ಪಾವಗಡದಲ್ಲಿ ನಕಲಿಗಳಿಗೆ ಬೇಕಿದೆ ಚಿಕಿತ್ಸೆ

KannadaprabhaNewsNetwork |  
Published : May 02, 2026, 01:30 AM IST
1ಕೆಎಂಎನ್ ಡಿ20 | Kannada Prabha

ಸಾರಾಂಶ

ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ಸುಮಾರು 152 ನಕಲಿ ವೈದ್ಯರನ್ನು ಪತ್ತೆಹಚ್ಚಿದ್ದರೂ ಸಹ, ಅವರ ವಿರುದ್ಧ ಕಠಿಣವಾದ ಎಫ್‌.ಐ.ಆರ್ ದಾಖಲಾಗದಿರುವ ಕಾರಣ ಈ ದಂಧೆ ಅವ್ಯಾಹತವಾಗಿ ಮುಂದುವರಿಯಲು ಸಾಧ್ಯವಾಗಿದೆ

ಜೆ. ನಾಗೇಂದ್ರ ​ಕನ್ನಡಪ್ರಭ ವಾರ್ತೆ ಪಾವಗಡ

ಗಡಿ ನಾಡು ಪಾವಗಡದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಸರ್ಕಾರದ ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಜನ ಸಾಮಾನ್ಯರ ಜೀವಗಳ ಜೊತೆಗೆ ಆಟವಾಡಲಾಗುತ್ತಿದೆ.

ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ಸುಮಾರು 152 ನಕಲಿ ವೈದ್ಯರನ್ನು ಪತ್ತೆಹಚ್ಚಿದ್ದರೂ ಸಹ, ಅವರ ವಿರುದ್ಧ ಕಠಿಣವಾದ ಎಫ್‌.ಐ.ಆರ್ ದಾಖಲಾಗದಿರುವ ಕಾರಣ ಈ ದಂಧೆ ಅವ್ಯಾಹತವಾಗಿ ಮುಂದುವರಿಯಲು ಸಾಧ್ಯವಾಗಿದೆ

ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಗ್ರಾಮೀಣ ಮತ್ತು ಗಡಿ ಭಾಗಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರಿದ್ದು, ​2024-25: 98 ನಕಲಿ ವೈದ್ಯರ ಪತ್ತೆಯಾಗಿದ್ದರು. ​2025-26ರಲ್ಲಿ ಇದುವರೆಗೆ ಪಾವಗಡ ತಾಲೂಕಿನಲ್ಲಿ ಕ್ಲಿನಿಕ್‌ ತೆರೆದು 54 ನಕಲಿ ವೈದ್ಯರನ್ನು ಗುರುತಿಸಿದ್ದು ಈ ಪಟ್ಟಿ ಜಿಲ್ಲೆಗೆ ಮೊದಲ ಸ್ಥಾನದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 75 ನಕಲಿ ವೈದ್ಯರು ಇಲ್ಲಿ ಪತ್ತೆಯಾಗಿದ್ದರು. ಆದರೆ ಇರುವರೆವಿಗೂ ಇವರಿಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಕ್ರಮ ಜರುಗಿಸದೇ ಇರುವುದು ವಿಪರ್ಯಾಸ.ಕಾನೂನಿನ ಭಯವಿಲ್ಲದ ‘ನಕಲಿ’ ಲೋಕ

​ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗ ಈ ನಕಲಿ ವೈದ್ಯರು ಅಲ್ಲಿಂದ ಕಾಲ್ಕಿಳ್ಳುತ್ತಾರೆ. ಕ್ಲಿನಿಕ್ ಮುಚ್ಚುತ್ತಾರೆ. ಆದರೆ, ಇಲಾಖೆ ಕೇವಲ ದಂಡ ವಿಧಿಸಿ ಸುಮ್ಮನಾಗುತ್ತದೆ. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸದೆ ಇರವುದರಿಂದಾಗಿ ಅವರು ಅಲ್ಲಿಯೇ ಪಕ್ಕದಲ್ಲಿಯೇ ಹೊಸದಾಗಿ ದಂಧೆ ಆರಂಭಿಸುತ್ತಿದ್ದಾರೆ.​ ಯಾವ ರೋಗಕ್ಕೆ ಯಾವ ಔಷಧಿ ನೀಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದವರು ಅಮಾಯಕ ಜನರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ​ಸರ್ಕಾರಿ ಆಸ್ಪತ್ರೆಗಳ ವೈಫಲ್ಯ

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆ ಇರುವ ಪರಿಣಾಮ ಜನರನ್ನು ಅನಿವಾರ್ಯವಾಗಿ ಇಂತಹ ಕ್ಲಿನಿಕ್‌ಗಳತ್ತ ತಳ್ಳುತ್ತಿದೆ. ಕೆಲವು ಕಡೆಗಳಲ್ಲಿ ನಕಲಿ ವೈದ್ಯರು ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಬೆಂಬಲದೊಂದಿಗೆ ಕ್ಲಿನಿಕ್ ನಡೆಸುತ್ತಿರುವುದು ತನಿಖೆಗೆ ಅಡ್ಡಿಯಾಗುತ್ತಿದೆ. ಪಾವಗಡದಂತಹ ಗಡಿ ಭಾಗಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲದೆ ಜನರು ಇವರ ಜಾಲಕ್ಕೆ ಬೀಳುತ್ತಿದ್ದಾರೆ.

-----------------------

ಕೋಟ್‌...

ನಕಲಿ ವೈದ್ಯರನ್ನು ಪತ್ತೆಹಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಸರ್ಕಾರ ಇದನ್ನು ಸಹಿಸುವುದಿಲ್ಲ. ಜನರು ಸಹ ವೈದ್ಯರ ಬಳಿ ಹೋದಾಗ ಇದನ್ನು ಗಮನಿಸಬೇಕು. ಇಲಾಖೆ ಈಗಾಗಲೇ 150ಕ್ಕೂ ನಕಲಿ ವೈದ್ಯರನ್ನು ಗುರುತಿಸಿ ಅವರಿಗೆ ದಂಡ ವಿಧಿಸಿದೆ. ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

- ಡಾ. ಬಿ.ಎಂ. ಚಂದ್ರಶೇಖರ್, ​ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಕೋಟ್‌ ಪಾವಗಡ ತಾಲೂಕಿನಲ್ಲಿ ಸರ್ಕಾರಿ ಪರವಾನಿಗೆ ಇಲ್ಲದ ಕ್ಲಿನಿಕ್‌ ತೆರೆದು ಜನಸಾಮಾನ್ಯರಿಗೆ ಚಿಕಿತ್ಸೆ ನೀಡುವ ನಕಲಿ ವೈದ್ಯರ ಸಂಖ್ಯೆ ಹೆಮ್ಮರವಾಗಿ ಬೆಳೆದಿದೆ. ಕೇವಲ ದಾಳಿ ಮತ್ತು ದಂಡದಿಂದ ಈ ಸಮಸ್ಯೆ ಬಗೆಹರಿಯದು. ನಕಲಿ ವೈದ್ಯರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಮತ್ತು ಜೈಲು ಶಿಕ್ಷೆ ಮತ್ತು ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಯಾದಾಗ ಮಾತ್ರ ಸಾಮಾನ್ಯ ಜನರ ಜೀವ ಉಳಿಸಲು ಸಾಧ್ಯ

- ಎ.ಹರಿರಾಮ್‌, ಭಾರತೀಯ ಪರಿವರ್ತನ ಸಂಘದ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ: ಕೃಷ್ಣಬೈರೇಗೌಡ
ಡಿಕೆಶಿ ಸಿಎಂ ಆಗಬೇಕೆಂದು ಅವಿಮುಕ್ತೇಶ್ವರನಿಗೆ ಹರಕೆ