ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಸಗೊಬ್ಬರ ಕ್ಷೇತ್ರದಲ್ಲಿ “ಆತ್ಮನಿರ್ಭರ ಭಾರತ”ದತ್ತ ನಡೆದಿರುವ ಮಹತ್ವದ ಪರಿವರ್ತನೆಯನ್ನು ಸ್ಪಷ್ಟಪಡಿಸುವ ಜೊತೆಗೆ ದೇಶೀಯ ಉತ್ಪಾದನೆಗೆ ನೀಡಿರುವ ಉತ್ತೇಜನದಿಂದ, ಯೂರಿಯಾ ಉತ್ಪಾದನೆ 2014-15ರಲ್ಲಿ 225 ಲಕ್ಷ ಮೆಟ್ರಿಕ್ ಟನ್‌ನಿಂದ 2023-24ರಲ್ಲಿ ದಾಖಲೆಯ 314.07 ಲಕ್ಷ ಮೆಟ್ರಿಕ್ ಟನ್ನಿಗೆ ಏರಿಕೆಯಾಗಿದೆ, 2024-25ರಲ್ಲಿ 306.67 ಲಕ್ಷ ಮೆಟ್ರಿಕ್ ಟನ್‌ನ ಉತ್ಪಾದನೆ ಸಾಧಿಸಲಾಗಿದೆ. ಹೊಸದಾಗಿ ಆರು ಯೂರಿಯಾ ಕಾರ್ಖಾನೆಗಳನ್ನು ಪ್ರಾರಂಭಿಸುವ ಮೂಲಕ ಉತ್ಪಾದನಾ ಸಾಮರ್ಥ್ಯದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಡಿಎಪಿ ಹಾಗೂ ಎನ್‌ಪಿಕೆ ರಸಗೊಬ್ಬರಗಳ ಉತ್ಪಾದನೆಯನ್ನೂ ಬಲಪಡಿಸಲಾಗಿದೆ ಎಂದು ಕೇಂದ್ರ ಸಚಿವೆ ಮಾಹಿತಿ ನೀಡಿದ್ದಾರೆ. ಕೋವಿಡ್ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಯೂರಿಯಾ ಬೆಲೆ ಒಂದು ಚೀಲಕ್ಕೆ ಸುಮಾರು 3000 ರು. ತಲುಪಿದ್ದರೂ, ಭಾರತದಲ್ಲಿ ರೈತರಿಗೆ ಅದೇ ಯೂರಿಯಾ ಸುಮಾರು 300 ರು.ಗಳಿಗೆ ಲಭ್ಯವಾಗುವಂತೆ ಕೇಂದ್ರ ಸರ್ಕಾರದ ಕ್ರಮವನ್ನು ಉಲ್ಲೇಖಿಸಿ, ಇದು ಸರ್ಕಾರದ ರೈತಪರ ನಿಲುವಿನ ಸ್ಪಷ್ಟ ಉದಾಹರಣೆಯಾಗಿದೆ. ಜಾಗತಿಕ ಬೆಲೆ ಏರಿಕೆಗಳ ನಡುವೆಯೂ ರೈತರ ಮೇಲೆ ಭಾರ ಬೀಳದಂತೆ ಕೇಂದ್ರ ಸರ್ಕಾರ ನಿರಂತರವಾಗಿ ಬೆಂಬಲ ನೀಡುತ್ತಲೇ ಬಂದಿದೆ ಎಂದಿದ್ದಾರೆ.
ರಾಜ್ಯಗಳಿಗೆ ರಸಗೊಬ್ಬರಗಳ ಸರಬರಾಜು ಸುಗಮ: ರಸಗೊಬ್ಬರಗಳ ಸರಬರಾಜನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಬಹುಪದರ ವ್ಯವಸ್ಥೆಯನ್ನು ರೂಪಿಸಿದೆ. ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಮುಂಗಡವಾಗಿ ಬೇಡಿಕೆಯನ್ನು ಅಂದಾಜು ಮಾಡುವುದು, ತಿಂಗಳವಾರು ಸರಬರಾಜು ಯೋಜನೆ ರೂಪಿಸುವುದು, ಮತ್ತು ಇಂಟಿಗ್ರೇಟೆಡ್ ಫರ್ಟಿಲೈಸರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ನೈಜ ಸಮಯದಲ್ಲಿ ಮೇಲ್ವಿಚಾರಣೆ ನಡೆಸುವುದರಿಂದ ದೇಶದಾದ್ಯಂತ, ಕರ್ನಾಟಕ ಸೇರಿದಂತೆ, ಅಗತ್ಯಕ್ಕಿಂತ ಹೆಚ್ಚು ಲಭ್ಯತೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್‌ಫರ್ ವ್ಯವಸ್ಥೆಯ ಮೂಲಕ ಪಾರದರ್ಶಕತೆ ಹೆಚ್ಚಳವಾಗಿದ್ದು, ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ತಲುಪುವಂತೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವರು ಸಂಸದ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ. ಇದೇ ವೇಳೆ “ಮೇಡ್ ಇನ್ ಇಂಡಿಯಾ” ನ್ಯಾನೋ ಯೂರಿಯಾ ಉತ್ತೇಜನ, ಪೋಷಕಾಂಶ ಆಧಾರಿತ ಸಬ್ಸಿಡಿ (NBS) ಯೋಜನೆಯ ವಿಸ್ತರಣೆ, ಮತ್ತು ದೇಶೀಯ ಉತ್ಪಾದನೆಗೆ ನೀಡುತ್ತಿರುವ ಪ್ರೋತ್ಸಾಹವು ರಸಗೊಬ್ಬರ ಕ್ಷೇತ್ರದಲ್ಲಿ ದೀರ್ಘಕಾಲಿಕ ಸ್ವಾವಲಂಬನೆಯನ್ನು ಬಲಪಡಿಸುತ್ತಿವೆ. ಇದು ಕೃಷಿಯ ಸ್ಥಿರತೆ ಮತ್ತು ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ. ವೈ. ರಾಘವೇಂದ್ರ, ಜಾಗತಿಕ ಸಂಕಷ್ಟಗಳಿಂದ ಸರಬರಾಜು ವ್ಯವಸ್ಥೆಗಳು ಅಸ್ತವ್ಯಸ್ತವಾಗುತ್ತಿರುವ ಈ ಸಂದರ್ಭದಲ್ಲಿ, ಭಾರತ ಸರ್ಕಾರ ತನ್ನ ರೈತರನ್ನು ರಕ್ಷಿಸುವಲ್ಲಿ ದೃಢಸಂಕಲ್ಪದಿಂದ ಕಾರ್ಯನಿರ್ವಹಿಸುತ್ತಿದೆ. ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರ ಒದಗಿಸುವುದು ಕೇವಲ ಆರ್ಥಿಕ ವಿಚಾರವಲ್ಲ, ಅದು ನಮ್ಮ ರೈತರ ಮತ್ತು ದೇಶದ ಆಹಾರ ಭದ್ರತೆಗೆ ನೀಡಿರುವ ಬದ್ಧತೆ, ಆತ್ಮನಿರ್ಭರ ಭಾರತದತ್ತ ದೃಢ ಹೆಜ್ಜೆಯಾಗಿದೆ” ಎಂದು ಹೇಳಿದ್ದಾರೆ.