ಗಾಂಧಿ ಗ್ರಾಮದಲ್ಲಿ ಮರಗಳ ಕಡಿತ: ಸ್ಥಳೀಯರ ಆಕ್ರೋಶ

KannadaprabhaNewsNetwork | Published : Dec 29, 2023 1:32 AM

ಸಾರಾಂಶ

ಗುಡಿ ಕೈಗಾರಿಕೆಗಳ ನಿರ್ಮಾಣ ಅಡ್ಡಿಯಾಗಿದ್ದ ಮರಗಳ ತೆರವು, ೧೯ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿದು ಅಕ್ರಮ ಸಾಗಣೆ: ಆರೋಪ, ಸ್ಥಳಕ್ಕೆ ಭೇಟಿ ನೀಡಿದ್ದ ಮಂಡ್ಯ ವಲಯ ಅರಣ್ಯಾಧಿಕಾರಿ ಚೈತ್ರಾ ವಿರುದ್ಧವೂ ಸ್ಥಳೀಯರು ಆಕ್ರೋಶ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರದಿಂದ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ಗೆ ಮಂಜೂರಾಗಿದ್ದ ಗಾಂಧಿ ಗ್ರಾಮದ ಆವರಣದಲ್ಲಿದ್ದಂತಹ ಕೆಲವೊಂದು ಮರಗಳನ್ನು ಕಟಾವು ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.

ತಾಲೂಕಿನ ಎಚ್.ಮಲ್ಲೀಗೆರೆ ಫಾರ್ಮ್‌ನಲ್ಲಿ ಗಾಂಧಿ ಗ್ರಾಮಕ್ಕೆ ಸೇರಿರುವ ಜಾಗದಲ್ಲಿದ್ದ ಕೆಲ ಮರಗಳನ್ನು ತೆರವುಗೊಳಿಸಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಹರಿಹಾಯ್ದರು. ಮರಗಳನ್ನು ತೆರವುಗೊಳಿಸಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಟ್ರಸ್ಟ್‌ನ ಪದಾಧಿಕಾರಿಗಳು, ಗಾಂಧಿ ಗ್ರಾಮದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅಡಚಣೆಯಾಗಿದ್ದ ಕೆಲ ಮರಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಮರಗಳನ್ನು ತೆರವುಗೊಳಿಸಿರುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ಮಂಡ್ಯ ವಲಯ ಅರಣ್ಯಾಧಿಕಾರಿ ಚೈತ್ರಾ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಒಣಗಿನಿಂತಿರುವ ಮರಗಳನ್ನು ತೆರವುಗೊಳಿಸುವಂತೆ ಮನವಿ ಕೊಟ್ಟು ವರ್ಷವಾದರೂ ತೆರವುಗೊಳಿಸಿಲ್ಲ. ಇಷ್ಟೊಂದು ಮರಗಳನ್ನು ಕಡಿಯಲು ಹೇಗೆ ಅನುಮತಿ ಕೊಟ್ಟಿರಿ ಎಂದು ಹರಿಹಾಯ್ದರು. ಆಗ ಮರಗಳನ್ನು ಕಡಿಯುವುದಕ್ಕೆ ನಾವು ಇಲಾಖೆಯಿಂದ ಅನುಮತಿ ಕೊಟ್ಟಿಲ್ಲ. ವಿಚಾರ ತಿಳಿದು ಪರಿಶೀಲನೆಗೆ ಬಂದಿರುವುದಾಗಿ ಹೇಳಿದರು.

ಎಚ್.ಮಲ್ಲಿಗೆರೆ ಗ್ರಾಪಂ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಚಿಕ್ಕಮರೀಗೌಡ ವಿರುದ್ಧ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತರು. ವಲಯ ಅರಣ್ಯಾಧಿಕಾರಿ ಚೈತ್ರಾ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಕಡಿದ ಮರಗಳ ಸರ್ವೇ ಕಾರ್ಯ ನಡೆಸಿದರು.

ಗಾಂಧಿ ಗ್ರಾಮದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಅಡಚಣೆಯಾಗಿದ್ದ ಮರಗಳನ್ನು ಕಡಿಯುವುದಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಎರಡು ದಿನಗಳ ಹಿಂದೆ ಮನವಿ ಪತ್ರ ಕೊಟ್ಟಿದ್ದೇವೆ. ಅದು ಬಹುಶಃ ಆರ್‌ಎಫ್‌ಒ ಅವರಿಗೆ ತಿಳಿದಿಲ್ಲ. ಒಣಗಿದ್ದ ಮರಗಳನ್ನಷ್ಟೇ ಕಟಾವು ಮಾಡಲಾಗಿದೆ. ದುರುದ್ದೇಶದಿಂದ ಮರಗಳನ್ನು ಕಡಿದಿಲ್ಲ.

- ಮಧು ಜಿ.ಮಾದೇಗೌಡ, ಅಧ್ಯಕ್ಷರು, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್

Share this article