- ಶಾಸಕ ಡಿ. ರವಿಶಂಕರ್ ಅಭಿಮತ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ರೈತರು ಆರ್ಥಿಕವಾಗಿ ಅಭಿವೃದ್ಧಿಯಾದಾಗ ಮಾತ್ರ ದೇಶ ಸರ್ವಾಂಗೀಣವಾಗಿ ಮುಂದುವರಿಯಲು ಸಾಧ್ಯ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ತಾಲೂಕು ಕೃಷಿಕ ಸಮಾಜ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ, ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರ ಮತ್ತು ತಾಲೂಕು ಯುವ ರೈತ ವೇದಿಕೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಕೃಷ್ಣ ಮಂದಿರದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿಗೆ ಅಗತ್ಯವಾಗಿ ಬೇಕಿರುವ ನೀರು, ವಿದ್ಯುತ್, ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದ್ದು, ನಾನು ಸಹ ಸದಾ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ಸಾಲಿಗ್ರಾಮ ಮತ್ತು ಕೆ. ಆರ್. ನಗರ ಎರಡು ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆಯಾಗಿದ್ದು, ಈ ವ್ಯಾಪ್ತಿಯ ರೈತರಿಗೆ ಬರದಿಂದ ದೊರೆಯುವ ಎಲ್ಲ ಪರಿಹಾರವನ್ನು ಒದಗಿಸಲಾಗುತ್ತದೆ, ಈ ಸಂಬಂಧ ರೈತರು ಸಹ ಅಗತ್ಯ ದಾಖಲೆ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ರೈತರು ಏಕ ಬೆಳೆ ಬೆಳೆಯುವ ಪದ್ಧತಿಯನ್ನು ಕೈ ಬಿಟ್ಟು, ಹೆಚ್ಚು ಆದಾಯ ನೀಡುವ ಬಹು ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬರಾಗಬೇಕೆಂದು ಕರೆ ನೀಡಿದರು.
ಕೊರೋನಾ ಸಂದರ್ಭದಲ್ಲಿಯೂ ಎದೆಗುಂದದ ರೈತ ಸಮೂಹ ಕೃಷಿ ಚಟುವಟಿಕೆಯನ್ನು ಮಾಡಿ ದೇಶಕ್ಕೆ ಆಹಾರ ನೀಡುವುದರ ಮೂಲಕ ನಾವು ಬೇರೆಯವರ ಮುಂದೆ ಕೈಚಾಚದಂತೆ ನೋಡಿಕೊಂಡರೆಂದು ಅವರು ಶ್ಲಾಘಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಮಂಜುನಾಥ್ ಅಂಗಡಿ, ನಾಗನಹಳ್ಳಿ ಕೃಷಿ ವಿಸ್ತರಣಾ ಘಟಕದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎನ್. ಪುಷ್ಪಾ, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಾತಿಗ್ರಾಮ ದಿವಾಕರ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ಭಾರತಿ, ತಾಲೂಕು ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭದ ಸ್ವಾಮಿ, ಪ್ರಗತಿ ಪರ ರೈತರಾದ ಸಂಪತ್, ಎಂ.ಜೆ. ಕುಮಾರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ರಮೇಶ್, ಕಾಂಗ್ರೆಸ್ ಮುಖಂಡರಾದ ಹೆಬ್ಬಾಳು ವೇಣುಗೋಪಾಲ್, ಚಲುವರಾಜು ಇದ್ದರು.
ಕೋಟ್, ಬಾಕ್ಸ್....
--ರೈತರು ಸಾವಯವ ಕೃಷಿಯತ್ತ ಮುಖ ಮಾಡಿದರೆ ಉತ್ತಮ ಇಳುವರಿ- ಡಾ.ಆರ್.ಎನ್. ಪುಷ್ಪ
--ರೈತರು ಅತಿಯಾದ ರಸಗೊಬ್ಬರ ಬಳಕೆಯನ್ನು ಬಿಟ್ಟು ಸಾವಯವ ಕೃಷಿಯತ್ತ ಮುಖ ಮಾಡಿದರೆ ಉತ್ತಮ ಇಳುವರಿಯ ಜತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು.ಕೃಷಿ ಇಲಾಖೆಯ ವತಿಯಿಂದ ನೀಡುವ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಜ್ಞಾನದ ಜತೆಗೆ ವಿಜ್ಙಾನವನ್ನು ಅಳವಡಿಸಿಕೊಂಡು ವೈಜ್ಙಾನಿಕವಾಗಿ ಬೆಳೆ ಬೆಳೆಯಬೇಕು.
-ಡಾ.ಆರ್.ಎನ್. ಪುಷ್ಪಾ, ಸಹಾಯಕ ಪ್ರಾಧ್ಯಾಪಕಿ, ನಾಗನಹಳ್ಳಿ ಶಿಕ್ಷಣ ವಿಸ್ತರಣಾ ಘಟಕ.-------------
ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯುವ ಪದ್ದತಿಯನ್ನು ರೂಡಿಸಿಕೊಳ್ಳಬೇಕು.ತೋಟಗಾರಿಕಾ ಬೆಳೆಗಳಿಗೆ ಸರ್ಕಾರದ ವತಿಯಿಂದ ಸಾಕಷ್ಟು ಸಹಾಯಧನ ನೀಡಲಿದ್ದು, ಅದರ ಸದ್ಬಳಕೆ ಮಾಡಿಕೊಂಡು ನೀರನ್ನು ಮಿತವಾಗಿ ಬಳಸಿಕೊಳ್ಳಬೇಕೆಂದರಲ್ಲದೆ, ನಂಜನಗೂಡು ರಸಬಾಳೆ ಮತ್ತು ಮೈಸೂರು ವೀಳ್ಯದೆಲೆ ಬೆಳೆದರೆ ಇಲಾಖೆಯ ವತಿಯಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತೇವೆ.
- ಡಾ. ಮಂಜುನಾಥ್ ಅಂಗಡಿ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ