ಬಾಲಕೃಷ್ಣಗೆ ತಾಕತ್ತಿದ್ದರೆ ಫೋನ್ ಟ್ಯಾಪಿಂಗ್ ದಾಖಲೆ ಬಿಡುಗಡೆ ಮಾಡಲಿ

KannadaprabhaNewsNetwork |  
Published : Sep 01, 2026, 01:15 AM IST
31ಕೆಆರ್ ಎಂಎನ್ 1.ಜೆಪಿಜಿಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಪೌರಾಡಳಿತ ಸಚಿವ ಬಾಲಕೃಷ್ಣ ಅವರಿಗೆ ತಾಕತ್ತಿದ್ದರೆ ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಪತ್ನಿಯ ಫೋನ್ ಟ್ಯಾಪಿಂಗ್ ಮಾಡಿಸಿರುವ ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು

ರಾಮನಗರ: ಪೌರಾಡಳಿತ ಸಚಿವ ಬಾಲಕೃಷ್ಣ ಅವರಿಗೆ ತಾಕತ್ತಿದ್ದರೆ ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಪತ್ನಿಯ ಫೋನ್ ಟ್ಯಾಪಿಂಗ್ ಮಾಡಿಸಿರುವ ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಬಾಲಕೃಷ್ಣ ಬಳಿ ಯಾವ ಫೋನ್ ಟ್ಯಾಪಿಂಗ್ ದಾಖಲೆ ಇದೆಯೋ ಅದನ್ನು ಬಿಡುಗಡೆ ಮಾಡಲಿ. ಇದು ರಾಜ್ಯದ ಜನರಿಗೂ ಗೊತ್ತಾಗಬೇಕು. ನಿಮ್ಮವರೇ ಮುಖ್ಯಮಂತ್ರಿಗಳಾಗಿದ್ದು, ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದರು.

ಕುಮಾರಸ್ವಾಮಿ ಮನೆಯಲ್ಲಿ ಅನ್ನ ತಿಂದ ನಿಯತ್ತಿಲ್ಲದ ವ್ಯಕ್ತಿಗಳು ಹೇಳಿದ್ದನ್ನು ಕೇಳಿಕೊಂಡು ಬಾಲಕೃಷ್ಣ ವರ್ಗಾವಣೆ ವಿಚಾರವಾಗಿ ಫೋನ್ ಟ್ಯಾಪಿಂಗ್ ಮಾಡಿಸಿದ್ದರೆಂದು ಆರೋಪಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಅವರೇ ಉತ್ತರ ಕೊಟ್ಟಿದ್ದಾರೆ. ಅವರ ಬಳಿ ಫೋನ್ ಟ್ಯಾಪಿಂಗ್ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬಾಲಕೃಷ್ಣ ಮತ್ತು ನಾನು ಅವರ ಜೊತೆಯಲ್ಲಿ ಕೆಲಸ ಮಾಡಿದವರು. ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ತಲೆ ಕೆಡಿಸಿಕೊಂಡು ಕುಮಾರಸ್ವಾಮಿ ಎಂದೂ ತಮ್ಮ ಸಹಿಯನ್ನು ಮಾರಿಕೊಂಡವರಲ್ಲ. ನಿಮ್ಮ ಹಾಗೆ ಸಹಿ ಮಾಡುವುದಕ್ಕೂ ಮುನ್ನ ಅಣ್ಣನನ್ನು ನೋಡು, ತಮ್ಮನನ್ನು ನೋಡು ಆಮೇಲೆ ಸಹಿ ಮಾಡುತ್ತೇನೆಂದು ಸಹಿ ಮಾರಾಟಕ್ಕೆ ಇಟ್ಟಿರಲಿಲ್ಲ ಎಂದು ಟೀಕಿಸಿದರು.

ಜೆಡಿಎಸ್‌ನಲ್ಲಿದ್ದಾಗ ವಸೂಲಿ ರಾಜ:

1994ರಲ್ಲಿ ತಂದೆಯ ಸಾವಿನ ಸಿಂಪತಿ ಮೇಲೆ ಬಾಲಕೃಷ್ಣ ಶಾಸಕನಾದ. ಕ್ಷೇತ್ರದ ಮುಖಂಡರು ಮತ್ತು ಜನರು ಚಂದಾ ಎತ್ತಿ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಶಾಸಕರನ್ನಾಗಿ ಮಾಡಿದರೆ ಬಿಜೆಪಿಗೆ ಟೋಪಿ ಹಾಕಿ ಜೆಡಿಎಸ್ ಸೇರಿದ. 1994ರಿಂದ 2017ರವರೆಗೆ ಜೆಡಿಎಸ್ ಭಿಕ್ಷೆಯಲ್ಲಿ ಮೂರು ಬಾರಿ ಶಾಸಕನಾದ. ಜೆಡಿಎಸ್ ಪಕ್ಷದಲ್ಲಿ ಇದ್ದಷ್ಟು ದಿನವೂ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಹೇಳಿಕೊಂಡು ಲೂಟಿ ಮಾಡಿದ. ತುಮಕೂರು ಜಿಪಂ ಅಧ್ಯಕ್ಷರು ಹಾಗೂ ಉಪಮೇಯರ್ ಸ್ಥಾನಗಳನ್ನು ತಲಾ 50 ಲಕ್ಷ ರು. ಪಡೆದು ಪಕ್ಷದ ಅಭ್ಯರ್ಥಿಗಳನ್ನೇ ಬದಲಾಯಿಸಿದ್ದ ವಸೂಲಿ ರಾಜ. ಕೇವಲ 10 ಕೋಟಿಗೆ ಕಾಂಗ್ರೆಸ್ ಪಕ್ಷಕ್ಕೆ ಮಾರಾಟವಾದ ವ್ಯಕ್ತಿ. ಬಾಲಕೃಷ್ಣನದು ಉಂಡ ಮನೆಗೆ ದ್ರೋಹ ಬಗೆಯುವ ಜಾಯಮಾನ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಬಿಡದಿಯಲ್ಲಿ ಕುಮಾರಸ್ವಾಮಿ ದಲಿತರ ಜಮೀನು ಕಬಳಿಸಿದ್ದಾರೆಂದು ಹೇಳುತ್ತಿದ್ದಾನೆ. ಹುಲಿಕಟ್ಟೆಯಲ್ಲಿ ನಿನ್ನ ತಾತನ ಆಸ್ತಿ ಎಷ್ಟಿದೆ ಅಂತ ಪಹಣಿ ತೋರಿಸು ನೋಡೋಣ. ಹುಲಿಕಟ್ಟೆಯಲ್ಲಿ ಅರಣ್ಯ ಜಾಗ ಕಬಳಿಸಿರುವ ನಿನಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಎ,ಮಂಜುನಾಥ್‌, ಲೋಕೋಪಯೋಗಿ ಇಲಾಖೆಯ 600 ಕೋಟಿ ರುಪಾಯಿ ಹಗರಣದಲ್ಲಿ ಗುತ್ತಿಗೆದಾರರನ್ನು ಬಲಿ ಪಶು ಮಾಡಲಾಯಿತು. ಎಂಜಿನಿಯರ್‌ಗಳು ಆತ್ಮಹತ್ಯೆ ಮಾಡಿಕೊಂಡರು, ತಪ್ಪಿತಸ್ಥರು ಜೈಲಿಗೆ ಹೋದರು, ಆಸ್ತಿ ಮುಟ್ಟುಗೋಲಾಯಿತು. ಈಗಿನ ಮುಖ್ಯಮಂತ್ರಿಗಳ ಸೋದರ ಸಂಬಂಧಿ ಎಕ್ಸಿಕ್ಯುಟಿವ್ ಎಂಜಿನಿಯರ್ ಗಂಗಾಧರ್ ಪರಿಸ್ಥಿತಿ ಏನಾಗಿದೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

ಈ ಹಗರಣ ಕುರಿತು 2008ರಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿದ್ದು, ಹೌಸ್ ಕಮಿಟಿ ಕೂಡ ರಚನೆಯಾಯಿತು. 600 ಕೋಟಿ ರು.ಗಳಲ್ಲಿ ನೀನು ಮತ್ತು ನಿನ್ನ ಕುಟುಂಬ ಹಣ ತಿಂದಿಲ್ಲವೆಂದು ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ಕುಮಾರಸ್ವಾಮಿ ಆರ್‌ಎಸ್‌ಎಸ್‌ನ ಟೀಕಿಸಿದ್ದರೆಂದು ಬಾಲಕೃಷ್ಣ ಹೇಳುತ್ತಾರೆ. ನೀನು ಜೆಡಿಎಸ್‌ನಲ್ಲಿದ್ದಾಗ ಕಾಂಗ್ರೆಸ್ ನಾಯಕರನ್ನು ಕೆಟ್ಟ ಶಬ್ದಗಳಿಂದ ಟೀಕೆ ಮಾಡಿರಲಿಲ್ವಾ. ಈಗ ನೀನು ಅವರೊಂದಿಗೆ ಸೇರಿಕೊಂಡು ಏನಾಗಿದ್ದೀಯಾ. ನೀನು ರೌಡಿಶೀಟರ್‌ಗಳನ್ನು ಜೊತೆಯಲ್ಲಿಟ್ಟುಕೊಂಡು ಬೆದರಿಸಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವ ಗಿರಾಕಿ ಎಂದು ಮಂಜುನಾಥ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ವಿಪಕ್ಷ ನಾಯಕ ಮಂಜುನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ರಾಮನಗರ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಹಾರೋಹಳ್ಳಿ ತಾಲೂಕು ಅಧ್ಯಕ್ಷ ರಾಮ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಶೋಭಾ, ಸರಸ್ವತಿ, ಪೂರ್ಣಿಮಾ, ಜಯಮ್ಮ ಇತರರಿದ್ದರು.

ಬಾಕ್ಸ್‌...........

ಕನಕಪುರದವರು ಕಿರೀಟ ಕೊಡುತ್ತಾರೆಂಬ ಭ್ರಮೆಯಿಂದ ಹೊರಗೆ ಬಾ: ಎ.ಮಂಜುನಾಥ್‌ ಎಚ್ಚರಿಕೆ

ರಾಮನಗರ: ಮಂತ್ರಿ ಸ್ಥಾನಕ್ಕೆ ಗೌರವ ಕೊಡುತ್ತೇವೆ. ನೀನು ಆ ಮಂತ್ರಿ ಸ್ಥಾನದ ಗೌರವ ಕಾಪಾಡು. ಇಲ್ಲ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಕುಟುಂಬದ ವಿರುದ್ಧ ಉಡಾಫೆಯಾಗಿಯೇ ಮಾತನಾಡುತ್ತೇನೆ ಎನ್ನುವುದಾದರೆ ಪ್ರದೀಪ್ ಈಶ್ವರ್‌ಗೆ ಆದ ಗತಿ ನಿನಗೂ ಆಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರ ಪಕ್ಷ. ಕಾಂಗ್ರೆಸ್ ರೀತಿ ಬೆರಳಣಿಕೆ ಇರುವಷ್ಟು ಮುಖಂಡರ ಪಕ್ಷವಲ್ಲ. ಇನ್ನು ಮುಂದೆ ಏನಾದರು ನಾಲಿಗೆ ಹರಿಬಿಟ್ಟರೆ ಜೆಡಿಎಸ್ ಕಾರ್ಯಕರ್ತರೆ ಉತ್ತರ ಕೊಡುತ್ತಾರೆ. ನಿನ್ನ ನಾಲಿಗೆ, ಅಧಿಕಾರಕ್ಕೆಲ್ಲ ಹೆದರುವುದಿಲ್ಲ ಎಂದರು.

ಮಂತ್ರಿ ಆಗಿರುವುದೇ ದೇವೇಗೌಡ ಮತ್ತು ಕುಮಾರಸ್ವಾಮಿ ಕುಟುಂಬದವರನ್ನು ಬಯ್ಯಲು, ಆ ರೀತಿ ಮಾಡಿದರೆ ಕನಕಪುರದವರು ಕಿರೀಟ ಕೊಡುತ್ತಾರೆಂದು ಭಾವಿಸಿದ್ದರೆ ಅದು ಮೂರ್ಖತನ. ಆ ಭ್ರಮೆಯಿಂದ ಹೊರಗೆ ಬರದಿದ್ದರೆ ಕಾರ್ಯಕರ್ತರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬಾಲಕೃಷ್ಣರಿಗೆ ಮಂಜುನಾಥ್ ಎಚ್ಚರಿಸಿದರು.

31ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆಹಾನಿ ಸರ್ವೆ: ರೈತರಿಂದ ಹಣ ವಸೂಲಿ ಆರೋಪ
ಕೆಂಭಾವಿ: ರಾಯರ 355ನೇ ಆರಾಧನಾ ಮಹೋತ್ಸವ