ಕನ್ನಡಪ್ರಭ ವಾರ್ತೆ ಮಂಡ್ಯ
ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದರಿಂದ ಜಿಲ್ಲೆಯ ಪ್ರಮುಖ ರೆಸಾರ್ಟ್‌ಗಳು, ಐಷಾರಾಮಿ ಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿಹೋಗಿದ್ದವು. ಮುಂಜಾಗ್ರತೆಯಾಗಿ ಮಳವಳ್ಳಿ ತಾಲೂಕಿನ ಮುತ್ತತ್ತಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ, ಎಡಮುರಿಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇತರೆ ಕಡೆಗಳಲ್ಲೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಪ್ರವಾಸಿ ತಾಣಗಳ ಬಳಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಕಂಡುಬರಲಿಲ್ಲ. ಅದಕ್ಕಾಗಿ ಪ್ರವಾಸಿಗರು ರೆಸಾರ್ಟ್, ಐಷಾರಾಮಿ ಹೋಟೆಲ್‌ಗಳಲ್ಲಿ ಠಿಕಾಣಿ ಹೂಡಿ ಸಂಭ್ರಮಾಚರಣೆ ನಡೆಸಿದರು.
ಕ್ಲಬ್, ರೆಸಾರ್ಟ್‌ಗಳಲ್ಲಿ ವಿಶೇಷ ವ್ಯವಸ್ಥೆ:ಜಿಲ್ಲೆಯ ಹಲವು ಕ್ಲಬ್ ಹಾಗೂ ರೆಸಾರ್ಟ್‌ಗಳಲ್ಲಿ ಹೊಸ ವರ್ಷಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ತಡರಾತ್ರಿ ೧ ಗಂಟೆಯವರೆಗೂ ಮದ್ಯಪ್ರಿಯರಿಗೆ ಅವಕಾಶ ಕಲ್ಪಿಸಲಾಗಿತ್ತು. ಬೆಂಗಳೂರು-ಮೈಸೂರು ಮಾದರಿಯಲ್ಲಿ ಹೊಸ ವರ್ಷಕ್ಕೆ ಮಂಡ್ಯ ನಗರ ಅಷ್ಟೇನು ರಂಗೇರಿರಲಿಲ್ಲ. ನಗರದ ಕೆಲ ಕ್ಲಬ್‌ಗಳಲ್ಲಿ ನೂತನ ವರ್ಷಾಚರಣೆಗಾಗಿ ವಿಶೇಷ ವ್ಯವಸ್ಥೆ ಮಾಡಿದ್ದರಿಂದ ಯುವಕರು ಮಧ್ಯರಾತ್ರಿವರೆಗೂ ಮದ್ಯಗೋಷ್ಠಿ ಮಾಡಿದರು. ಸಂಗೀತ, ನೃತ್ಯ, ಹಾಡುಗಳೊಂದಿಗೆ ಹೆಜ್ಜೆ ಹಾಕುತ್ತಾ ನೂತನ ವಸಂತ ಉದಯವಾಗುವ ಸಮಯವಾಗುತ್ತಲೇ ಕುಣಿದು ಕುಪ್ಪಳಿಸಿ ನಲಿದಾಡಿದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಕೇಕೆ ಹಾಕುತ್ತಾ ಹರ್ಷೋದ್ಘಾರ ಮೊಳಗಿಸಿದರು.
ನಗರ ಹಾಗೂ ಪಟ್ಟಣದ ಜನರು ವಸಂತಾಗಮನ ಸ್ವಾಗತಕ್ಕೆ ಜನರು ಮನೆಗಳಲ್ಲೇ ಪೂರ್ವ ತಯಾರಿ ಆರಂಭಿಸಿದ್ದರು. ಬೇಕರಿಗಳಿಂದ ತಮಗಿಷ್ಟವಾದ ಕೇಕ್‌ಗಳನ್ನು ಆರಿಸಿ ತಂದು ಮನೆಯಲ್ಲಿಟ್ಟುಕೊಂಡಿದ್ದರು. ಸ್ನೇಹಿತರು, ಬಂಧು-ಬಳಗದವರೆಲ್ಲರೂ ಒಂದೆಡೆ ಸೇರಿ ವಿಧ ವಿಧವಾದ ಭಕ್ಷ್ಯ-ಭೋಜನಗಳನ್ನು ತಯಾರಿಸಿ ಊಟ ಮಾಡುವುದರೊಂದಿಗೆ ಸಂತಸ ವಿನಿಮಯ ಮಾಡಿಕೊಂಡರು. ಅಲ್ಲದೆ, ಮಧ್ಯರಾತ್ರಿ ೧೨ ಗಂಟೆಯಾಗುತ್ತಿದ್ದಂತೆ ಕೇಕ್ ಕತ್ತರಿಸಿ ಪಟಾಕಿ ಸಿಡಿಸುವ ಮೂಲಕ ಹೊಸ ವರ್ಷಕ್ಕೆ ಹರ್ಷೋದ್ಘಾರ ಮೊಳಗಿಸಿದರು. ಮಹಿಳೆಯರು ತಮಗಿಷ್ಟವಾದ ಬಣ್ಣಗಳನ್ನು ಖರೀದಿಸಿ ತಂದು ರಾತ್ರಿಯೇ ಮನೆ ಎದುರು ರಂಗೋಲಿ ಹಾಕಿ ಅಲಂಕಾರ ಮಾಡಿದರು. ರಂಗವಲ್ಲಿಯ ನೋಟ ಎಲ್ಲೆಡೆ ಆಕರ್ಷಣೀಯವಾಗಿ ಕಂಡುಬಂದಿತು.
ದೇವಾಲಯಗಳಿಗೆ ಭಕ್ತರ ದಂಡು:
ಹೊಸ ವರ್ಷದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಿಹಿ ವಿತರಣೆ ಮಾಡಿದರು. ಮಧ್ಯರಾತ್ರಿಯಿಂದಲೇ ಹೊಸ ವರ್ಷದ ಶುಭಾಶಯ ಕೋರುವ ಮೊಬೈಲ್ ಸಂದೇಶಗಳು ಎಗ್ಗಿಲ್ಲದೆ ಹರಿದಾಡಿದವು. ಸಾಮಾಜಿಕ ಜಾಲ ತಾಣಗಳ ತುಂಬೆಲ್ಲಾ ವಸಂತಾಗಮನದ ಶುಭಾಶಯ ಕೋರುವ ಸಂದೇಶಗಳೇ ಪ್ರಮುಖವಾಗಿ ಕಾಣಿಸುತ್ತಿದ್ದವು. ಹೊಸ ನಿರೀಕ್ಷೆ, ಭರವಸೆಯೊಂದಿಗೆ ಆಗಮನವಾಗಿರುವ ನೂತನ ವರ್ಷ ಎಲ್ಲರ ಬಾಳಲ್ಲೂ ಸಂಭ್ರಮ-ಸಂತಸವನ್ನು ತರಲಿ ಎಂಬ ಆಶಯ ಎಲ್ಲರಿಂದಲೂ ವ್ಯಕ್ತವಾಗುತ್ತಿದ್ದವು.