ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮಾರಸಿಂಗಹಳ್ಳಿಯಲ್ಲಿ ಐತಿಹಾಸಿಕ ಸಿಡಿ ಮಹೋತ್ಸವ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.

ಜ.೬ರಂದು ಆರಂಭಗೊಂಡ ಸಿಡಿ ಉತ್ಸವಕ್ಕೆ ಶುಕ್ರವಾರ ರಾತ್ರಿ ಶ್ರೀಕಾಳಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೀಸಲು ನೀರು ತಂದು, ತಮಟೆ ನಗಾರಿ ಮೇಳದಲ್ಲಿ ನಾಡಿಗೆ ಮತ್ತು ಗ್ರಾಮಕ್ಕೆ ಯಾವುದೇ ಕೆಡಕು, ಅನಾವುತಗಳಾಗದಿರಲಿ ಎಂದು ಪ್ರಾರ್ಥಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ಸವ ಪ್ರಯುಕ್ತ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಸಿಡಿ ಮಹೋತ್ಸವಕ್ಕಾಗಿ ತಮಟೆ ನಗಾರಿ ಮೇಳದಲ್ಲಿ ಮುಂಜಾನೆ ಮನೆ-ಮನೆಗಳಿಂದ ಕಳಸ-ತಂಬಿಟ್ಟು ಆರತಿಯೊಂದಿಗೆ ಶ್ರೀ ಕಾಳಲಿಂಗೇಶ್ವರ ದೇವಾಲಯದಲ್ಲಿ ಸೇರಿ ಪೂಜೆ ಸಲ್ಲಿಸಿ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮ ದೇವತೆಗಳಾದ ಶ್ರೀಬಸವೇಶ್ವರ, ಶ್ರೀಬೋರಪ್ಪ, ಶ್ರೀಮಾರಮ್ಮ ದೇವಾಲಗಳಲ್ಲಿ ಪೂಜೆ ಸಲ್ಲಿಸಿ ನಂತರ ಸಿಡಿ ಮಾಳಕ್ಕೆ ತೆರಳಿದರು.

ಸಿಡಿ ಮಾಳದಲ್ಲಿ ಸಿಡಿ ಮಹೋತ್ಸವದ ಪೂಜೆ ಸಲ್ಲಿಸಿ, ಮಳೆ-ಬೆಳೆ-ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹರಕೆಗಳನ್ನು ಸಮರ್ಪಿಸಿ, ಪ್ರಸಾದ ಸ್ವೀಕರಿಸಿ, ಸಿಡಿ ಮಹೋತ್ಸವನ್ನು ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಳಿಸಿದರು.


ಕಾರ್ಯಕ್ರಮದಲ್ಲಿ ಯಜಮಾನರಾದ ಕಾಳಪ್ಪ, ಕರಿಪುಟ್ಟಯ್ಯ, ಕೆ.ಎಸ್.ಸಿದ್ದರಾಜು, ಅರ್ಚಕ ಮಹದೇವಸ್ವಾಮಿ, ಗ್ರಾಪಂ ಮಾಜಿ ಸದಸ್ಯರಾದ ಮಹದೇವಯ್ಯ, ಸವಿತಾ, ಎಂ.ಕೆ.ಮಹದೇವಯ್ಯ, ಹಿರಿಯರಾದ ಚಂಡಿಕಾಳಯ್ಯ, ಸಿದ್ದರಾಜು, ಶ್ರೀನಿವಾಸ್, ಸಣ್ಣಯ್ಯ ಮತ್ತಿತರರಿದ್ದರು.

ಉಚಿತ ಹೋಲಿಗೆ ಯಂತ್ರ ತರಬೇತಿ ಶಿಬಿರ ಸಮಾರೋಪ

ಶ್ರೀರಂಗಪಟ್ಟಣ:

ಪಟ್ಟಣದಲ್ಲಿ ರೋಟರಿ ಸಂಸ್ಥೆ ಹಾಗೂ ಶ್ರೀರಂಗನಾಯಕಿ ಸಮಾಜ ಮತ್ತು ಕಾಮಧೇನು ಸ್ವಸಹಾಯ ಸ್ತ್ರೀ ಸಮಾಜದಿಂದ ಮೂರು ತಿಂಗಳ ಉಚಿತ ಹೋಲಿಗೆ ಯಂತ್ರ ತರಬೇತಿ ಶಿಬಿರ ಸಮಾರೋಪ ಸಮಾರಂಭ ನಡೆಯಿತು.

ರೋಟರಿ ಸಂಸ್ಥೆ ಅಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ರಾಘವೇಂದ್ರ ಮಾತನಾಡಿ, ಹೊಲಿಗ ತರಬೇತಿಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಎಂದರು.

ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ತರಬೇತಿ ಪಡೆದುಕೊಂಡರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಮಧೇನು ಸ್ವಸಹಾಯ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ರೋಟರಿ ಸಂಸ್ಥೆ ಕಾರ್ಯದರ್ಶಿ ನಾಗೇಂದ್ರ, ಸಹ ಕಾರ್ಯದರ್ಶಿ ರಾಜೇಶ್, ಖಜಾಂಚಿ ಸರಸ್ವತಿ, ನಿರ್ದೇಶಕಿ ಗಾಯಿತ್ರಿ, ನಳಿನಿ, ಗುಣಶೇಖರಿ, ತರಬೇತಿದಾರರಾದ ರೂಪ ಸಂಘದ ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಇದ್ದರು.ರಾಷ್ಟ್ರೀಯ ಆರೋಗ್ಯ ಅಭಿಯಾನ ಅರಿವು ಕಾರ್ಯಕ್ರಮ

ಮದ್ದೂರು: ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮವನ್ನು ಹಿರಿಯ ಆರೂಗ್ಯ ನಿರೀಕ್ಷಣಾಧಿಕಾರಿ ಕೆ.ಬಿ.ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗರ್ಭಿಣಿ, ಬಾಣಂತಿಯರ ಆರೋಗ್ಯ, ನವಜಾತ ಶಿಶುಗಳ ಆರೋಗ್ಯ, ಕ್ಷಯ, ಕುಷ್ಟರೋಗ, ಆಯುಸ್ಮಾನ್ ಕಾರ್ಡ್ ಉಪಯೋಗ, ಬಾಲ್ಯವಿವಾಹದ ಅಪಾಯ, ಭ್ರೂಣಹತ್ಯೆಯ ಅಪಾಯ ಇತರೆ ಕುರಿತು ಬೀದಿ ನಾಟಕದ ಮೂಲಕ ಸೌಹಾರ್ದ ಸಾಂಸ್ಕೃತಿಕ ಕಲಾಸಂಘ ಹನಿಯಂಬಾಡಿ ಕಲಾವಿದರು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಡಾ.ಧನುಷ್, ಸಮುದಾಯ ಆರೋಗ್ಯ ಅಧಿಕಾರಿ ಎಂ.ಪೂಜಾಶ್ರೀ, ಆರೋಗ್ಯ ಸಂರಕ್ಷಣಾಧಿಕಾರಿ ದಾಕ್ಷಾಯಿಣಿ, ಆಶಾ ಕಾರ್ಯಕರ್ತೆ ಮಮತಾ, ಕಲಾವಿದರಾದ ಹನಿಯಂಬಾಡಿ ಎನ್. ಶೇಖರ್, ವೈರಮುಡಿ, ರಾಮಕೃಷ್ಣ, ದೇವರಾಜ್ ಕೊಪ್ಪ, ಅನುಸೂಯ ಹೋನೇಶ್ ಇದ್ದರು. ಚನ್ನಸಂದ್ರ ಗ್ರಾಮಸ್ಥರು ಭಾಗವಹಿಸಿದ್ದರು.