ಗ್ರಾಮ ಅಥವಾ ದೇಶ ಅಭಿವೃದ್ಧಿಯಾಗಲು ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಮೌಲ್ಯ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯವಾಗಿದೆ.

ಕನ್ನಡಪ್ರಭ ವಾರ್ತೆ ನರೇಗಲ್ಲ

ಗ್ರಾಮ ಅಥವಾ ದೇಶ ಅಭಿವೃದ್ಧಿಯಾಗಲು ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಮೌಲ್ಯ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯವಾಗಿದೆ. ಇಂತಹ ಶಿಕ್ಷಣಕ್ಕೆ ಬೇಕಾಗುವ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯವನ್ನು ಒದಗಿಸಲು ನಾವು ಸಿದ್ಧರಿದ್ದು ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಶ್ರೀಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜ.ಮುಪ್ಪಿನ ಬಸವಲಿಂಗ ಸ್ವಾಮಿಗಳು ತಿಳಿಸಿದರು.

ಸಮೀಪದ ಹಾಲಕೆರೆ ಗ್ರಾಮದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ ಗದಗ ಹಾಗೂ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಸಹಯೋಗದಲ್ಲಿ ಹಾಲಕೆರೆ ಗ್ರಾಮದ ಆರ್‌ಎಂಎಸ್‌ಎ ಪ್ರೌಢಶಾಲೆ, ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೌಲ್ಯ ಶಿಕ್ಷಣದ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುವಂತೆ ಆಗಬೇಕು. ಅದಕ್ಕೆ ಮುಖ್ಯವಾಗಿ ವಿದ್ಯಾರ್ಥಿಗಳು ಪ್ರತಿಭಾ ಸಂಪನ್ನರಾಗಬೇಕು. ಗುಣಮಟ್ಟದ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದರು.

ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳಲ್ಲಿ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ಕುರಿತು ಪರಮಪೂಜ್ಯರು ಹೊಂದಿರುವ ಕಾಳಜಿ ಮತ್ತು ದೂರದೃಷ್ಟಿಯ ಚಿಂತನೆಗಳು ಶ್ಲಾಘನೀಯ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪರಮಪೂಜ್ಯರ ಮಾರ್ಗದರ್ಶನ ಹಾಗೂ ಸಹಕಾರ ಶಿಕ್ಷಣ ಇಲಾಖೆಗೆ ಉತ್ತಮ ಬಲವಾಗಿದೆ. ಸರ್ಕಾರ ಸಿಸಿಎಸ್ಆರ್ ಯೋಜನೆ ಮುಖಾಂತರ ಮೌಲ್ಯ ಶಿಕ್ಷಣ ನೀಡುವಲ್ಲಿ ಮುಂದಾಗಿದ್ದು ಇದಕ್ಕೆ ಮುಖ್ಯವಾಗಿ ಎಲ್ಲರ ಇಚ್ಛಾಶಕ್ತಿ ಬೇಕು. ಮಕ್ಕಳಿಗೆ ಸುಸ್ಥಿರವಾದ ಶಿಕ್ಷಣ ನೀಡುವುದರ ಜೊತೆಗೆ ಮೌಲ್ಯ ಶಿಕ್ಷಣ ನೀಡುವುದು ಇದರ ಮೂಲ ಉದ್ದೇಶ ಆಗಿದೆ ಎಂದರು.

ಮೂರು ಶಾಲೆಗಳಿಗೂ ಶ್ರೀಮಠದ ವತಿಯಿಂದ ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ವಿತರಿಸಲಾಯಿತು. ಅಲ್ಲದೆ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರೌಢಶಾಲೆಗೆ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಮೌಲ್ಯ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳು ಹಾಗೂ ಪ್ರಾತ್ಯಕ್ಷಿಕೆಗಳ ಪ್ರದರ್ಶನ ನಡೆಯಿತು.

ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂದಾನಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಎ.ಸಿ. ಪಾಟೀಲ, ಗಿರೀಶಗೌಡ ಪಾಟೀಲ, ವೀರಣ್ಣ ಹಳ್ಳಿ, ಶರಣಪ್ಪ ಬೆಟಗೇರಿ, ಅಶೋಕ ಮಾಳಗೌಡ, ಬಸವರಾಜ ಹೊನವಾಡ, ಶರಣಪ್ಪ ಕರಮುಡಿ, ಮಂಜುನಾಥ ಬುರಡಿ, ಮಹೇಶ ಕುರಿ, ಚಂದ್ರು ಮುಂದಿನಮನಿ, ಬಿ.ಸಿ. ಮೇಟಿ, ಈಶ್ವರಯ್ಯ ರುದ್ರಾಕ್ಷಿಮಠ, ರಮೇಶ ಬೈರಗೊಂಡ, ರಮೇಶ ಬನ್ನಿಗಿಡದ, ಅಂದಪ್ಪ ಕುರಿ, ದೇವೇಂದ್ರಪ್ಪ ಕಡೆಮನಿ, ಎಸ್.ಬಿ. ಸಂಕಣ್ಣವರ, ಬಿ.ಆಯ್. ಹಿರೇಹಾಳ, ಸಾವಿತ್ರಮ್ಮ ಚುಂಚಾ, ಅನ್ನಪೂರ್ಣ ಬಾರಡ್ಡಿ, ಎಸ್.ಎನ್. ಹೂಲಗೇರಿ, ಎಂ.ಬಿ. ಸಜ್ಜನರ, ಎಸ್.ಬಿ. ಬೂದಿಹಾಳ, ಎಫ್.ಎನ್. ಹುಡೇದ, ಶಿವು ಮುತ್ತಣ್ಣವರ ಸೇರಿ ಅನೇಕರು ಇದ್ದರು. ಜಗದೀಶ ನಿರೂಪಿಸಿದರು. ಶಿಕ್ಷಕ ಕಾಲವಾಡ ವಂದಿಸಿದರು.