ಕುಂದಾಪುರ: ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗುವ ಯೋಜನೆಗಳು ಜಾರಿಯಾಗುತ್ತಿರುವಾಗ ಮೌನವಾಗಿರುವುದಕ್ಕಿಂತ, ಅವುಗಳ ವಿರುದ್ಧ ಪ್ರಶ್ನಿಸುವ ಹಾಗೂ ಧ್ವನಿ ಎತ್ತುವ ಎದೆಗಾರಿಕೆಯನ್ನು ಜನರು ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವವೇ ಪ್ರಜಾಪ್ರಭುತ್ವದ ಜೀವಾಳ ಎಂದು ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದರು.ಕುಂದಾಪುರದ ಸಂತ ಮೇರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್), ಉಡುಪಿ ಜಿಲ್ಲಾ ಘಟಕದ 2ನೇ ಜಿಲ್ಲಾ ಸಮ್ಮೇಳನ ಹಾಗೂ ಸರ್ವ ಸದಸ್ಯರ ಸಮಾವೇಶದಲ್ಲಿ ಅವರು ಆಶಯ ಮಾತುಗಳನ್ನಾಡಿದರು.ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪ್ರಶ್ನಿಸುವ ಗುಣವನ್ನು ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ. ಆದರೆ ಮಕ್ಕಳಿಗೆ ಪ್ರಶ್ನಿಸುವುದನ್ನು ಕಲಿಸುವುದರ ಜತೆಗೆ, ಅನ್ಯಾಯ, ಅಕ್ರಮ ಹಾಗೂ ಜನವಿರೋಧಿ ಬೆಳವಣಿಗೆಗಳ ವಿರುದ್ಧ ತಾವೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಬಿಜಿವಿಎಸ್ ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.ಕರಾವಳಿ ಜಿಲ್ಲೆಗಳಲ್ಲಿ ನೆಲ-ಜಲಕ್ಕೆ ಕಂಟಕವಾಗುವ ಹಲವು ಯೋಜನೆಗಳು ನಡೆಯುತ್ತಿದ್ದರೂ ಅವುಗಳ ವಿರುದ್ಧ ಜನರು ಸಂಘಟಿತವಾಗಿ ಧ್ವನಿ ಎತ್ತದಿರುವುದು ಆತಂಕಕಾರಿ. ಎಂಡೋಸಲ್ಫಾನ್ ಬಾಧಿತರ ಬದುಕು ಇನ್ನೂ ದುಸ್ತರವಾಗಿಯೇ ಇದೆ. ಇಂತಹ ಗಂಭೀರ ಸಮಸ್ಯೆಗಳ ನಡುವೆಯೂ ಕೈಗಾರಿಕೀಕರಣ, ವ್ಯಾಪಾರೀಕರಣ ಹಾಗೂ ನಗರೀಕರಣದ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿರಂತರ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ರಾಜ್ಯ ಉಪಾಧ್ಯಕ್ಷ ಶುಭಂಕರ ಚಕ್ರವರ್ತಿ ಮಾತನಾಡಿ, ವಿಜ್ಞಾನ ಸಾಕ್ಷರತೆಯ ಉದ್ದೇಶದಿಂದ ಆರಂಭಗೊಂಡ ಬಿಜಿವಿಎಸ್, ಇಂದಿನ ಸಾಮಾಜಿಕ ಮತ್ತು ರಾಜಕೀಯ ವಾಸ್ತವಗಳಿಗೆ ಸ್ಪಂದಿಸದೆ ಮುಂದೆ ಸಾಗಲು ಸಾಧ್ಯವಿಲ್ಲ. ಖಾಸಗೀಕರಣದ ಪರಿಣಾಮಗಳು, ಸಾರ್ವಜನಿಕ ವ್ಯವಸ್ಥೆಗಳ ಮೇಲೆ ಹೆಚ್ಚುತ್ತಿರುವ ಕಾರ್ಪೋರೇಟ್ ಹಿಡಿತ, ಸಮಾಜವನ್ನು ವಿಭಜಿಸುವ ಹಾಗೂ ದ್ವೇಷದ ವಾತಾವರಣ ಸೃಷ್ಟಿಸುವ ಪ್ರಯತ್ನಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಇದರ ಜತೆಗೆ ಪರಿಸರ ಸಂರಕ್ಷಣೆ, ಶಿಕ್ಷಣದ ಹಕ್ಕು ಹಾಗೂ ವೈಜ್ಞಾನಿಕ ಮನೋಭಾವದ ಬಗ್ಗೆಯೂ ನಿರಂತರವಾಗಿ ಚರ್ಚೆ ನಡೆಸಬೇಕು ಎಂದು ಹೇಳಿದರು.
ಬಿಜಿವಿಎಸ್ ಕುಂದಾಪುರ ಘಟಕದ ಅಧ್ಯಕ್ಷೆ ಆಶಾ ಕರ್ವಾಲ್ಲೋ, ಉಡುಪಿ ತಾಲೂಕು ಘಟಕದ ಅಧ್ಯಕ್ಷ ಅನಂತರಾಮ ನಾಯಕ್, ಬ್ರಹ್ಮಾವರ ಘಟಕದ ಅಧ್ಯಕ್ಷೆ ಅಭಿಲಾಷಾ, ಜಿಲ್ಲಾ ಸಮಿತಿ ಸದಸ್ಯ ಹಾಗೂ ಚಿಂತಕ ಶ್ರೀಕುಮಾರ್ ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ್ ಪಟ್ಲ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಉದಯ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಸದಾಶಿವ ಕೆಂಚನೂರು ವಂದಿಸಿದರು.