ಗ್ಯಾರಂಟಿ ಯೋಜನೆ ಜಾಗೃತಿ ಮೂಡಿಸಿ

KannadaprabhaNewsNetwork |  
Published : Feb 21, 2026, 02:30 AM IST
20ಕೆಪಿಎಲ್23 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್‌ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರ ವಾಹನ ಹಾಗೂ ಕಲಾ ಜಾಥಾ ಕಾರ್ಯಕ್ರಮ | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮಪರ್ಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 3 ಲಕ್ಷ 19 ಸಾವಿರಕ್ಕೂ ಅಧಿಕ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ

ಕೊಪ್ಪಳ: ಹೆಚ್ಚಿನ ಜನರಿರುವ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಚಾರ ಹಮ್ಮಿಕೊಳ್ಳುವ ಮೂಲಕ ಮತ್ತಷ್ಟು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.

ಅವರು ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆ ಕುರಿತಂತೆ ಎಲ್‌ಇಡಿ ವಾಹನದ ಮೂಲಕ ಕಿರುಚಿತ್ರಗಳ ಪ್ರದರ್ಶನ, ಸಂಗೀತ, ಬೀದಿ ನಾಟಕದಿಂದ ಜನಸಾಮಾನ್ಯರಿಗೆ ಮಾಹಿತಿ ಹಾಗೂ ಪ್ರಚಾರ ನೀಡಲು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಪ್ರಚಾರ ವಾಹನ ಹಾಗೂ ಕಲಾ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಎಲ್ಲ ಅರ್ಹ ಫಲಾನುಭವಿಗಳಿಗೆ ನೇರವಾಗಿ ಈ ಯೋಜನೆಗಳ ಲಾಭ ತಲುಪಿಸುವಂತಹ ಕೆಲಸ ನಮ್ಮ ಸರ್ಕಾರದಿಂದ ಆಗುತ್ತಿದೆ. ಈ ಎಲ್ಲ ಐದು ಯೋಜನೆಗಳ ಬಗ್ಗೆ ಪ್ರತಿಯೊಂದು ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರಚಾರ ಆಗಬೇಕೆಂದು ಸರ್ಕಾರವು ಪ್ರಚಾರ ವಾಹನಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮಪರ್ಕವಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 3 ಲಕ್ಷ 19 ಸಾವಿರಕ್ಕೂ ಅಧಿಕ ಫಲಾನುಭವಿಗಳು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ₹1581 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ನೀಡಲಾಗಿದೆ. ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 11 ಕೋಟಿ ಮಹಿಳಾ ಫಲಾನುಭವಿಗಳು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯು ಪಡಿತರ ಚೀಟಿದಾರರಿಗೆ ಅನುಕೂಲವಾಗಿದೆ. ಯುವನಿಧಿಯಡಿ 13 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ. ಗೃಹಜ್ಯೋತಿಯಡಿ ಜಿಲ್ಲೆಯ ಶೇ. 98.5 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ವಿಶೇಷವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಮತ್ತು ಸ್ವಾವಲಂಬನೆಯತ್ತ ತೆಗೆದುಕೊಂಡು ಹೋಗುವ ಕೆಲಸವಾಗುತ್ತಿದೆ. ಈ ಯೋಜನೆಗಳಿಗಾಗಿ ಸರ್ಕಾರವು ₹52 ಸಾವಿರ ಕೋಟಿ ಪ್ರತಿವರ್ಷ ಮೀಸಲಿಟ್ಟು, ಬಡವರಿಗೆ, ಮಹಿಳೆಯರಿಗೆ ಆರ್ಥಿಕ ಧನ ಸಹಾಯ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಮಾನ್ವಿ ಪಾಶಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ್ ಜಿ., ಕಾರಟಗಿ ತಾಪಂ ಕೆಡಿಪಿ ಸದಸ್ಯ ದಾವಲಸಾಬ್, ದೇಸಾಯಿ ಕ್ಯಾಂಪ್ ಗ್ರಾಪಂ ಸದಸ್ಯರಾದ ಮಹೇಬೂಬ್, ಕಲಾವಿದ ಭಾಷು ಹಿರೇಮನಿ, ರಮೇಶ ಸಿಂಧನೂರು, ವಾರ್ತಾ ಇಲಾಖೆಯ ಸಿಬ್ಬಂದಿ ಎನ್.ತಿಪ್ಪಯ್ಯ ನಾಯ್ಡು, ಆರೀಫ್ ಅಹ್ಮದ್, ಶಿಬಿರಾರ್ಥಿ ಪ್ರಕಾಶ ಹಾಗೂ ಕಿರಣ ಸೇರಿದಂತೆ ಇತರೆ ಸಿಬ್ಬಂದಿಗಳು ಮತ್ತು ಚಿಕ್ಕಮ್ಯಾಗೇರಿಯ ರಂಗಚೇತನ ಸಾಂಸ್ಕೃತಿ ಕಲಾ ಸಂಸ್ಥೆಯ ಕಲಾವಿದ ಕಾಳೇಶ್, ಶರಣಪ್ಪ ಮೇಟಿ, ವೀರಯ್ಯ, ಸುಲೋಚನಾ, ಗೌರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಧ ವಧುವಿಗೆ ಬಾಳುಕೊಟ್ಟ ವರ
ಸುತ್ತೋಲೆ ಇಲ್ಲದೇ ಕೈತೋಟದ ಸಸಿಗಳ ಹಣ ಪಾವತಿಗೆ ವಿರೋಧ