9ನೇ ವರ್ಷದ ಪುಲಿಗೆರೆ ಉತ್ಸವಕ್ಕೆ ಚಾಲನೆ

KannadaprabhaNewsNetwork |  
Published : Feb 21, 2026, 02:30 AM IST
ಪೊಟೋ-ಲಕ್ಷೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ  ೯ ನೇ ವರ್ಷದ ಪುಲಿಗೆರೆ ಉತ್ಸವ ಕಾರ್ಯಕ್ರಮವನ್ನು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮೀಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಸೊಮೇಶ್ವರನಿಗೆ ಪುಷ್ಪ ಅರ್ಪಿಸಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಈ ವೇಳೆ ಮಾತನಾಡಿದ ನಾಗಲಕ್ಷ್ಮೀ ಕೆ. ರಾವ್ ಅವರು, ಸೋಮೇಶ್ವರ ದೇವಸ್ಥಾನವು ಐತಿಹಾಸಿಕ ಪ್ರಸಿದ್ಧವಾಗಿದ್ದು, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.

ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ "ಪುಲಿಗೆರೆ ಉತ್ಸವ " ಶುಕ್ರವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.ಇನ್ಪೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿಯ ಸಹಯೋಗದಲ್ಲಿ ಉತ್ಸವದ ಮೊದಲ ದಿನ ಶುಕ್ರವಾರ ಬೆಳಗ್ಗೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ. ರಾವ್ ಮತ್ತು ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಸೋಮೇಶ್ವರ ದೇವರಿಗೆ ಪುಷ್ಪಸಲ್ಲಿಸಿ, ದೀಪ ಬೆಳಗಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಾಗಲಕ್ಷ್ಮೀ ಕೆ. ರಾವ್ ಅವರು, ಸೋಮೇಶ್ವರ ದೇವಸ್ಥಾನವು ಐತಿಹಾಸಿಕ ಪ್ರಸಿದ್ಧವಾಗಿದ್ದು, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಉದ್ದೇಶವಾಗಿದೆ. ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿಯವರು ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ಮಾಡುವ ಮೂಲಕ ನಮ್ಮ ಪುರಾತನ ಸಂಸ್ಕೃತಿ ಕಾಪಾಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸೋಮೇಶ್ವರನ ಸನ್ನಿಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎನ್ನುವ ಉದ್ದೇಶದಿಂದ ಇಂತಹ ವೈಶಿಷ್ಟ ಪೂರ್ಣ ಉತ್ಸವವನ್ನು ಕಳೆದ ೮ ವರ್ಷಗಳಿಂದ ಸಂಘಟಿಸುತ್ತಾ ಬಂದಿದ್ದು, ಈ ವರ್ಷ ೯ನೇ ಪುಲಿಗೆರೆ ಉತ್ಸವ ಕಾರ್ಯಕ್ರಮವಾಗಿದೆ. ಇಲ್ಲಿನ ವಾತಾವರಣ, ಕಲಾವಿದರಿಗೆ ಇಲ್ಲಿ ದೊರೆಯುವ ಗೌರವ ವಿಶಿಷ್ಟವಾಗಿದ್ದು, ಇದೊಂದು ಸಾಂಸ್ಕೃತಿಕ ಕಲೆಗಳ ತವರೂರಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಚಂಬಣ್ಣ ಬಾಳಿಕಾಯಿ, ಸಿ.ಆರ್. ಲಕ್ಕುಂಡಿಮಠ, ಬಸವೇಶ ಮಹಾಂತಶೆಟ್ಟರ, ಅಶ್ವಿನಿ ಅಂಕಲಕೋಟಿ, ಮಹಾಬಳೇಶ್ವರಪ್ಪ ಬೇವಿನಮರದ, ಪ್ರವೀಣ ಬಾಳಿಕಾಯಿ, ಸಿದ್ದನಗೌಡ ಬಳ್ಳೊಳ್ಳಿ, ಚನ್ನಪ್ಪ ಜಗಲಿ, ಡಾ. ಪಿ.ಡಿ. ತೋಟದ, ಈಶ್ವರ ಮೇಡ್ಲೇರಿ, ನಾಗರಾಜ ಕಳಸಾಪೂರ, ಸಿ.ಜಿ. ಹಿರೇಮಠ, ಸೋಮನಾಥ ಪೂಜಾರ, ಸಮೀರ ಪೂಜಾರ, ರಾಘವೇಂದ್ರ ಪೂಜಾರ, ಮಾಲಾದೇವಿ ದಂದರಗಿ, ಸುಮಾ ಚೋಟಗಲ್, ಪಾರ್ವತಿ ಕಳ್ಳಿಮಠ, ಪೂರ್ಣಾಜಿ ಖರಾಟೆ, ಸುರೇಶ ರಾಚನಾಯ್ಕರ್, ಜಿ.ಎಸ್. ಗುಡಗೇರಿ, ಬಸವರಾಜ ಮೆಣಸಿನಕಾಯಿ ಮುಂತಾದವರಿದ್ದರು. ಜನಮನ ಸೂರೆಗೊಂಡ ಹಿಂದೂಸ್ತಾನಿ ಗಾಯನ

ಲಕ್ಷ್ಮೇಶ್ವರ: ಪಟ್ಟಣದಲ್ಲಿ ನಡೆಯುತ್ತಿರುವ 9ನೇ ವರ್ಷದ ಪುಲಿಗೆರ ಉತ್ಸವವು ಶುಕ್ರವಾರ ಇನ್ಪೋಶಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಹಾಗೂ ಸೋಮೇಶ್ವರ ಭಕ್ತರ ಸೇವಾ ಸಮಿತಿ ಆಶ್ರಯದಲ್ಲಿ ಆರಂಭಗೊಂಡಿತು.ಮೊದಲ ದಿನದ ಉದಯ ರಾಗ- 1 ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ವಿದುಷಿ ರಾಜೇಶ್ವರಿ ಪಾಟೀಲ ಅವರ ಗಾಯನವು ಕೇಳುಗರನ್ನು ಮೋಡಿ ಮಾಡಿತು.ಶುಕ್ರವಾರ ಬೆಳಗ್ಗೆ ಸರಿಯಾಗಿ ಸೂರ್ಯೋದಯದ ಕಿರಣಗಳು ಸೋಮೇಶ್ವರ ದೇವಾಲಯದ ಮೇಲೆ ಬೆಳಕಿನ ಚಿತ್ತಾರ ಮೂಡಿಸುತ್ತಿದ್ದರೆ ಇತ್ತ ರಾಜೇಶ್ವರಿ ಪಾಟೀಲ ಅವರ ಕಂಠಸಿರಿಯಲ್ಲಿ ಮೇರೆ ಮನ್ ಯಾವೋ ಎನ್ನುವ ಗಾಯನವು ಅದ್ಭುತವಾಗಿ ಮೂಡಿ ಬರುತ್ತಿತ್ತು. ಆಲಾಪಗಳೊಂದಿಗೆ ಗಾಯನ ಪ್ರಸ್ತುತಪಡಿಸುತ್ತಿದ್ದರೆ ನೆರೆದಿದ್ದ ಸಂಗೀತಾಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ತೂರಕಾ ಸಂಘ ರುತ್ ಮಾನೆ, ಘರ್ ಕಾ ಜಾರಿ ಮಾಯಿ ಎನ್ನುವ ಗಾಯನವು ಸೋಮೇಶ್ವರ ದೇವಾಲಯದ ಆವರಣವನ್ನು ವ್ಯಾಪಿಸಿತು. ಕಬೀರ್ ದಾಸರ ಅಭಂಗ "ಅಜಪಾ ಜಾಪ ಜಾಪೋ ಬಾಯಿ ಸಾದೋ " ಎನ್ನುವ ಹಾಡಿಗೆ ಸಂಗೀತ ಪ್ರೇಮಿಗಳು ತಲೆದೂಗಿದರು. ಕೊನೆಯಲ್ಲಿ ಅಲ್ಲಮ ಪ್ರಭುವಿನ "ಪ್ರಣತಿ ಇದೆ ಭಕ್ತಿ ಇದೆ, ಜ್ಯೋತಿ ತಾ ಬೆಳಗುವುದೇ " ಎನ್ನುವ ವಚನಕ್ಕೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿ ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು.ಹರ್ಷಿತ ಸೋನಿ ಅದ್ಭುತವಾಗಿ ತಬಲಾ ಸಾಥ್ ಹಾಗೂ ಚಿದಂಬರ ಜೋಶಿ ಅವರು ಹಾರ್ಮೋನಿಯಂ ಸಾಥ್‌ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಧ ವಧುವಿಗೆ ಬಾಳುಕೊಟ್ಟ ವರ
ಸುತ್ತೋಲೆ ಇಲ್ಲದೇ ಕೈತೋಟದ ಸಸಿಗಳ ಹಣ ಪಾವತಿಗೆ ವಿರೋಧ