ಗದಗ: ನಕಲಿ ಪಿಎಚ್‌ಡಿ ಪದವಿ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ತರಗತಿಗಳು ಸುಗಮವಾಗಿ ನಡೆಯುವ ದೃಷ್ಟಿಯಿಂದ ಅಧ್ಯಾಪಕರ, ಶಿಕ್ಷಕರ ನೇಮಕಾತಿ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ನಗರದ ಗಾಂಧಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂತಹ ಘಟನೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯುಂಟು ಮಾಡುವುದಷ್ಟೇ ಅಲ್ಲದೆ ಶಿಕ್ಷಣದ ಗುಣಮಟ್ಟಕ್ಕೂ ಕಳಂಕ ತರುವಂತಹ ಸಂಗತಿಯಾಗಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಜಮಖಂಡಿ, ಹಾವೇರಿ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ಪಿಎಚ್‌ಡಿ ಪದವಿ ಹೊಂದಿದ ವ್ಯಕ್ತಿಗಳು ಸಿಕ್ಕಿ ಬೀಳುವ ಭಯದಿಂದ ರಾಜೀನಾಮೆ ನೀಡಿ ಪಾರಾಗುತ್ತಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗದೆ ಇರುವುದನ್ನು ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಈ ರೀತಿಯ ನಕಲಿ ಪಿ.ಎಚ್.ಡಿ. ಪದವಿಗಳನ್ನು ಹೊಂದಿ ಹುದ್ದೆಯನ್ನು ಗಿಟ್ಟಿಸಿಕೊಂಡಿರುವ ವ್ಯಕ್ತಿಗಳಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಉಂಟಾಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ನಕಲಿ ಪದವಿಗಳನ್ನು ತಯಾರಿಸುವ ಜಾಲ ಪತ್ತೆಹಚ್ಚಬೇಕು. ದಾಖಲೆಗಳನ್ನು ಪರಿಶೀಲಿಸಿ ಅವರ ವಿರುದ್ಧ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರ್ಕಾರಿ ಕಾಲೇಜುಗಳು ಸೇರಿದಂತೆ ಹಲವು ಕಾಲೇಜುಗಳಲ್ಲಿ ಅಧ್ಯಾಪಕರ ಹಾಗೂ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇದರಿಂದ ತರಗತಿಗಳು ಸರಿಯಾದ ಸಮಯಕ್ಕೆ ನಡೆಯದೇ ಇರುವುದು ಹಾಗೂ ಪಠ್ಯಕ್ರಮ ಸರಿಯಾದ ಸಮಯಕ್ಕೆ ಮುಗಿಯದೆ ಇರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದೊಡ್ಡ ಹೊಡೆತವನ್ನುಂಟು ಮಾಡಿದಂತಾಗಿದೆ. ಇದರಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಕಾಲೇಜು ಹಾಗೂ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ 9292 ಬೋಧಕ-ಬೋಧಕೇತರ ಹುದ್ದೆಗಳು ಹಾಗೂ ಐದು ಉಪಕುಲಪತಿಗಳ ಹುದ್ದೆಗಳು ಭರ್ತಿಯಾಗಿಲ್ಲ. ಹಿಂದಿನ ಸರ್ಕಾರದ ಆಡಳಿತದ ಅವಧಿಯಲ್ಲಿ ಸ್ಥಾಪನೆಗೊಂಡಿರುವ ಹೊಸ ಸಪ್ತ ವಿಶ್ವವಿದ್ಯಾಲಯಗಳು ಅನುದಾನದ ಕೊರತೆಯಿಂದ ಬಳಲುತ್ತಿದ್ದು, ವಿಶ್ವವಿದ್ಯಾಲಯಗಳು ಅರಕ್ಕೆರದ ಮೂರಕ್ಕೆ ಇಳಿಯದ ಪರಿಸ್ಥಿತಿಯಲ್ಲಿವೆ. ಹೊಸ ವಿಶ್ವವಿದ್ಯಾಲಯಗಳಲ್ಲಿ ಹೊಸದಾಗಿ ನೇಮಕಾತಿ ಆಗದೇ ಇರುವುದರಿಂದ ತಾತ್ಕಾಲಿಕ ಸಿಬ್ಬಂದಿಯಿಂದಲೇ ತರಗತಿಗಳು ನಡೆಯುತ್ತಿವೆ. ಈ ಸಂಗತಿಗಳು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಹಾಗೂ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿವೆ. ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಅನುದಾನವನ್ನು ಬಿಡುಗಡೆ ಮಾಡಬೇಕು. ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಅಧ್ಯಾಪಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.ಈ ವೇಳೆ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.