ಕನ್ನಡಪ್ರಭ ವಾರ್ತೆ ಬೆಂಗಳೂರು
ಯಾವ ರಾಷ್ಟ್ರದಲ್ಲಿ ಸಾಂಸ್ಕೃತಿಕ ಜಗತ್ತು ಕ್ರಿಯಶೀಲವಾಗಿ ಶಕ್ತಿಯುತವಾಗಿ ಇರುವುದಿಲ್ಲವೋ ಅಲ್ಲಿ ಪ್ರಜಾಪ್ರಭುತ್ವ ಪತನ ಮುಖಿಯಾಗಿರುತ್ತದೆ. ಇವತ್ತು ಅದೇ ಪರಿಸ್ಥಿತಿ ನಮ್ಮ ದೇಶದಲ್ಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಗುರುವಾರ ರಂಗಚಂದಿರ-ಸಾಂಸ್ಕೃತಿಕ ಸಂಘಟನೆ ಸಿಜಿಕೆ ಅವರ 74ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಸಿಜಿಕೆ ಎಂಬ ಸೂಜಿಗಲ್ಲು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕವಿ, ಸಾಹಿತಿಗಳಿಗೆ ಯಾವುದೇ ನಿಯಂತ್ರಣಗಳಿಲ್ಲ. ಯಾವುದು ಸರಿ, ತಪ್ಪು ಎನ್ನುವುದನ್ನು ಹೇಳುವ ಶಕ್ತಿಯೂ ಇದೆ.ಆದರೆ ನಮ್ಮ ದೇಶದಲ್ಲಿ ಎಷ್ಟೋ ಜನ ಲೇಖಕರನ್ನು ತುರ್ತುಪರಿಸ್ಥಿತಿಯ ಕಾಲಕ್ಕಿಂತ ಹೆಚ್ಚಿಗೆ ವಿನಾ ಕಾರಣ ಜೈಲಿಗೆ ದೂಡಲಾಗಿದೆ. ಪ್ರಶ್ನಿಸುವ ಹಕ್ಕಿನ ನಿಯಂತ್ರಣದಿಂದ ದುಷ್ಟ ಶಕ್ತಿ ಮುಂದೆ ಬಂದಾಗ ಪ್ರಜಾಪ್ರಭುತ್ವದ ಅಳಿವಾಗುತ್ತದೆ ಎಂದರು.ದೇಶದಲ್ಲಿ ಯಾವುದೇ ಪಕ್ಷವು ಆಡಳಿತದಲ್ಲಿರಲಿ, ಸಾಂಸ್ಕೃತಿಕ ಜಗತ್ತು ತನ್ನ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಶಕ್ತಿಯನ್ನು ಕಳೆದುಕೊಳ್ಳಬಾರದು. ಅದು ಪ್ರಜಾಪ್ರಭುತ್ವದ ರಕ್ಷಕ ಶಕ್ತಿ. ದಿನನಿತ್ಯ ನಡೆಯುತ್ತಿರುವ ಮಹಿಳೆಯರು, ಮಕ್ಕಳ ಮೇಲಿನ ಅತ್ಯಾಚಾರಗಳು, ದಲಿತರ ಮೇಲಿನ ದೌರ್ಜನ್ಯಗಳೆಲ್ಲವನ್ನೂ ನೋಡಿ ದಿನ ಸಾಯುವವರಿಗೆ ಅಳುವುದ್ಯಾರು ಎನ್ನುವಂತೆ ಸಾಂಸ್ಕೃತಿಕ ಜಗತ್ತಿನೊಳಗಿನ ನಾವು ಮೌನವಾಗಿ ಜಡವಾಗಿದ್ದೇವೆ. ಈ ಜಡತೆ ಸಮಾಜಕ್ಕೆ ಒಳ್ಳೆಯದಲ್ಲ. ಸಾಂಸ್ಕೃತಿಕ ಲೋಕದ ಜಾಣ ಮೌನ ತುಂಬಾ ಅಪಾಯಕಾರಿ ಎಂದರು.
ಅಗತ್ಯವಿದ್ದಾಗ ಮಾತನಾಡದೆ, ಏನು ಮಾಡಬೇಕೋ ಅದನ್ನು ಮಾಡದೆ ಎಲ್ಲವೂ ಶಾಂತವಾಗಿದೆ ಎಂದು ನಾವು ಹೇಳುವಾಗ ದೊಡ್ಡ ಚಳವಳಿ, ಹೋರಾಟ, ಕ್ರಾಂತಿಯ ಬಗ್ಗೆ ಮಾತನಾಡುವುದು ಉಡಾಫೆಯಾಗುತ್ತದೆ. ಇಂತಹ ವೇದಿಕೆ ನಮ್ಮನ್ನು ಆತ್ಮವಿಮರ್ಶೆ ಕಡೆಗೆ ದೂಡಬೇಕು. ಇಲ್ಲದಿದ್ದರೆ ಆತ್ಮವಿಮರ್ಶೆಯನ್ನು ಸಾಯಿಸಿಕೊಂಡ ಮನುಷ್ಯ, ಆತ್ಮಹತ್ಯೆ ಮಾಡಿಕೊಳ್ಳುವಂತ ದುರಂತಕ್ಕೆ ಒಳಗಾಗುತ್ತಾನೆ ಎಂದು ಹೇಳಿದರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್.ಮುಕುಂದರಾಜ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ। ಎ.ಆರ್.ಗೋವಿಂದಸ್ವಾಮಿ, ಮಾವಳ್ಳಿ ಶಂಕರ್, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ರಂಗಚಂದಿರ ಕಾರ್ಯದರ್ಶಿ ಜಿಪಿಒ ಚಂದ್ರು ಉಪಸ್ಥಿತರಿದ್ದರು.