ಸಂಸ್ಕೃತಿ ಬೆಳೆದರೆ ಮಾತ್ರ ದೇಶಾಭಿವೃದ್ಧಿ: ಶಾಂತಾರಾಮ ಸಿದ್ದಿ

KannadaprabhaNewsNetwork |  
Published : Nov 07, 2024, 11:45 PM ISTUpdated : Nov 07, 2024, 11:46 PM IST
ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜಕ್ಕೆ ಆಧಾರಸ್ತಂಭವಾದ ಸಂಸ್ಕೃತಿ ಬೆಳೆದರೆ ಮಾತ್ರ ದೇಶಾಭಿವೃದ್ಧಿ ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.

ಯಲ್ಲಾಪುರ: ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತಿಳಿಸಿದರು.ತಾಲೂಕಿನ ತುಂಬೇಬೀಡು ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ನ. ೬ರಂದು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಸಮೂಹ ಸಂಪನ್ಮೂಲ ಕೇಂದ್ರ ಮಂಚೀಕೇರಿ ಹಾಗೂ ಸ.ಹಿ.ಪ್ರಾ. ಶಾಲೆ ತುಂಬೇಬೀಡು ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಂಚೀಕೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ, ಮಾತನಾಡಿದರು.ಹಿಂದೆ ಯುವಕರ ಪ್ರತಿಭಾ ಅನಾವರಣಕ್ಕೆ ಯುವಜನ ಮೇಳಗಳು ಸಂಘಟನೆಗೊಳ್ಳುತ್ತಿದ್ದವು. ಇಂದು ವಿದ್ಯಾರ್ಥಿಗಳ ಕೌಶಲ್ಯವನ್ನು ಹೊರಜಗತ್ತಿಗೆ ತೋರಿ, ಅವರ ಸರ್ವಾಂಗೀಣ ವಿಕಾಸಕ್ಕೆ ಪೂರಕವೆನಿಸುವ ಇಂತಹ ಕಾರ್ಯಕ್ರಮಗಳು ರಾಷ್ಟ್ರಭಕ್ತಿಯ ಜಾಗೃತಿಗೂ ಕಾರಣವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಬಗೆಯ ಕೀಳರಿಮೆ ತೋರದೇ, ಅವರನ್ನು ಪ್ರೋತ್ಸಾಹಿಸಬೇಕು ಎಂದ ಅವರು, ಸಮಾಜಕ್ಕೆ ಆಧಾರಸ್ತಂಭವಾದ ಸಂಸ್ಕೃತಿ ಬೆಳೆದರೆ ಮಾತ್ರ ದೇಶಾಭಿವೃದ್ಧಿ ಸಾಧ್ಯ ಎಂದರು.ಕಂಪ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಕಾರಣರಾಗುವ ಶಿಕ್ಷಕರು ಎಂದಿಗೂ ರಾಜಕಾರಣ ಮಾಡುವಂತಾಗಬಾರದು. ಅಪರೂಪಕ್ಕೆ ಅಲ್ಲಿಲ್ಲಿ ಕಂಡುಬರುವ ಇಂತಹ ಶಿಕ್ಷಕರನ್ನು ಇಲಾಖೆ ಗುರುತಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ತಾ.ದೈ.ಶಿ. ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ, ಬಿಆರ್‌ಪಿ ಪ್ರಶಾಂತ ಪಟಗಾರ, ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ ಬೂರ್ಮನೆ ಮಾತನಾಡಿದರು. ಜಿಪಂ ಮಾಜಿ ಸದಸ್ಯೆ ರೂಪಾ ಬೂರ್ಮನೆ, ಕಂಪ್ಲಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಭಟ್ಟ, ಹಾಸಣಗಿ ಗ್ರಾಪಂ ಉಪಾಧ್ಯಕ್ಷ ಪುರಂದರ ನಾಯ್ಕ, ಗ್ರಾಪಂ ಸದಸ್ಯ ರಘುಪತಿ ಹೆಗಡೆ, ಬಿಆರ್‌ಸಿ ಎಸ್.ವಿ. ಜಿಗಳೂರು, ಸಿಆರ್‌ಪಿಗಳಾದ ವಿಷ್ಣು ಭಟ್ಟ, ದೀಪಾ ಶೇಟ್, ಪ್ರಮುಖರಾದ ಮೋಹನ ಭಟ್ಟ, ಎಂ.ಕೆ. ವಾಳೇಕರ, ಗಣೇಶ ರೋಖಡೆ, ಪ್ರಶಾಂತ ಜಿ.ಎನ್. ಮತ್ತಿತರರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿನಿಯರ ಸ್ವಾಗತಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಿಆರ್‌ಪಿ ಕೆ.ಆರ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ಸುಹಾಸ ಭಟ್ಟ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಆಶಾ ಶೇಟ್ ವಂದಿಸಿದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!