ಕನ್ನಡಪ್ರಭ ವಾರ್ತೆ ಸುರಪುರ
ಆರೋಗ್ಯ ಎಂಬುವುದು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಯೋಗ ಕ್ಷೇಮದ ಸ್ಥಿತಿಯಾಗಿದ್ದು, ದೈಹಿಕ ದೌರ್ಬಲ್ಯದ ಹೆಸರಲ್ಲ. ಒಬ್ಬ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಆರೋಗ್ಯವು ಅತೀ ಅಗತ್ಯ. ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿ ಆರೋಗ್ಯದಡಿಯಲ್ಲಿ ಅಡಿಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ಹೇಳಿದರು.ನಗರದ ರಂಗಂಪೇಟೆಯಲ್ಲಿ ಜಿಲ್ಲಾಡಳಿತ ಮತ್ತು ಜಿಪಂ, ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ, ಶಿಕ್ಷಣ ಸ್ಪಂದನ ವಿಭಾಗ ಮತ್ತು ಮದರ್ ತೇರಸಾ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ತಾಲೂಕಿನಲ್ಲಿ ಆರೋಗ್ಯ ಜಾಗೃತಿ ಅಭಿಯಾನವನ್ನು ಕಲಾವಿದರ ತಂಡದ ಮೂಲಕ ಬೀದಿನಾಟಕ ಹಮ್ಮಿಕೊಂಡಿದೆ. ಆರೋಗ್ಯಕರವಾದ ಮನಸ್ಸಿದ್ದರೆ ಸದೃಢ ಆರೋಗ್ಯ ಸಾಧ್ಯ ಎಂದರು.
ಆರೋಗ್ಯವೆಂಬುವುದು ದೇವರು ನೀಡಿದ ಅನುಗ್ರಹವಾಗಿದೆ. ಆರೋಗ್ಯ ಸಂರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಅದರ ಬೆಲೆ ಅರಿತು ನಾವು ಬಾಳಬೇಕಾಗಿದೆ. ಒಮ್ಮೆ ಕ್ಷೀಣಿಸಿದ ಶರೀರವು ಪುನಃ ಪೂರ್ವ ಸ್ಥಿತಿಗೆ ಬರಲು ಬಹಳ ಶ್ರಮ ವಹಿಸಬೇಕಾಗುತ್ತದೆ. ಆದ್ದರಿಂದ ಆರೋಗ್ಯ ಕೆಡದಂತೆ ಎಚ್ಚರ ವಹಿಸಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.ಸಂಸ್ಥೆಯ ಕಲಾತಂಡದ ನಾಯಕ ಭೀಮರಾಯ ಸಿಂದಿಗೇರಿ ಮಾತನಾಡಿ, ತಾಲೂಕಿನಲ್ಲಿ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ತಪ್ಪದೇ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಸದೃಢವಾದ ದೇಹದಲ್ಲಿ ಸಬಲ ಮನಸ್ಸಿರುವಂತೆ ವ್ಯಕ್ತಿ ದೈಹಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠನಾಗಬೇಕು. ಆದ್ದರಿಂದ ಯುವ ಜನತೆಗೆ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಅಗತ್ಯವಾದ ಜಾಗೃತಿ ಹಾಗೂ ತರಬೇತಿ ಮುಂದಿನಗಳಲ್ಲಿ ಸಂಸ್ಥೆ ವತಿಯಿಂದ ನೀಡಲಾಗುತ್ತದೆ ಎಂದರು.
ತಾಲೂಕಿನ ಸುರಪುರದ ರಂಗಂಪೇಟೆ, ಕನ್ನೆಹಳ್ಳಿ, ಬಾದ್ಯಾಪುರ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ 11 ಬೀದಿ ನಾಟಕ ಪ್ರದರ್ಶಿಸಿ ಆರೋಗ್ಯ ಜಾಗೃತಿ ಮೂಡಿಸಲಾಯಿತು.ಕಲಾತಂಡದ ಸದಸ್ಯರಾದ ಶರಣಯ್ಯ ಹಿರೇಮಠ, ರಾಮಣ್ಣ, ಶಂಕಪ್ಪ ಹಿರೇಮಠ, ಮಹ್ಮದ್, ವಿರೂಪಾಕ್ಷಪ್ಪ, ಗೀತಾ, ಲಲಿತಾ ಸೇರಿ ಇತರರಿದ್ದರು.