ನಕಲಿ ಜಿಎಸ್‌ಟಿ ಬಿಲ್‌ ದಂಧೆ ಅವ್ಯಾಹತ!

KannadaprabhaNewsNetwork |  
Published : Mar 26, 2024, 01:53 AM ISTUpdated : Mar 26, 2024, 12:39 PM IST
GST Collection in january 2024

ಸಾರಾಂಶ

ಬೆಂಗಳೂರಿನಲ್ಲಿ ಜಿಎಸ್‌ಟಿ ವಂಚನೆ ದಂಧೆ ದೊಡ್ಡ ಮಟ್ಟದಲ್ಲೇ ನಡೆಯುತ್ತಿದೆ. ಕನ್ನಡಪ್ರಭ ರಿಯಾಲಿಟಿ ಚೆಕ್‌ ಮಾಡಿದ್ದು, ಸರ್ಕಾರಕ್ಕೂ, ಗ್ರಾಹಕರಿಗೂ ವಂಚನೆ ಮಾಡಲಾಗುತ್ತಿದೆ.

ಶ್ರೀಕಾಂತ್‌ ಎನ್‌. ಗೌಡಸಂದ್ರ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರ ಕೇಂದ್ರ ವಾಣಿಜ್ಯ ಭಾಗಗಳಲ್ಲಿ ಅದರಲ್ಲೂ ಪ್ರಮುಖವಾಗಿ ಚಿಕ್ಕಪೇಟೆ, ಅವೆನ್ಯೂ ರಸ್ತೆ ಸುತ್ತಮುತ್ತಲಿನ ವ್ಯಾಪಾರಿ ಮಳಿಗೆಗಳಲ್ಲಿ ನಕಲಿ ಜಿಎಸ್‌ಟಿ ಬಿಲ್‌ ನೀಡುವ ದಂಧೆ ಹೆಚ್ಚಾಗಿದೆ. 

ಅಮಾಯಕ ಗ್ರಾಹಕರಿಂದ ಜಿಎಸ್‌ಟಿ ಇನ್‌ವಾಯ್ಸ್‌ ನೀಡದೆ ಶೇಕಡ 5ರಿಂದ 18ರಷ್ಟು ಹಣ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದ್ದು, ಸರ್ಕಾರ ಹಾಗೂ ಗ್ರಾಹಕರಿಬ್ಬರನ್ನೂ ವಂಚಿಸುತ್ತಿದ್ದಾರೆ.

ಜಿಎಸ್‌ಟಿ ವಂಚನೆ ಪತ್ತೆಗೆ ಇತ್ತೀಚೆಗಷ್ಟೇ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಸಿ.ಶಿಖಾ ನೇತೃತ್ವದಲ್ಲಿ ಚಿಕ್ಕಪೇಟೆ ಹಾಗೂ ಸುತ್ತಮುತ್ತಲಿನ ವ್ಯಾಪಾರ ಸ್ಥಳಗಳ 100ಕ್ಕೂ ಹೆಚ್ಚು ಮಳಿಗೆಗಳ ಮೇಲೆ ಸರಣಿ ದಾಳಿ ನಡೆಸಲಾಗಿತ್ತು.

ಈ ವೇಳೆ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ನೀಡದೆ ತೆರಿಗೆ ವಂಚನೆ ಮಾಡುತ್ತಿರುವುದು. ಜಿಎಸ್ಟಿ ನೋಂದಣಿ ಪ್ರಮಾಣಪತ್ರ ಹಾಗೂ ಸಂಖ್ಯೆ ಪ್ರದರ್ಶಿಸದಿರುವುದು. 

ಜಿಎಸ್‌ಟಿ ಇನ್‌ವಾಯ್ಸ್‌ ನೀಡದೆ ಗ್ರಾಹಕರಿಂದ ಅನಧಿಕೃತವಾಗಿ ಜಿಎಸ್‌ಟಿ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವುದು ಬಹಿರಂಗವಾಗಿ ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಇನ್ನು ಮುಂದೆ ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಶಿಖಾ ಅವರು ಎಚ್ಚರಿಕೆ ನೀಡಿದ್ದರು.

ಇದರ ಹೊರತಾಗಿಯೂ ಅವ್ಯವಾಹತವಾಗಿ ನಕಲಿ ಜಿಎಸ್‌ಟಿ ಸಂಗ್ರಹ ದಂಧೆ ಚಿಕ್ಕಪೇಟೆ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮುಂದುವರೆದಿದೆ. ನಕಲಿ ಜಿಸ್‌ಟಿ ಬಿಲ್‌ ಹಾಗೂ ಕ್ಯಾಶ್‌ ಬಿಲ್‌ಗೂ ಜಿಎಸ್‌ಟಿ ಹೆಸರಿನಲ್ಲಿ ಬೆದರಿಕೆಯೊಡ್ಡಿ ಹಣ ಸಂಗ್ರಹ ಮಾಡಲಾಗುತ್ತಿದೆ. 

ಬಹುತೇಕ ಬಿಲ್‌ಗಳ ಮೇಲೆ ಜಿಎಸ್‌ಟಿ ಸಂಖ್ಯೆ ಕೂಡ ಇರುವುದಿಲ್ಲ. ಮತ್ತೆ ಕೆಲವು ಪ್ರಕರಣಗಳಲ್ಲಿ ಕ್ಯಾಶ್‌ ಬಿಲ್‌ (ಕೈಯಲ್ಲಿ ಬರೆಯುವ) ಮೇಲೆಯೇ ಜಿಎಸ್‌ಟಿ ಸಂಖ್ಯೆ ನಮೂದಿಸಲಾಗಿರುತ್ತದೆ. 

ಆದರೆ ಜಿಎಸ್‌ಟಿ ಇನ್‌ವಾಯ್ಸ್‌ ಅಲ್ಲದ ಕಾರಣ ಜಿಎಸ್ಟಿಯನ್ನು ಅಧಿಕೃತವಾಗಿ ಸಂಗ್ರಹಿಸಲಾಗುತ್ತಿದೆಯೇ ಅಥವಾ ವಂಚನೆ ಮಾಡಲಾಗುತ್ತಿದೆಯೇ ಎಂಬುದು ಗ್ರಾಹಕರಿಗೆ ತಿಳಿಯುವುದಿಲ್ಲ.

ಒಂದೊಮ್ಮೆ ಬಿಲ್‌ನ ವಸ್ತುನಿಷ್ಠತೆ ಪ್ರಶ್ನಿಸಿದರೆ, ‘ಬೇಕಿದ್ದರೆ ಜಿಎಸ್‌ಟಿ ರಿಟರ್ನ್ ಫೈಲ್‌ ಮಾಡಿ. ನಿಮಗೆ ಹಣ ಬರಲಿಲ್ಲ’ ಎಂಬ ಉತ್ತರ ವ್ಯಾಪಾರಿಗಳಿಂದ ಬರುತ್ತದೆ. 

ಗ್ರಾಹಕರು ಶೇ.90ರಷ್ಟು ಪ್ರಕರಣಗಳಲ್ಲಿ ಜಿಎಸ್ಟಿ ರಿಟರ್ನ್‌ ಸಲ್ಲಿಕೆ ಮಾಡಲು ಬರುವುದಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ಹಾಗೂ ವ್ಯಾಪಾರಿಗಳನ್ನು ಇಬ್ಬರನ್ನೂ ವಂಚಿಸುತ್ತಿದ್ದಾರೆ.ಕನ್ನಡಪ್ರಭ ರಿಯಾಲಿಟಿ ಚೆಕ್‌

ಈ ಬಗ್ಗೆ ‘ಕನ್ನಡಪ್ರಭ’ ಪರಿಶೀಲನೆ ನಡೆಸಿತು. ಈ ವೇಳೆ ಬಟ್ಟೆ ಅಂಗಡಿ, ವೆಡ್ಡಿಂಗ್‌ ಕಾರ್ಡ್‌ ಸೇರಿ ಭೇಟಿ ನೀಡಿದ ಆರು ಅಂಗಡಿಗಳಲ್ಲಿ ಅಷ್ಟರಲ್ಲೂ ಕೈಯಲ್ಲಿ ಬರೆಯುವ ಕ್ಯಾಶ್‌ ಬಿಲ್‌ ನೀಡಿ ಶೇ.12ರಿಂದ 18ರಷ್ಟು ಜಿಎಸ್‌ಟಿ ಪಾವತಿಗೆ ಒತ್ತಾಯಿಸಲಾಗುತ್ತಿದೆ. 

ಈ ಪೈಕಿ ಎರಡು ಬಿಲ್‌ಗಳಲ್ಲಿ ಜಿಎಸ್‌ಟಿ ಸಂಖ್ಯೆ ಮಾತ್ರ ನಮೂದಿಸಿದ್ದು, ಉಳಿದೆಲ್ಲವೂ ಕೈ ಬರವಣಿಗೆಯಲ್ಲೇ ಬಿಲ್‌ ನೀಡಲಾಗುತ್ತಿದೆ. ಕನಿಷ್ಠ ಜಿಎಸ್‌ಟಿ ನಂಬರ್ ಕೂಡ ನಮೂದಾಗಿಲ್ಲ. ಆದರೆ ಜಿಎಸ್‌ಟಿ ಹೆಸರಿನಲ್ಲಿ ಹೆಚ್ಚುವರಿ ಹಣಕ್ಕೆ ಮಾತ್ರ ಬೇಡಿಕೆ ಇಡಲಾಗುತ್ತಿತ್ತು.

ಬಳಿಕ ‘ಇದು ಅಧಿಕೃತ ಜಿಎಸ್‌ಟಿ ಇನ್‌ವಾಯ್ಸ್‌ ಹೌದೇ?’ ಎಂದು ಪ್ರಶ್ನಿಸಿದರೆ ‘ಕ್ಯಾಶ್‌ ನೀಡಿದರೆ ಅರ್ಧ ಜಿಎಸ್‌ಟಿ ತೆಗೆದುಕೊಳ್ಳುತ್ತೇವೆ’ ಎಂಬ ಆಫರ್‌ ಬೇರೆ.

ಈ ಬಿಲ್‌ ಅಧಿಕೃತವೇ ಎಂಬುದನ್ನು ಪರಿಶೀಲಿಸಲು ಒಂದು ಬಿಲ್ಲನ್ನು ರಾಜ್ಯ ವಾಣಿಜ್ಯ ತೆರಿಗೆಗಳ ಆಯುಕ್ತರಾದ ಸಿ.ಶಿಖಾ ಅವರಿಗೆ ಕಳುಹಿಸಲಾಯಿತು. ಸಿ.ಶಿಖಾ ಅವರು ಪರಿಶೀಲಿಸಿ, ‘ಬಿಲ್‌ನಲ್ಲಿ ಜಿಎಸ್‌ಟಿ ಸಂಖ್ಯೆಯೇ ಇಲ್ಲ. 

ಹೀಗಾಗಿ ಇದರಲ್ಲಿ ಜಿಎಸ್‌ಟಿ ಡಿಡಕ್ಟ್‌ ಮಾಡಲು ಬರುವುದಿಲ್ಲ. ಈ ಬಗ್ಗೆ ಪರಿಶೀಲನೆಗೆ ಅಧಿಕಾರಿಗಳಿಗೆ ಆದೇಶಿಸಲಾಗುವುದು’ ಎಂದು ಭರವಸೆ ನೀಡಿದರು.ಜಿಎಸ್ಟಿ ಬಿಲ್‌ ನೈಜತೆ ಪತ್ತೆ ಹೇಗೆ?

ಯಾವುದೇ ಬಿಲ್‌ನಲ್ಲಿ ಅಧಿಕೃತ ಜಿಎಸ್‌ಟಿ-ಐಎನ್‌ ಸಂಖ್ಯೆ ಇಲ್ಲದೆಯೇ ಜಿಎಸ್‌ಟಿ ಹೆಸರಿನಲ್ಲಿ ಹೆಚ್ಚುವರಿ ಹಣ ಸಂಗ್ರಹಿಸಲಾಗುತ್ತಿದೆ. 

ಜತೆಗೆ ಕೈ ಬರವಣಿಗೆಯ ಕ್ಯಾಶ್‌ ಬಿಲ್‌ನಲ್ಲಿ ನಕಲಿ ಜಿಎಸ್‌ಟಿ ಸಂಖ್ಯೆ ಮುದ್ರಿಸಿ ಜಿಎಸ್‌ಟಿ ಹೆಸರಿನಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಜಿಎಸ್‌ಟಿ ಸಂಖ್ಯೆ ನಮೂದಿಸಿದ್ದರೂ ಅನಧಿಕೃತ ಕ್ಯಾಶ್‌ ಬಿಲ್‌ನಲ್ಲಿ ನಮೂದಿಸಿದ್ದರೂ ಅದು ನಾಮ್‌ ಕೆ ವಾಸ್ತೆ.

ಇನ್ನು https://www.gst.gov.in/ ಗೆ ಭೇಟಿ ನೀಡಿ. GST ಇನ್‌ವಾಯ್ಸ್‌ನಲ್ಲಿ ನಮೂದಿಸಲಾದ GSTIN ಸಂಖ್ಯೆಯನ್ನು ಪರಿಶೀಲಿಸಲು ‘ಸರ್ಚ್ ಟ್ಯಾಕ್ಸ್‌ಪೇಯರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಧಿಕೃತ GSTIN ಸಂದರ್ಭದಲ್ಲಿ ಪೂರೈಕೆದಾರರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ತೋರಿಸಲಾಗುತ್ತದೆ.ಜಿಎಸ್‌ಟಿ ವಂಚನೆಯ

ದೂರು ಹೀಗೆ ದಾಖಲಿಸಿ: ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳ ಬಗ್ಗೆ ದೂರು ನೀಡಲು ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯ ಟೋಲ್‌ ಫ್ರೀ ಸಂಖ್ಯೆ 1800 425 6300 ಗೆ ಕರೆ ಮಾಡಬಹುದು. ಅಥವಾ cbecmitra.heldesk@icegate.gov.in ಗೆ ಇಮೇಲ್‌ ಮಾಡಬಹುದು.

ನಕಲಿ ಜಿಎಸ್‌ಟಿ ಬಿಲ್‌ ಹಾವಳಿ ಹಾಗೂ ಜಿಎಸ್‌ಟಿ ವಂಚನೆ ಜಾಲ ಪತ್ತೆಗೆ ಸರಣಿ ದಾಳಿಗಳನ್ನು ಸಂಘಟಿಸಲಾಗುತ್ತಿದೆ. ಬಿಲ್‌ನಲ್ಲಿ ಜಿಎಸ್‌ಟಿಐಎನ್‌ ಸಂಖ್ಯೆ ಇಲ್ಲದಿದ್ದರೆ ಜಿಎಸ್‌ಟಿ ಡಿಡಕ್ಟ್‌ ಆಗುವುದಿಲ್ಲ. 

ಹೀಗಾಗಿ ಗ್ರಾಹಕರು ಪಾವತಿಸುವ ಜಿಎಸ್‌ಟಿ ಹಣ ಸರ್ಕಾರಕ್ಕೆ ತಲುಪುವುದಿಲ್ಲ. ಇಂತಹವರ ಮೇಲೆ ಇಲಾಖೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತದೆ. -ಸಿ.ಶಿಖಾ, ಆಯುಕ್ತೆ, ವಾಣಿಜ್ಯ ತೆರಿಗೆಗಳ ಇಲಾಖೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ