಟವಾದ ಸಂದರ್ಭದಲ್ಲಿ ಗೋಶಾಲೆಗಳು ಅವಶ್ಯ ಎಂದರು.
ವೇ. ವಿಘ್ನೇಶ್ವರ ಭಟ್ಟ ಕತಗಾಲ ಮಾತನಾಡಿ, ವೇದಘೋಷದಿಂದ ವಾತಾವರಣ ಶುದ್ಧವಾಗುತ್ತದೆ. ಮೂವತ್ತ್ಮೂರು ಕೋಟಿ ದೇವತೆಗಳ ಆವಾಸ ಎಂದು ನಂಬಿ ಗೋವನ್ನು ಆರಾಧಿಸುತ್ತಿದ್ದೇವೆ. ಕೃಚ್ಛ್ರಾಚರಣೆ ವೇಳೆ ಗೋದಾನ ಮಾಡಿ ಅದರ ಮೌಲ್ಯವನ್ನು ಗೋಶಾಲೆಗೆ ನೀಡುವ ಪದ್ಧತಿ ಬಲಪಡಿಸಬೇಕು ಎಂದರು.ವೇ. ಶ್ರೀಪಾದ ಭಟ್ಟ ಮಾತನಾಡಿ, ಗೋವಿಗೂ ವೈದಿಕರಿಗೂ ಬಿಡಿಸಲಾರದ ನಂಟು. ಯಜ್ಞದ ಹವಿಸ್ಸಿಗೆ ಗವ್ಯೋತ್ಪನ್ನಗಳು ಅಗತ್ಯ. ದಾನಗಳಲ್ಲಿ ಶ್ರೇಷ್ಠವಾದುದು ಗೋದಾನ. ಕೃತಕ ಗರ್ಭಧಾರಣೆ ಕ್ರಮಗಳಿಂದ ದೇಶಿ ಗೋಸಂಕುಲಕ್ಕೆ ಅಪಾಯದ ಆತಂಕವಿದೆ ಎಂದರು.
ವೇದಘೋಷದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಕಾಮಧೇನು ಮಂದಿರದಲ್ಲಿ ಕಾಮಧೇನು ಹವನ ಹಾಗೂ ಪೂಜೆ ಸಮರ್ಪಿಸಲಾಯಿತು. ಸಂಚಾಲಕ ರಾಜಾರಾಮ ಭಟ್ಟ ನೇತೃತ್ವದಲ್ಲಿ ವೇ. ವಿನಾಯಕ ಭಟ್ಟ ಕೋಣಾರೆ ಪೂಜಾ ಕೈಂಕರ್ಯ ನೆರವೇರಿಸಿದರು. ಜಿ.ಎಸ್. ಹೆಗಡೆ, ಸುಬ್ರಾಯ ಹೆಗಡೆ ಕೋಣಾರೆ ಇತರರು ಇದ್ದರು.