ಚೀಟಿ ಹೆಸರಲ್ಲಿ ಕೋಟ್ಯಂತರ ವಂಚಿಸಿ ದಂಪತಿ ಎಸ್ಕೇಪ್‌

KannadaprabhaNewsNetwork |  
Published : Jul 07, 2025, 01:33 AM ISTUpdated : Jul 07, 2025, 08:37 AM IST
money

ಸಾರಾಂಶ

ಚಿಟ್‌ ಫಂಡ್‌ ಮತ್ತು ಫೈನಾನ್ಸ್‌ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರು. ಪಡೆದು ವಂಚಿಸಿ ಪರಾರಿಯಾಗಿರುವ ಆರೋಪದಡಿ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು :  ಚಿಟ್‌ ಫಂಡ್‌ ಮತ್ತು ಫೈನಾನ್ಸ್‌ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರು. ಪಡೆದು ವಂಚಿಸಿ ಪರಾರಿಯಾಗಿರುವ ಆರೋಪದಡಿ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮೂರ್ತಿನಗರದ ಪಿ.ಟಿ.ಸ್ಯಾವಿಯೋ ಎಂಬುವರು ನೀಡಿದ ದೂರಿನ ಮೇರೆಗೆ ರಾಮಮೂರ್ತಿನಗರ 8ನೇ ಮುಖ್ಯರಸ್ತೆಯ ‘ಎ ಆ್ಯಂಡ್‌ ಎ ಚಿಟ್‌ ಫಂಡ್‌ ಮತ್ತು ಫೈನಾನ್ಸ್‌ ಸಂಸ್ಥೆ’ಯ ಮಾಲೀಕರಾದ ಎ.ವಿ.ಟಾಮಿ ಮತ್ತು ಆತನ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್‌ ಫಂಡ್‌ ಕಾಯ್ದೆ, ಬಿಎನ್‌ಎಸ್‌ ವಿವಿಧ ಕಲಂಗಳ ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?

ಪಿ.ಟಿ.ಸ್ಯಾವಿಯೋ ಅವರ ದೂರಿನ ಅನ್ವಯ, ಕೇರಳ ಮೂಲದ ಆರೋಪಿಗಳಾದ ಎ.ವಿ.ಟಾಮಿ ಮತ್ತು ಶಿನಿ ಟಾಮಿ 2005ನೇ ಸಾಲಿನಿಂದ ನಗರದ ರಾಮಮೂರ್ತಿನಗರದಲ್ಲಿ ‘ಎ ಆ್ಯಂಡ್‌ ಎ ಚಿಟ್‌ ಫಂಡ್‌ ಮತ್ತು ಫೈನಾನ್ಸ್‌ ಸಂಸ್ಥೆ’ ನಡೆಸುತ್ತಿದ್ದರು. ಅಧಿಕ ಬಡ್ಡಿ ಆಸೆ ತೋರಿಸಿ ನಾನು ಸೇರಿದಂತೆ ಹಲವರಿಂದ ಠೇವಣಿ ಮತ್ತು ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿ ಸಂಸ್ಥೆ ನಡೆಸುತ್ತಿದ್ದರು. ನಾನು ಹಾಗೂ ನನ್ನ ಕುಟುಂಬ ಈವರೆಗೆ ಸುಮಾರು 70 ಲಕ್ಷ ರು. ಹಣ ಕಟ್ಟಿದ್ದೇವೆ. ಇದೇ ರೀತಿ ಹಲವರು ಕೋಟ್ಯಂತರ ರು. ಹಣವನ್ನು ಈ ಸಂಸ್ಥೆಗೆ ಕಟ್ಟಿದ್ದಾರೆ.

ಕಚೇರಿ ಬಂದ್‌ ಮಾಡಿ ದಂಪತಿ ಎಸ್ಕೇಪ್‌:

ಇತ್ತೀಚೆಗೆ ನಾವು ಸಂಸ್ಥೆಯ ಕಚೇರಿ ಬಳಿ ಹೋಗಿ ನೋಡಿದಾಗ ಕಚೇರಿ ಬಂದ್‌ ಆಗಿರುವುದು ಗಮನಕ್ಕೆ ಬಂದಿತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಟಾಮಿ ದಂಪತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಬ್ಬರ ಮೊಬೈಲ್‌ಗಳಿಗೆ ಕರೆ ಮಾಡಿದರೆ, ಸ್ವಿಚ್ಡ್‌ ಆಫ್‌ ಬರುತ್ತಿದೆ. ಅಧಿಕ ಬಡ್ಡಿ ಆಸೆ ತೋರಿಸಿ ನಾನು ಸೇರಿದಂತೆ ಹಲವರಿಂದ ಠೇವಣಿ ಹಾಗೂ ಚೀಟಿ ರೂಪದಲ್ಲಿ ಕೋಟ್ಯಂತರ ರು. ಪಡೆದು ವಂಚಿಸಿ ಪರಾರಿಯಾಗಿರುವ ಟಾಮಿ ದಂಪತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ದೂರಿನ ಮೇರೆಗೆ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಿಸಿಬಿಗೆ ವರ್ಗಾವಣೆ?

ಟಾಮಿ ದಂಪತಿ ಸುಮಾರು ನೂರಕ್ಕೂ ಅಧಿಕ ಮಂದಿಗೆ ಸುಮಾರು 14 ಕೋಟಿ ರು. ಗೂ ಅಧಿಕ ಹಣವನ್ನು ವಂಚಿಸಿರುವ ಸಾಧ್ಯತೆಯಿದೆ. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಆರೋಪಿಗಳು ನೂರಾರು ಮಂದಿಗೆ ಕೋಟ್ಯಂತರ ರು. ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತರು ಈ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ತನಿಖೆಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

PREV
Read more Articles on

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ