ಖೋಟಾ ನೋಟು ತಯಾರಿಕೆ ಜಾಲ ಪತ್ತೆ

KannadaprabhaNewsNetwork |  
Published : Sep 01, 2026, 01:15 AM IST
6.ಖೋಟಾ ನೋಟು ತಯಾರಿಸುತ್ತಿದ್ದ ನಿರ್ಮಾಣ ಹಂತದ ಮನೆ | Kannada Prabha

ಸಾರಾಂಶ

ರಾಮನಗರ: ನಿರ್ಮಾಣ ಹಂತದ ಮನೆಯೊಂದರ ಮೇಲೆ ದಾಳಿ ನಡೆಸಿ ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು, 5 ಲಕ್ಷ ಮೌಲ್ಯದ ನಕಲಿ ನೋಟಿಗೆ ಸಿದ್ಧಪಡಿಸಿದ್ದ 10 ಬಂಡಲ್ ವಶಪಡಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ

ರಾಮನಗರ: ನಿರ್ಮಾಣ ಹಂತದ ಮನೆಯೊಂದರ ಮೇಲೆ ದಾಳಿ ನಡೆಸಿ ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು, 5 ಲಕ್ಷ ಮೌಲ್ಯದ ನಕಲಿ ನೋಟಿಗೆ ಸಿದ್ಧಪಡಿಸಿದ್ದ 10 ಬಂಡಲ್ ವಶಪಡಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಶಾಂತಿಲಾಲ್ ಲೇಔಟ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆ ಮೇಲೆ ನಗರ ವೃತ್ತ ಆರಕ್ಷಕ ನಿರೀಕ್ಷಕ ರಮೇಶ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ 200 ಮತ್ತು 500 ಮುಖ ಬೆಲೆಯ ನಕಲಿ ನೋಟಿಗೆ ಪೇಪರ್ ಸಿದ್ದಪಡಿಸುತ್ತಿದ್ದ 7 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಮನೆ ಮಾಲೀಕ ಸಂತೋಷ್, ಸಂಪತ್ , ಗೋವಿಂದರಾಜು, ರೇಣುಕಾರಾಜ್, ರಾಜೇಶ್, ಶಿವರಾಜ್ , ಸತೀಶ್ ಬಂಧಿತರು. ಇವರಲ್ಲಿ ಕೆಲವರು ಸ್ಥಳೀಯರು. ಆರೋಪಿ ಸಂಪತ್ ಜಾಲದ ಸೂತ್ರಧಾರ ಎನ್ನಲಾಗಿದೆ.

ಘಟನೆ ವಿವರ:

ಶಾಂತಿಲಾಲ್ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಯಲ್ಲಿ 10 ದಿನಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಬಾತ್ಮಿದಾರರಿಂದ ಐಜೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ಗೆ ಬಂದ ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದಾಗ ಖೋಟಾ ನೋಟು ಜಾಲ ಪತ್ತೆಯಾಗಿದ್ದು, ಸ್ಥಳದಲ್ಲಿಯೇ 7 ಮಂದಿ ಸಿಕ್ಕಿ ಬಿದ್ದಿದ್ದಾರೆ.

ಮನೆ ಮಾಲೀಕ ಸಂತೋಷ್ ಮೂಲತಃ ಮಾಗಡಿ ತಾಲೂಕು ಗಟ್ಟಿಪುರ ಗ್ರಾಮದವನು. ಸಣ್ಣಪುಟ್ಟ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದನು. ಅದರಿಂದ ಬಂದ ಹಣದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಸುತ್ತಿದ್ದನು. ಎಷ್ಟು ಕೋಟಾ ನೋಟುಗಳು ತಯಾರಾಗುತ್ತವೆಯೊ ಅಷ್ಟು ಕಮಿಷನ್ ಕೊಡಿಸುವುದಾಗಿ ಆರೋಪಿ ಸಂಪತ್ ಹೇಳಿದ್ದಾನೆ. ಹಣದ ಆಸೆಗೆ ಬಿದ್ದ ಸಂತೋಷ್ ನಿರ್ಮಾಣ ಹಂತದಲ್ಲಿದ್ದ ಮನೆಯನ್ನೇ ನಕಲಿ ನೋಟು ತಯಾರಿಕೆಗೆ ನೀಡಿ ಅದರಲ್ಲಿ ತಾನೂ ಭಾಗಿಯಾಗಿದ್ದಾನೆ.

ಪೊಲೀಸರು ದಾಳಿ ನಡೆಸಿದಾಗ 5 ಲಕ್ಷ ಮೌಲ್ಯದ ನಕಲಿ ನೋಟು ತಯಾರಿಸಲು ಬೇಕಾದ ಪೇಪರ್ ಗಳನ್ನು ಸಿದ್ಧಪಡಿಸಲಾಗುತ್ತಿತ್ತು. ಈ ಪೇಪರ್ ಗಳನ್ನು ಬೇರೆಡೆಗೆ ರವಾನೆ ಮಾಡಿ, ಅಲ್ಲಿ ನಕಲಿ ನೋಟುಗಳಿಗೆ ಅಂತಿಮ ರೂಪ ನೀಡುವ ವ್ಯವಸ್ಥೆ ಇತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದು, ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಟೇಬಲ್ , ಪೇಪರ್ ಬಂಡಲ್ , ರಾಸಾಯನಿಕ, ರಾಸಾಯನಿಕ ಬಟ್ಟೆ , ಗ್ಲಾಸ್ ಫಿಲ್ಮ್ ಸಿಕ್ಕಿದ್ದು, ಎಫ್ ಎಸ್ ಎಲ್ ತಂಡ ಭೇಟಿ ನೀಡಿ ಅನುಮಾನಸ್ಪದ ವಸ್ತುಗಳನ್ನು ಪರಿಶೀಲಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ , ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.

ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಕ್ಸ್‌..................

ನಕಲಿ ನೋಟು ಜಾಲ ಬೇಧಿಸಲು ವಿಶೇಷ ತಂಡ: ಎಸ್ಪಿ ರೋಹನ್ ಜಗದೀಶ್

ರಾಮನಗರ: ನಕಲಿ ನೋಟು ತಯಾರಿಕೆ ಹಿಂದೆ ದೊಡ್ಡ ಜಾಲವೇ ಇದ್ದು, ಅದನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಲದ ಹಿಂದೆ ಮತ್ತಷ್ಟು ಜನರು ಭಾಗಿಯಾಗಿರುವ ಸಾಧ್ಯತೆಗಳಿವೆ. ಇಲ್ಲಿ ತಯಾರಾದ ಪೇಪರ್ ಗಳನ್ನು ಎಲ್ಲಿ ಯಾರಿಗೆ ರವಾನಿಸುತ್ತಿದ್ದರು? ಜಾಲದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ ಎಂದರು.

ಬಂಧಿತ ಆರೋಪಿಗಳು ಖೋಟಾ ನೋಟು ಜಾಲದವರ ಸಂಪರ್ಕದಲ್ಲಿ ಇರುವುದು ಗೊತ್ತಾಗುತ್ತಿದೆ. ಇವರೆಲ್ಲರು ಹಳೆಯ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ತನಿಖೆಯೂ ನಡೆಯುತ್ತಿದೆ. ಈ ಖೋಟಾ ನೋಟುಗಳು ಬೇರೆ ಸ್ಥಳಕ್ಕೆ ಹೋಗಿ ಫಿನಿಶ್ ಆಗುತ್ತಿತ್ತು. ಅದು ಎಲ್ಲಿ, ಯಾರು ಮಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿ ಉಳಿದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ರೋಹನ್ ಜಗದೀಶ್ ತಿಳಿಸಿದರು.

31ಕೆಆರ್ ಎಂಎನ್ 6,7.ಜೆಪಿಜಿ

6.ಖೋಟಾ ನೋಟು ತಯಾರಿಸುತ್ತಿದ್ದ ನಿರ್ಮಾಣ ಹಂತದ ಮನೆ.

7.ಎಸ್ಪಿ ರೋಹನ್ ಜಗದೀಶ್ ಸುದ್ದಿಗಾರರೊಂದಿಗೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆಹಾನಿ ಸರ್ವೆ: ರೈತರಿಂದ ಹಣ ವಸೂಲಿ ಆರೋಪ
ಕೆಂಭಾವಿ: ರಾಯರ 355ನೇ ಆರಾಧನಾ ಮಹೋತ್ಸವ